ವಿದೇಶಿ ವಿನಿಮಯ ನಿರ್ವಹಣಾ ಕಾಯಿದೆ (ಫೆಮಾ ಕಾಯಿದೆ) ಅಡಿಯಲ್ಲಿ ಜಾರಿ ನಿರ್ದೇಶನಾಲಯ (ಇ ಡಿ) ಸಮನ್ಸ್ ನೀಡಿದ ಮಹಿಳೆಯರು ತಮ್ಮ ನಿವಾಸದಲ್ಲಿಯಷ್ಟೇ ತಮ್ಮ ಹೇಳಿಕೆ ದಾಖಲಿಸುವಂತೆ ಒತ್ತಾಯಿಸುವುದಕ್ಕಾಗಿ ಸಿಆರ್‌ಪಿಸಿ ಸೆಕ್ಷನ್ 160ರ ಮೊರೆ ಹೋಗುವಂತಿಲ್ಲ ಎಂದು ದೆಹಲಿ ಹೈಕೋರ್ಟ್ ಈಚೆಗೆ ತೀರ್ಪು ನೀಡಿದೆ [ಶ್ರೀಮತಿ ಪೂನಂ ಗಹ್ಲೋಟ್ ಮತ್ತು ಜಾರಿ ನಿರ್ದೇಶನಾಲಯ ನಡುವಣ ಪ್ರಕರಣ].
ಫೆಮಾ ಕಾಯಿದೆಯ ಸೆಕ್ಷನ್ 37ರ ಅಡಿಯಲ್ಲಿರುವ ಅಧಿಕಾರಗಳು ಸಿವಿಲ್ ಸ್ವರೂಪದ್ದಾಗಿದ್ದು, ಸಿಆರ್‌ಪಿಸಿಯಡಿ ಅಲ್ಲದೆ ಆದಾಯ ತೆರಿಗೆ ಕಾಯಿದೆಯಡಿ ಲಭ್ಯವಿರುವ ಅಧಿಕಾರಗಳಿಂದ ನಿಯಂತ್ರಿತವಾಗಿರುತ್ತವೆ ಎಂದು ನ್ಯಾಯಮೂರ್ತಿ ನೀನಾ ಬನ್ಸಾಲ್ ಕೃಷ್ಣ ಹೇಳಿದರು.
“ಆದ್ದರಿಂದ, ಕಾಯಿದೆಯ ಸೆಕ್ಷನ್ 37ರ ಅಡಿಯಲ್ಲಿ ‘ಪುರಾವೆಗಳ ಶೋಧ ಮತ್ತು ಮಂಡನೆʼಗೆ ಸಂಬಂಧಿಸಿದ ಅಧಿಕಾರಗಳು ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 131ರ ಅಯ ಅಧಿಕಾರಗಳಿಗೆ ಸಮವಾಗಿವೆ; ಇವು ಸಿವಿಲ್ ಕಾನೂನಿಗೆ ಒಳಪಟ್ಟಿರುವುದರಿಂದ, ಅರ್ಜಿದಾರರು ವಾದಿಸಿದಂತೆ ಸಿಆರ್‌ಪಿಸಿ ಸೆಕ್ಷನ್ 160 ಇಲ್ಲಿ ಅನ್ವಯವಾಗುವುದಿಲ್ಲ,” ಎಂದು ಪೀಠ ತಿಳಿಸಿದೆ.
ಕೆನಡಾ ಪ್ರಜೆಯಾದ 53 ವರ್ಷದ ಪೂನಮ್ ಗಹ್ಲೋಟ್ ಅವರು ಸಲ್ಲಿಸಿದ್ದ ಅರ್ಜಿ ತಿರಸ್ಕರಿಸುವ ಸಂದರ್ಭದಲ್ಲಿ ನ್ಯಾಯಾಲಯ ಈ ವಿಚಾರ ತಿಳಿಸಿತು. ಫೆಮಾ ತನಿಖೆಗೆ ಸಂಬಂಧಿಸಿದಂತೆ ಇ ಡಿ ಕಚೇರಿಗೆ ಖುದ್ದು ಹಾಜರಾಗುವುದರಿಂದ ವಿನಾಯಿತಿ ನೀಡುವಂತೆ ಪೂನಮ್ ಕೋರಿದ್ದರು.
ಮಹಿಳೆಯಾಗಿರುವ ಕಾರಣ, ಇ ಡಿ ಕಚೇರಿಗೆ ಬಲವಂತವಾಗಿ ಹಾಜರುಪಡಿಸುವಂತೆ ಪೂನಮ್ ಅವರನ್ನು ಒತ್ತಾಯಿಸಬಾರದು; ಅವರ ಹೇಳಿಕೆಯನ್ನು ಅವರ ನಿವಾಸದಲ್ಲಿಯೇ ದಾಖಲಿಸಬೇಕು. ಅಲ್ಲದೆ ಅವರು ಮತ್ತು ಅವರ ಕುಟುಂಬ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳನ್ನು ಈ ಹಿಂದೆ ಭೇಟಿಯಾಗಿದ್ದಾಗ ಹಿಂಸೆ ಮತ್ತು ಕಿರುಕುಳ ಅನುಭವಿಸಬೇಕಾಯಿತು ಎಂದು ಪೂನಮ್ ಪರ ವಕೀಲರು ವಾದಿಸಿದ್ದರು.
ಆದರೆ ಈ ವಾದವನ್ನು ಒಪ್ಪದ ನ್ಯಾಯಾಲಯ ಇ ಡಿಯ ತನಿಖಾಧಿಕಾರವನ್ನು ವಿವರಿಸುವ ಫೆಮಾ ಕಾಯಿದೆಯ ಸೆಕ್ಷನ್ 37 ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 131ಕ್ಕೆ ಸರಿಸಮನಾದ ಅಧಿಕಾರ ಹೊಂದಿರುತ್ತದೆ. ಸೆಕ್ಷನ್ 131 ಅಡಿಯಲ್ಲಿ ಅಧಿಕಾರಿಗಳಿಗೆ ಸಿವಿಲ್ ನ್ಯಾಯಾಲಯದಷ್ಟೇ ಅಧಿಕಾರ ಇದ್ದು ವ್ಯಕ್ತಿಗಳಿಗೆ ಸಮನ್ಸ್ ನೀಡುವುದು, ಸಾಕ್ಷ್ಯ ಒದಗಿಸುವಂತೆ ಬಲವಂತಪಡಿಸಲು ಅವಕಾಶವಿದೆ ಎಂದಿತು.
ಇದೇ ವೇಳೆ ಈ ಸೆಕ್ಷನ್‌ಗಳು ಸಿಆರ್‌ಪಿಸಿಯ ಶೋಧ ಮತ್ತು ಜಪ್ತಿ ಅಧಿಕಾರಕ್ಕಿಂತಲೂ ಭಿನ್ನವಾಗಿವೆ. ಫೆಮಾ ಕಾಯಿದೆ ಅಕ್ರಮ ಹಣ ವರ್ಗಾವಣೆ ತಡೆ ಕಾಯಿದೆಗಿಂತಲೂ (ಪಿಎಂಎಲ್‌ಎ) ಸಂಪೂರ್ಣ ಭಿನ್ನವಾಗಿದ್ದು ಫೆಮಾ ಸೆಕ್ಷನ್ 37 ಅನ್ನುಪಿಎಂಎಲ್‌ಎ ಸೆಕ್ಷನ್ 50ಕ್ಕೆ ಹೋಲಿಸಬಹುದು ಎಂಬ ಇ ಡಿ ವಾದವನ್ನು ಕೂಡ ತಿರಸ್ಕರಿಸಿದೆ.
[ತೀರ್ಪಿನ ಪ್ರತಿ]