KC Veerendra 
ಸುದ್ದಿಗಳು

ಆನ್‌ಲೈನ್‌-ಆಫ್‌ಲೈನ್‌ ಅಕ್ರಮ ಬೆಟ್ಟಿಂಗ್‌: ಶಾಸಕ ವೀರೇಂದ್ರ ಪಪ್ಪಿ ಆಗಸ್ಟ್‌ 28ರವರೆಗೆ ಇ ಡಿ ಕಸ್ಟಡಿಗೆ

ಸಿಕ್ಕಿಂನ ಗ್ಯಾಂಗ್ಟಕ್‌ನಲ್ಲಿ ಶನಿವಾರ ಬೆಳಿಗ್ಗೆ ವೀರೇಂದ್ರ ಪಪ್ಪಿ ಬಂಧಿಸಿದ್ದ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಅಲ್ಲಿನ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯದಲ್ಲಿ ಹಾಜರುಪಡಿಸಿ, ಟ್ರಾನ್ಸಿಟ್‌ ರಿಮ್ಯಾಂಡ್‌ ಪಡೆದು ಬೆಂಗಳೂರಿಗೆ ಕರೆತಂದಿದ್ದರು.

Bar & Bench

ಆನ್‌ಲೈನ್‌ ಮತ್ತು ಆಫ್‌ಲೈನ್‌ ಅಕ್ರಮ ಬೆಟ್ಟಿಂಗ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿತ್ರದುರ್ಗದ ಕಾಂಗ್ರೆಸ್‌ ಶಾಸಕ ಕೆ ಸಿ ವೀರೇಂದ್ರ ಅಲಿಯಾಸ್‌ ವೀರೇಂದ್ರ ಪಪ್ಪಿ ಅವರನ್ನು ಬೆಂಗಳೂರಿನ ಜಾರಿ ನಿರ್ದೇಶನಾಲಯದ ನ್ಯಾಯಾಲಯವು ಆಗಸ್ಟ್‌ 28ರವರೆಗೆ ಜಾರಿ ನಿರ್ದೇಶನಾಲಯದ ಕಸ್ಟಡಿಗೆ ನೀಡಿದೆ.

ಸಿಕ್ಕಿಂನ ಗ್ಯಾಂಗ್ಟಕ್‌ನಲ್ಲಿ ಶನಿವಾರ ಬೆಳಿಗ್ಗೆ ವೀರೇಂದ್ರ ಪಪ್ಪಿ ಅವರನ್ನು ಬಂಧಿಸಿದ್ದ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಅಲ್ಲಿನ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯದಲ್ಲಿ ಹಾಜರುಪಡಿಸಿ, ಟ್ರಾನ್ಸಿಟ್‌ ರಿಮ್ಯಾಂಡ್‌ ಪಡೆದು ಬೆಂಗಳೂರಿಗೆ ಕರೆತಂದು ಅಲ್ಲಿಂದ ಜಾರಿ ನಿರ್ದೇಶನಾಲಯದ ಉಸ್ತುವಾರಿ ನ್ಯಾಯಾಲಯದ ನ್ಯಾಯಾಧೀಶ ಸೈಯದ್‌ ಬಿ. ರೆಹಮಾನ್‌ ಅವರ ಗೃಹ ಕಚೇರಿಯಲ್ಲಿ ಭಾನುವಾರ ಹಾಜರುಪಡಿಸಿದರು.

ಇ ಡಿ ಪರ ವಕೀಲರು ವೀರೇಂದ್ರ ಪಪ್ಪಿ ಅವರನ್ನು 14 ದಿನ ಇ ಡಿ ಕಸ್ಟಡಿಗೆ ಕೋರಿದರು. ಇದಕ್ಕೆ ಒಪ್ಪದ ನ್ಯಾಯಾಲಯವು ಐದು ದಿನ ಕಸ್ಟಡಿಗೆ ನೀಡಿತು. ವಿಚಾರಣೆಯ ಸಂದರ್ಭದಲ್ಲಿ ವೀರೇಂದ್ರ ಪಪ್ಪಿ ಅವರ ಜೊತೆಗೆ ಅವರ ವಕೀಲರು ಭಾಗವಹಿಸಲು ನ್ಯಾಯಾಲಯ ಅನುಮತಿಸಿದೆ.

ಆಗಸ್ಟ್‌ 22 ಮತ್ತು 23ರಂದು ಜಾರಿ ನಿರ್ದೇಶನಾಲಯದ ಬೆಂಗಳೂರು ಕಚೇರಿಯ ಅಧಿಕಾರಿಗಳು ಚಿತ್ರದುರ್ಗ, ಬೆಂಗಳೂರು, ಹುಬ್ಬಳ್ಳಿ, ಜೋಧಪುರ, ಗ್ಯಾಂಗ್ಟಾಕ್‌, ಮುಂಬೈ ಮತ್ತು ಗೋವಾ ಸೇರಿದಂತೆ ದೇಶದ ವಿವಿಧ 31 ಕಡೆಗಳಲ್ಲಿ (ಪಪ್ಪಿ ಕ್ಯಾಸಿನೊ ಗೋಲ್ಡ್‌, ಓಸಿಯನ್‌ ರಿವರ್ಸ್‌ ಕ್ಯಾಸಿನೊ, ಪಪ್ಪೀಸ್‌ ಕ್ಯಾಸಿನೊ ಪ್ರೈಡ್‌, ಓಸಿಯನ್‌ 7 ಕ್ಯಾಸಿನೊ, ಬಿಗ್‌ ಡ್ಯಾಡಿ ಕ್ಯಾಸಿನೊ ಮುಂತಾದ ಕ್ಯಾಸಿನೊ ಅಡ್ಡೆಗಳಲ್ಲಿ) ಅಕ್ರಮ ಆಫ್‌ಲೈನ್‌ ಮತ್ತು ಆನ್‌ಲೈನ್‌ ಬೆಟ್ಟಿಂಗ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಶೋಧ ನಡೆಸಿದ್ದರು. ಆ ವೇಳೆ ಕಿಂಗ್‌ 567, ರಾಜ 567 ಇತ್ಯಾದಿ ಹೆಸರಿನಲ್ಲಿ ವೀರೇಂದ್ರ ಪಪ್ಪಿಯು ಹಲವು ಬೆಟ್ಟಿಂಗ್‌ ಸೈಟ್‌ಗಳನ್ನು ನಡೆಸುತ್ತಿರುವುದು ಪತ್ತೆಯಾಗಿದೆ. ವೀರೇಂದ್ರ ಪಪ್ಪಿ ಸಹೋದರ ಕೆ ಸಿ ತಿಪ್ಪೇಸ್ವಾಮಿಯು ದುಬೈನಿಂದ ಡೈಮಂಡ್‌ ಸಾಫ್ಟ್‌ಟೆಕ್‌, ಟಿಆರ್‌ಎಸ್‌ ಟೆಕ್ನಾಲಜೀಸ್‌, ಪ್ರೈಮ್‌9ಟೆಕ್ನಾಲಜೀಸ್‌ ಹೆಸರಿನ ಮೂರು ಉದ್ಯಮಗಳನ್ನು ನಡೆಸುತ್ತಿರುವುದು ಪತ್ತೆಯಾಗಿದೆ.

ಶೋಧದ ವೇಳೆ 12 ಕೋಟಿ ನಗದು, 1 ಕೋಟಿ ವಿದೇಶಿ ನೋಟು, 6 ಕೋಟಿ ಮೌಲ್ಯದ ಚಿನ್ನಾಭರಣ, 10 ಕೆಜಿ ಬೆಳ್ಳಿ ಹಾಗೂ ನಾಲ್ಕು ವಾಹನಗಳನ್ನು ಅಕ್ರಮ ಹಣ ವರ್ಗಾವಣೆ ಕಾಯಿದೆ ಅಡಿ ಜಫ್ತಿ ಮಾಡಲಾಗಿದೆ. ಇದರ ಜೊತೆಗೆ 17 ಬ್ಯಾಂಕ್‌ ಖಾತೆ ಮತ್ತು 2 ಲಾಕರ್‌ಗಳನ್ನು ಜಫ್ತಿ ಮಾಡಲಾಗಿದೆ. ಕ್ಯಾಸಿನೊ ಒಂದರ ಗುತ್ತಿಗೆ ಪಡೆಯಲು ಸಿಕ್ಕಿಂನ ಗ್ಯಾಂಗ್ಟಕ್‌ಗೆ ತೆರಳಿದ್ದ ವೀರೇಂದ್ರ ಪಪ್ಪಿಯನ್ನು ಆಗಸ್ಟ್‌ 23ರಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬಂಧಿಸಿದ್ದರು.