ಅರವಿಂದ್ ಕೇಜ್ರಿವಾಲ್, ರೌಸ್ ಅವೆನ್ಯೂ ನ್ಯಾಯಾಲಯ, ದೆಹಲಿ
ಅರವಿಂದ್ ಕೇಜ್ರಿವಾಲ್, ರೌಸ್ ಅವೆನ್ಯೂ ನ್ಯಾಯಾಲಯ, ದೆಹಲಿ ಅರವಿಂದ್ ಕೇಜ್ರಿವಾಲ್ ಚಿತ್ರ ಮೂಲ: ಫೇಸ್‌ಬುಕ್‌
ಸುದ್ದಿಗಳು

ಕೇಜ್ರಿವಾಲ್ ಇ ಡಿ ಕಸ್ಟಡಿ ಅವಧಿ ಏಪ್ರಿಲ್ 1ರವರೆಗೆ ವಿಸ್ತರಿಸಿದ ದೆಹಲಿ ನ್ಯಾಯಾಲಯ

Bar & Bench

ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಜಾರಿ ನಿರ್ದೇಶನಾಲಯದ (ಇ ಡಿ) ವಶಕ್ಕೆ ನೀಡಿರುವ ಅವಧಿಯನ್ನು ಏಪ್ರಿಲ್ 1ರವರೆಗೆ ವಿಸ್ತರಿಸಿ ದೆಹಲಿ ನ್ಯಾಯಾಲಯ ಗುರುವಾರ ಆದೇಶ ಹೊರಡಿಸಿದೆ.

ವಿಶೇಷ ನ್ಯಾಯಾಧೀಶೆ ಕಾವೇರಿ ಬವೇಜಾ ಅವರು ವಶಕ್ಕೆ ನೀಡಿರುವ ಅವಧಿ ವಿಸ್ತರಿಸಿ ಆದೇಶ ಹೊರಡಿಸಿದ್ದಾರೆ.

ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಪ್ರಮುಖ ಸಂಚುಕೋರ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಕೇಜ್ರಿವಾಲ್‌ ಅವರನ್ನು ಮಾರ್ಚ್ 21ರಂದು ಜಾರಿ ನಿರ್ದೇಶನಾಲಯ ಬಂಧಿಸಿತ್ತು.

ಬಂಧನದಿಂದ ಮಧ್ಯಂತರ ರಕ್ಷಣೆ ಕೋರಿ ಅವರು ಸಲ್ಲಿಸಿದ್ದ ಮನವಿಯನ್ನು ದೆಹಲಿ ಹೈಕೋರ್ಟ್ ತಿರಸ್ಕರಿಸಿದ ಕೆಲವೇ ಗಂಟೆಗಳಲ್ಲಿ ಅವರನ್ನು ಬಂಧಿಸಲಾಗಿತ್ತು. ಅವರ ಇ ಡಿ ಕಸ್ಟಡಿ ಅವಧಿ ಇಂದು ಮುಕ್ತಾಯಗೊಳ್ಳಲಿತ್ತು.

ಈ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯ ಕೇಜ್ರಿವಾಲ್ ಅವರನ್ನು ಇನ್ನೂ ಏಳು ದಿನಗಳ ವಶಕ್ಕೆ ನೀಡಬೇಕೆಂದು ಕೋರಿತು. ಅಂತಿಮವಾಗಿ ನ್ಯಾಯಾಲಯ ಕೇಜ್ರಿವಾಲ್‌ ಅವರನ್ನು ನಾಲ್ಕು ದಿನಗಳ ಕಾಲ ಇ ಡಿ ವಶಕ್ಕೆ ನೀಡಿತು.

ಕೇಜ್ರಿವಾಲ್‌ ಕೆಲವು ತಪ್ಪು ಹೇಳಿಕೆಗಳನ್ನು ನೀಡಿದ್ದಾರೆ. ಕೆಲ ಪಾಸ್‌ವರ್ಡ್‌ಗಳು ಆದಾಯ ತೆರಿಗೆ ರಿಟರ್ನ್‌ ಬಹಿರಂಗಕ್ಕೆ ನಿರಾಕರಣೆ ಸೇರಿದಂತೆ ಕೇಜ್ರಿವಾಲ್‌ ಇ ಡಿಯ ತನಿಖೆಗೆ ಸಹಕರಿಸುತ್ತಿಲ್ಲ. ಗೋವಾದಲ್ಲಿ ಆಮ್ ಆದ್ಮಿ ಪಕ್ಷದ ಚುನಾವಣಾ ಪ್ರಚಾರಕ್ಕೆ ಅಕ್ರಮ ಹಣ ವರ್ಗಾವಣೆ ಹಣ ಬಳಸಲಾಗಿದೆ ಎಂದು ಜಾರಿ ನಿರ್ದೇಶನಾಲಯವನ್ನು ಪ್ರತಿನಿಧಿಸಿದ್ದ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಎಸ್‌ ವಿ ರಾಜು ವಾದಿಸಿದರು.

ವಿಶೇಷವೆಂದರೆ ಕೇಜ್ರಿವಾಲ್‌ ಅವರೇ ಇಂದು ನ್ಯಾಯಾಲಯದಲ್ಲಿ ಖುದ್ದು ವಾದ ಮಂಡಿಸಿದರು. ಹಿಂದಿಯಲ್ಲಿ ನ್ಯಾಯಾಲಯವನ್ನುದ್ದೇಶಿಸಿ ಮಾತನಾಡಿದ ಅವರು "ನನ್ನನ್ನು ವಶಕ್ಕೆ ಒಪ್ಪಿಸುವಂತೆ ಜಾರಿ ನಿರ್ದೇಶನಾಲುಯ ಮಾಡುತ್ತಿರುವ ಮನವಿಯನ್ನು ನಾನು ವಿರೋಧಿಸುವುದಿಲ್ಲ. ಅವರಿಗೆ ಇಷ್ಟ ಬಂದಷ್ಟು ದಿನಗಳ ಕಾಲ ನನ್ನನ್ನು ಬಂಧಿಸಿಡಬಹುದು. ಆದರೆ ಇದೆಲ್ಲವೂ ಹಗರಣ" ಎಂದರು. ಕೇಜ್ರಿವಾಲ್ ಪರವಾಗಿ ಹಿರಿಯ ವಕೀಲ ರಮೇಶ್ ಗುಪ್ತಾ ಕೂಡ ಹಾಜರಾಗಿದ್ದರು.

ಕೇಜ್ರಿವಾಲ್ ಅವರ ವಾದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಎಎಸ್‌ಜಿ ರಾಜು , ಅವರು ಅಬಕಾರಿ ನೀತಿ ಪ್ರಕರಣದೊಂದಿಗೆ ಬಿಜೆಪಿಗೆ ನಂಟು ಕಲ್ಪಿಸುವ ಯತ್ನ ಯಾಕೆ ನಡೆಯುತ್ತಿದೆ ಎಂದರು.

ಹಾಲಿ ಮುಖ್ಯಮಂತ್ರಿಯೊಬ್ಬರನ್ನು ಬಂಧಿಸಿರುವುದು ದೇಶದ ಇತಿಹಾಸದಲ್ಲಿಯೇ ಮೊದಲು. ಹೀಗಾಗಿ ಸುಪ್ರೀಂ ಕೋರ್ಟ್‌ ಮತ್ತು ದೆಹಲಿ ಹೈಕೋರ್ಟ್‌ನಲ್ಲಿ ಅನೇಕ ಮೊಕದ್ದಮೆಗಳನ್ನು ಹೂಡಲಾಗಿದೆ.

ಬಂಧನ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ್ದ ಅರ್ಜಿಯನ್ನು ಅವರು ಈ ಹಿಂದೆ ವಾಪಸ್‌ ಪಡೆದಿದ್ದರು. ತಮ್ಮ ಬಿಡುಗಡೆ ಕೋರಿ ಮಾರ್ಚ್‌ 22ರಿಂದ ಅವರು ದೆಹಲಿ ವಿಚಾರಣಾ ನ್ಯಾಯಾಲಯದಲ್ಲಿ ಕಾನೂನು ಹೋರಾಟ ಆರಂಭಿಸಿದ್ದಾರೆ. ವಿಚಾರಣಾ ನ್ಯಾಯಾಲಯ ತಮ್ಮನ್ನು ಇ ಡಿ ವಶಕ್ಕೆ ಒಪ್ಪಿಸಿದ್ದನ್ನು ಪ್ರಶ್ನಿಸಿ ಅವರು ದೆಹಲಿ ಹೈಕೋರ್ಟ್‌ ಮೆಟ್ಟಿಲೇರಿದ್ದರು. ಆದರೆ ಯಾವುದೇ ಮಧ್ಯಂತರ ಪರಿಹಾರ ನೀಡಲು ನಿರಾಕರಿಸಿದ ದೆಹಲಿ ಹೈಕೋರ್ಟ್‌ ಏ. 2ರೊಳಗೆ ಪ್ರತಿಕ್ರಿಯೆ ನೀಡುವಂತೆ ಇ ಡಿಗೆ ಸೂಚಿಸಿದೆ.

"ಇಂದಿನ ಪರಿಸ್ಥಿತಿ ಊಹಿಸಲು ಅಸಾಧ್ಯವಾದುದಾಗಿದೆ. ಇಂದು ಯಾವುದೇ ಕಾನೂನು ನಿರ್ಬಂಧ ವಿಧಿಸುತ್ತಿಲ್ಲ" ಎಂದು ಅರ್ಜಿ ವಜಾ ವೇಳೆ ನ್ಯಾಯಾಲಯ ಮೌಖಿಕವಾಗಿ ತಿಳಿಸಿತ್ತು.