Manish sisodia, Rouse Avenue court 
ಸುದ್ದಿಗಳು

ಅಬಕಾರಿ ನೀತಿ ಹಗರಣ: ಮನೀಷ್‌ ಸಿಸೋಡಿಯಾರಿಂದ ವಿಚಾರಣೆಯ ವಿಳಂಬ ಎಂದು ಜಾಮೀನಿಗೆ ಆಕ್ಷೇಪಿಸಿದ ಇ ಡಿ

ಕಳೆದ ಕೆಲವು ವಾರಗಳಲ್ಲಿ 31 ಆರೋಪಿಗಳು 95 ಅರ್ಜಿಗಳನ್ನು ಸಲ್ಲಿಕೆ ಮಾಡಿದ್ದಾರೆ ಎಂದು ಜಾರಿ ನಿರ್ದೇಶನಾಲಯ ಆಕ್ಷೇಪಿಸಿದೆ.

Bar & Bench

ದೆಹಲಿ ಅಬಕಾರಿ ನೀತಿ ಹಗರಣದಲ್ಲಿ ಆರೋಪಿಯಾಗಿರುವ ದೆಹಲಿಯ ಮಾಜಿ ಉಪ ಮುಖ್ಯಮಂತ್ರಿ ಮನೀಷ್‌ ಸಿಸೋಡಿಯಾ ಸೇರಿದಂತೆ ಇತರೆ ಆರೋಪಿಗಳು ಉದ್ದೇಶಪೂರ್ವಕವಾಗಿ ವಿಚಾರಣೆಯನ್ನು ವಿಳಂಬಗೊಳಿಸುವಯತ್ನ ನಡೆಸುತ್ತಿದ್ದಾರೆ ಎಂದು ಜಾರಿ ನಿರ್ದೇಶನಾಲಯ ಆಕ್ಷೇಪಿಸಿದೆ.

ಸಿಸೋಡಿಯಾ ಅವರು ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆಯನ್ನು ವಿಶೇಷ ನ್ಯಾಯಾಲಯದ ನ್ಯಾಯಾಧೀಶೆ ಕಾವೇರಿ ಬವೇಜಾ ಅವರು ನಡೆಸಿದರು.

ಜಾರಿ ನಿರ್ದೇಶನಾಲಯದ ಪರವಾಗಿ ವಾದಿಸಿದ ವಿಶೇಷ ವಕೀಲೆ ಜೋಹೆಬ್‌ ಹುಸೇನ್‌ ಕಳೆದ ಕೆಲವು ವಾರಗಳಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ 31 ಆರೋಪಿಗಳು 95 ಅರ್ಜಿಗಳನ್ನು ಸಲ್ಲಿಕೆ ಮಾಡಿದ್ದಾರೆ ಎಂದು ಆಕ್ಷೇಪಿಸಿದರು.

“ಪ್ರಕರಣದಲ್ಲಿ ತಡವೇನಾದರೂ ಆಗಿದ್ದರೆ ಆರೋಪಿಗಳ ಕಡೆಯಿಂದಲೇ ವಿನಾ ಪ್ರಾಸಿಕ್ಯೂಷನ್‌ ಕಡೆಯಿಂದಲ್ಲ. ಇದನ್ನು ಪರಿಗಣಿಸಬೇಕು. ಆರೋಪಿತರು ಒಟ್ಟಾರೆ 95ರ ಅರ್ಜಿಗಳನ್ನು ಸಲ್ಲಿಕೆ ಮಾಡಿದ್ದಾರೆ. ಕೆಲವು ಅರ್ಜಿಗಳಲ್ಲಿ ಒಂದೇ ತೆರನಾದ ಕೋರಿಕೆ ಇದೆ. ಸಿಸೋಡಿಯಾ ಅವರು ಆರು ಅರ್ಜಿಗಳನ್ನು ಸಲ್ಲಿಕೆ ಮಾಡಿದ್ದಾರೆ… ಇಂಥ ಕ್ಷುಲ್ಲಕ ಅರ್ಜಿಗಳನ್ನು ಸಲ್ಲಿಕೆ ಮಾಡಲಾಗಿದ್ದು, ಇವು ಕಾಲ ವಿಳಂಬವಾಗುವುದರಲ್ಲಿ ಪ್ರಮುಖ ಪಾತ್ರವಹಿಸುತ್ತವೆ” ಎಂದರು.

ಪ್ರತಿ ಹಂತದಲ್ಲೂ ಪ್ರಾಸಿಕ್ಯೂಷನ್‌ ಕಡೆಯಿಂದ ಸಹಕಾರ ನೀಡಲಾಗಿದೆ… ಆದಾಗ್ಯೂ, ಉದ್ದೇಶಪೂರ್ವಕವಾಗಿ ವಿಚಾರಣೆ ತಡೆ ಮಾಡಲಾಗುತ್ತಿದೆ.., ಕಳೆದ ಒಂದು ತಿಂಗಳಲ್ಲಿ ದಾಖಲೆಗಳ ಪರಿಶೀಲನಾ ಕೆಲಸವು ಅತ್ಯಂತ ವಿಳಂಬದ ಹಾದಿಯಲ್ಲಿ ಸಾಗಿದೆ ಎಂದು ಅವರು ವಿವರಿಸಿದರು. ಕಳೆದ ವರ್ಷದ ಫೆಬ್ರವರಿಯಿಂದ ಸಿಸೋಡಿಯಾ ಅವರು ಕಸ್ಟಡಿಯಲ್ಲಿದ್ದಾರೆ.