ED and Karnataka HC 
ಸುದ್ದಿಗಳು

ಪಿಎಂಎಲ್‌ ಪ್ರಕರಣ: 21 ಮಂದಿಯ ಆಧಾರ್‌ ದತ್ತಾಂಶ ಪರಿಶೀಲಿಸಲು ಅನುಮತಿ ಕೋರಿ ಹೈಕೋರ್ಟ್‌ ಕದತಟ್ಟಿದ ಜಾರಿ ನಿರ್ದೇಶನಾಲಯ

ಆಧಾರ್‌ ಕಾಯಿದೆ ಸೆಕ್ಷನ್‌ 33ರ ಅಡಿ 21 ಆರೋಪಿಗಳ ಗುರುತಿನ ಮಾಹಿತಿ ಮತ್ತು ದಾಖಲೆಗಳ ಖಾತರಿ ದತ್ತಾಂಶ ಪರಿಶೀಲಿಸಲು ಅನುಮತಿಸಬೇಕು ಎಂದು ಜಾರಿ ನಿರ್ದೇಶನಾಲಯ ಕೋರಿದೆ.

Bar & Bench

ಹಣ ಅಕ್ರಮ ವರ್ಗಾವಣೆ ಕಾಯಿದೆ 2016ರ ಅಡಿ 21 ಮಂದಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಅವರ ಆಧಾರ್‌ ದತ್ತಾಂಶ ಪರಿಶೀಲಿಸಲು ಅನುಮತಿಸುವಂತೆ ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರಕ್ಕೆ (ಯುಐಡಿಎಐ) ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಕರ್ನಾಟಕ ಹೈಕೋರ್ಟ್‌ ಶುಕ್ರವಾರ ನಡೆಸಲಿದೆ.

ಆಧಾರ್‌ ಕಾಯಿದೆ ಸೆಕ್ಷನ್‌ 33ರ ಅಡಿ 21 ಆರೋಪಿಗಳ ಗುರುತಿನ ಮಾಹಿತಿ ಮತ್ತು ದಾಖಲೆಗಳ ಖಾತರಿ ದತ್ತಾಂಶ ಪರಿಶೀಲಿಸಲು ಅನುಮತಿಸಬೇಕು ಎಂದು ಜಾರಿ ನಿರ್ದೇಶನಾಲಯ ಕೋರಿದೆ. ಈ ಅರ್ಜಿಯ ವಿಚಾರಣೆಯನ್ನು ಬುಧವಾರ ನ್ಯಾಯಮೂರ್ತಿ ಹೇಮಂತ್‌ ಚಂದನ್‌ಗೌಡರ್‌ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

ಕಚೇರಿ ಆಕ್ಷೇಪಣೆಗಳನ್ನು ಸರಿಪಡಿಸುವಂತೆ ಸೂಚಿಸಿರುವ ನ್ಯಾಯಾಲಯವು ಅರ್ಜಿಯ ವಿಚಾರಣೆಯನ್ನು ನವೆಂಬರ್‌ 15ಕ್ಕೆ ನಿಗದಿಪಡಿಸಿದೆ.

ಜಾರಿ ನಿರ್ದೇಶನಾಲಯವು 21 ಆರೋಪಿಗಳ ಆಧಾರ್‌ ಸಂಖ್ಯೆಯನ್ನು ಉಲ್ಲೇಖಿಸಿದ್ದು, ಹೆಸರು, ವಿಳಾಸ, ಫೋಟೊ, ಜನ್ಮ ದಿನಾಂಕ ಇತ್ಯಾದಿ ಮಾಹಿತಿಯನ್ನು ಹಂಚಿಕೊಳ್ಳಲು ಯುಐಡಿಎಐಗೆ ನಿರ್ದೇಶಿಸಬೇಕು ಎಂದು ಕೋರಿದೆ.

ಧಾರವಾಡದಲ್ಲಿ ರಾಜ್ಯದಲ್ಲಿ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿಯು (ಕೆಐಎಡಿಬಿ) ಸ್ವಾಧೀನಪಡಿಸಿಕೊಂಡಿದ್ದ ಭೂಮಿಗೆ ಪರಿಹಾರ ವಿತರಿಸಲಾಗಿತ್ತು. ಆದರೆ, 21 ಮಂದಿ ನಕಲಿ ದಾಖಲೆ ಸೃಷ್ಟಿಸಿ ಮತ್ತೆ ಪರಿಹಾರ ಪಡೆಯಲು ಪ್ರಯತ್ನ ಮಾಡಿದ್ದ ಸಂಬಂಧ ಜಾರಿ ನಿರ್ದೇಶನಾಲಯ ಪ್ರಕರಣ ದಾಖಲಿಸಿದೆ.