ED, Vijay Mallya, Nirav Modi, Mehul Choksi 
ಸುದ್ದಿಗಳು

ಇ.ಡಿಯಿಂದ ಮಲ್ಯ, ಮೋದಿ, ಚೋಕ್ಸಿಯ ₹18 ಸಾವಿರ ಕೋಟಿ ಮೌಲ್ಯದ ಆಸ್ತಿ ವಶ: ಕೇಂದ್ರ, ಬ್ಯಾಂಕ್‌ಗಳಿಗೆ ಭಾಗಶಃ ವರ್ಗಾವಣೆ

ಜಾರಿ ನಿರ್ದೇಶನಾಲಯ ವಶಕ್ಕೆ ಪಡೆದ ಬಳಿಕ ಎಸ್‌ಬಿಐ ನೇತೃತ್ವದ ಬ್ಯಾಂಕ್‌ಗಳ ಒಕ್ಕೂಟಕ್ಕೆ ವರ್ಗಾವಣೆ ಮಾಡಿದ್ದ ಯುನೈಟೆಡ್‌ ಬ್ರೀವರಿಸ್‌ ಲಿಮಿಟೆಡ್‌ಗೆ ಸೇರಿದ ರೂ. 5824.50 ಕೋಟಿ ಮೌಲ್ಯದ ಷೇರುಗಳನ್ನು ಮುಂಬೈನ ಡಿಆರ್‌ಟಿ ಮಾರಾಟ ಮಾಡಿದೆ.

Bar & Bench

ತಮ್ಮ ಒಡೆತನದ ಕಂಪೆನಿಗಳ ಮೂಲಕ ಸಾರ್ವಜನಿಕ ಕ್ಷೇತ್ರದ ಬ್ಯಾಂಕ್‌ಗಳಿಗೆ ರೂ. 22 ಸಾವಿರ ಕೋಟಿ ನಷ್ಟ ಉಂಟು ಮಾಡಿ, ಅಕ್ರಮ ಹಣ ವರ್ಗಾವಣೆ ಕಾಯಿದೆ (ಪಿಎಂಎಲ್‌ಎ) ಅಡಿ ಆರೋಪಿಗಳಾಗಿರುವ ದೇಶಭ್ರಷ್ಟ ಉದ್ಯಮಿಗಳಾದ ವಿಜಯ್‌ ಮಲ್ಯ, ನೀರವ್‌ ಮೋದಿ ಮತ್ತು ಮೆಹುಲ್‌ ಚೋಕ್ಸಿ ಅವರಿಗೆ ಸೇರಿದ ಆಸ್ತಿಗಳನ್ನು ಜಾರಿ ನಿರ್ದೇಶನಾಲಯವು (ಇ.ಡಿ) ವಶಕ್ಕೆ ಪಡೆದಿದೆ.

ಆರೋಪಿಗಳು ಬ್ಯಾಂಕ್‌ಗಳಿಗೆ ರೂ. 22,585.83 ಕೋಟಿ ನಷ್ಟ ಉಂಟು ಮಾಡಿದ್ದು, ಈ ಪೈಕಿ ಇ.ಡಿ ವಶಪಡಿಸಿಕೊಂಡಿರುವ ಆಸ್ತಿಗಳ ಮೌಲ್ಯವು ರೂ. 18,170.02 ಕೋಟಿಯಾಗಿದ್ದು, ಬ್ಯಾಂಕ್‌ಗಳು ಅನುಭವಿಸಿದ ನಷ್ಟದ ಶೇ. 80ರಷ್ಟಾಗಿದೆ ಎಂದು ಇ.ಡಿ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ.

ವಶಪಡಿಸಿಕೊಳ್ಳಲಾದ ಆಸ್ತಿಯಲ್ಲಿ ರೂ. 9,371.17 ಕೋಟಿಯಷ್ಟನ್ನು ಕೇಂದ್ರ ಸರ್ಕಾರ ಮತ್ತು ಸಾರ್ವಜನಿಕ ಕ್ಷೇತ್ರದ ಬ್ಯಾಂಕ್‌ಗಳಿಗೆ ವರ್ಗಾವಣೆ ಮಾಡಲಾಗಿದೆ ಎಂದು ಜಾರಿ ನಿರ್ದೇಶನಾಲಯ ತಿಳಿಸಿದೆ. ಮುಂಬೈನ ವಿಶೇಷ ಪಿಎಂಎಲ್‌ಎ ನ್ಯಾಯಾಲಯದ ಆದೇಶದ ಅನುಸಾರ ಜಾರಿ ನಿರ್ದೇಶನಾಲಯ ವಶಪಡಿಸಿಕೊಂಡಿದ್ದ ನಿರ್ದಿಷ್ಟ ಪಾಲನ್ನು ಭಾರತೀಯ ಸ್ಟೇಟ್‌ ಬ್ಯಾಂಕ್‌ ನೇತೃತ್ವದ ಒಕ್ಕೂಟಕ್ಕೆ ವರ್ಗಾವಣೆ ಮಾಡಲಾಗಿದೆ.

ಯುನೈಟೆಡ್‌ ಬ್ರೀವರೀಸ್‌ ಲಿಮಿಟೆಡ್‌ಗೆ ಸೇರಿದ ರೂ. 5824.50 ಕೋಟಿ ಷೇರುಗಳನ್ನು ಬುಧವಾರ ಮುಂಬೈನ ಸಾಲ ವಸೂಲಾತಿ ನ್ಯಾಯಾಧಿಕರಣ ಮಾರಾಟ ಮಾಡಿದೆ. ಜೂನ್‌ 25ರಂದು ರೂ. 800 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಲಾಗುವುದು ಎಂದು ಇ.ಡಿ ಹೇಳಿದೆ.

ಹಿಂದೆ ಸಾರ್ವಜನಿಕ ಕ್ಷೇತ್ರದ ಬ್ಯಾಂಕ್‌ಗಳು ಷೇರು ವಿಕ್ರಯ ಮಾಡಿ ರೂ. 1,357 ಕೋಟಿ ವಾಪಸ್‌ ಪಡೆದಿದ್ದವು. ಇ.ಡಿ ವಶಕ್ಕೆ ಪಡೆದಿರುವ ಭಾಗಶಃ ಆಸ್ತಿಯನ್ನು ಮಾರಾಟ ಮಾಡಿ ವಾರಾಂತ್ಯದ ವೇಳೆಗೆ ರೂ. 7,981.5 ಕೋಟಿ ಸಂಗ್ರಹಿಸುವ ಭರವಸೆ ಹೊಂದಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಸದ್ಯ ನಿಷ್ಕ್ರಿಯವಾಗಿರುವ ಕಿಂಗ್‌ಫಿಶರ್‌ ಏರ್‌ಲೈನ್ಸ್‌ ಭಾಗಿಯಾಗಿರುವ ರೂ. 9,000 ಕೋಟಿ ಸಾಲದ ಹಗರಣದಲ್ಲಿ ವಿಜಯ್‌ ಮಲ್ಯ ಆರೋಪಿಯಾಗಿದ್ದಾರೆ. ಮೋದಿ ಮತ್ತು ಅವರ ಸಂಬಂಧಿ ಚೋಕ್ಸಿ ರೂ. 14,500 ಕೋಟಿ ಮೌಲ್ಯದ ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ ಹಗರಣದಲ್ಲಿ ಭಾಗಿಯಾಗಿದ್ದಾರೆ. ಮಲ್ಯ ಮತ್ತು ಮೋದಿ ಅವರನ್ನು ದೇಶಭ್ರಷ್ಟ ಆರ್ಥಿಕ ಅಪರಾಧಿಗಳು ಎಂದು ಘೋಷಿಸಲಾಗಿದೆ.

ಆರೋಪಿಗಳ ವಿರುದ್ಧ ಸಿಬಿಐ ಎಫ್‌ಐಆರ್‌ ದಾಖಲಿಸಿದ ಬೆನ್ನಿಗೇ ಇ.ಡಿಯು ದೇಶ ಮತ್ತು ವಿದೇಶದಲ್ಲಿ ಅವರು ಹೊಂದಿರುವ ಆಸ್ತಿ ಮತ್ತು ಹಣ ವರ್ಗಾವಣೆಯ ಕುರಿತು ಕ್ರಮಕೈಗೊಂಡಿತ್ತು. ವಿದೇಶದಲ್ಲಿ ಹೊಂದಿರುವ ರೂ. 969 ಕೋಟಿ ಮೌಲ್ಯದ ಆಸ್ತಿ ವಶಪಡಿಸಿಕೊಳ್ಳುವ ನಿಟ್ಟಿನಲ್ಲಿ ಇ.ಡಿ ತಕ್ಷಣ ಕ್ರಮಕೈಗೊಂಡಿತ್ತು. ಆರೋಪಿಗಳು ನಕಲಿ ಸಂಸ್ಥೆ/ಟ್ರಸ್ಟ್‌ಗಳನ್ನು ಹುಟ್ಟು ಹಾಕಿ, ಬ್ಯಾಂಕ್‌ಗಳಿಂದ ಪಡೆದ ಹಣವನ್ನು ಅವುಗಳಲ್ಲಿ ತೊಡಗಿಸುತ್ತಿದ್ದರು ಎಂಬ ಅಂಶ ತನಿಖೆಯ ಸಂದರ್ಭದಲ್ಲಿ ಸಾಬೀತಾಗಿತ್ತು. ಬಳಿಕ ಮೂವರ ವಿರುದ್ಧ ದೂರು ದಾಖಲಿಸಲಾಗಿತ್ತು.

ಇಂಗ್ಲೆಂಡ್‌ನಿಂದ ಮಲ್ಯ ಮತ್ತು ಮೋದಿಯನ್ನು ಮತ್ತು ಆಂಟಿಗುವಾ ಮತ್ತು ಬಾರ್ಬುಡಾದಿಂದ ಚೋಕ್ಸಿಯನ್ನು ಭಾರತಕ್ಕೆ ಹಸ್ತಾಂತರಿಸುವ ಸಂಬಂಧ ಅಲ್ಲಿನ ನ್ಯಾಯಾಲಯಕ್ಕೆ ಮನವಿ ಮಾಡಲಾಗಿತ್ತು. ಹೀಗಾಗಿ, ಮಲ್ಯ ಮತ್ತು ಮೋದಿಯನ್ನು ಭಾರತಕ್ಕೆ ಹಸ್ತಾಂತರಿಸುವಂತೆ ವೆಸ್ಟ್‌ಮಿನಿಸ್ಟರ್‌ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯ ಆದೇಶಿಸಿತ್ತು.