ಸುದ್ದಿಗಳು

ಕೇರ್ ಹೆಲ್ತ್ ಇಎಸ್ಒಪಿ ತನಿಖೆ: ಹಿರಿಯ ವಕೀಲ ದಾತಾರ್ ಅವರಿಗೆ ನೀಡಲಾಗಿದ್ದ ಸಮನ್ಸ್ ಹಿಂಪಡೆದ ಇ ಡಿ

ತನಿಖೆಗೆ ಒಳಪಟ್ಟಿರುವ ಇಎಸ್ಒಪಿ ಅನುದಾನ ಬೆಂಬಲಿಸಿ ದಾತಾರ್ ನೀಡಿದ್ದ ಕಾನೂನು ಅಭಿಪ್ರಾಯಕ್ಕೆ ಸಂಬಂಧಿಸಿದಂತೆ ಸಮನ್ಸ್ ನೀಡಲಾಗಿತ್ತು.

Bar & Bench

ರಿಲಿಗೇರ್ ಎಂಟರ್‌ಪ್ರೈಸಸ್‌ನ ಮಾಜಿ ಅಧ್ಯಕ್ಷೆ ರಶ್ಮಿ ಸಳುಜಾ ಅವರಿಗೆ ಕೇರ್ ಹೆಲ್ತ್ ಇನ್ಶುರೆನ್ಸ್ ನೀಡಿದ್ದ ನೌಕರರ ಷೇರು ಆಯ್ಕೆ ಯೋಜನೆ (ಇಎಸ್‌ಒಪಿ) ಕುರಿತ ತನಿಖೆಗೆ ಸಂಬಂಧಿಸಿದಂತೆ ಹಿರಿಯ ವಕೀಲ ಅರವಿಂದ್ ದಾತಾರ್ ಅವರಿಗೆ ತಾನು ನೀಡಿದ್ದ ಸಮನ್ಸ್‌ ನೋಟಿಸನ್ನು ಜಾರಿ ನಿರ್ದೇಶನಾಲಯ (ಇ ಡಿ) ಹಿಂಪಡೆದಿದೆ.

ಸಹಾರಾ ನಿಧಿಸಂಗ್ರಹ ಪ್ರಕರಣ ಸೇರಿದಂತೆ ಮಹತ್ವದ ಪ್ರಕರಣಗಳಲ್ಲಿ ಸೆಬಿಯ ಪರವಾಗಿ ವಾದ ಮಂಡಿಸುವ ದಾತಾರ್ ಅವರು, ತಮ್ಮ ಕಕ್ಷಿದಾರರನ್ನು ಒಳಗೊಂಡ ತನಿಖೆಗಳಿಗೆ ವಕೀಲರನ್ನು ಕರೆಸುವಂತಿಲ್ಲ ಎಂದು ಇ ಡಿ ಅಧಿಕಾರಿಗಳಿಗೆ ತಿಳಿಸಿದ್ದರು ಎಂಬುದಾಗಿ ವರದಿಯಾಗಿದೆ. ತಮಗೆ ವೃತ್ತಿಪರ ಸವಲತ್ತುಗಳು ಇದ್ದು ವಕೀಲರು ತಮ್ಮ ಕಕ್ಷಿದಾರರಿಗೆ ನೀಡಲಾದ ಕಾನೂನು ಸಲಹೆ  ಬಹಿರಂಗಪಡಿಸುವುದನ್ನು ನಿಷೇಧಿಸಲಾಗಿದೆ ಎಂದು ಅವರು ಹೇಳಿದ್ದರು.

ತನಿಖೆಗೆ ಒಳಪಟ್ಟಿರುವ ಇಎಸ್ಒಪಿ ಅನುದಾನ  ಬೆಂಬಲಿಸಿ ದಾತಾರ್ ನೀಡಿದ್ದ ಕಾನೂನು ಅಭಿಪ್ರಾಯಕ್ಕೆ ಸಂಬಂಧಿಸಿದಂತೆ ಸಮನ್ಸ್  ನೀಡಲಾಗಿತ್ತು.ಆದರೆ ಈಗ ದಾತಾರ್‌ ತನಿಖೆಗೆ ಹಾಜರಾಗುವ ಅಗತ್ಯವಿಲ್ಲ ಎಂದು ತಿಳಿಸಿರುವ ಇ ಡಿ ಸಮನ್ಸ್‌ ನೋಟಿಸ್‌ ಹಿಂಪಡೆದಿದೆ.

ರೆಲಿಗೇರ್ ಎಂಟರ್‌ಪ್ರೈಸಸ್‌ನ ಸಂಪೂರ್ಣ ಒಡೆತನದ ಅಂಗಸಂಸ್ಥೆಯಾದ ಕೇರ್ ಹೆಲ್ತ್‌ನಿಂದ  ₹250 ಕೋಟಿಗಿಂತ ಹೆಚ್ಚು ಮೌಲ್ಯದ 22.7 ಕೋಟಿಗಿಂತಲೂ ಹೆಚ್ಚು ಷೇರುಗಳನ್ನು ಸಳುಜಾ ಅವರಿಗೆ ನೀಡಲಾಗಿತ್ತು. ಆದರೆ ನಿಯಮ ಮೀರಿ ಅವರಿಗೆ ಇದನ್ನು ನೀಡಲಾಗಿದೆ ಎಂದು 2023ರಲ್ಲಿ, ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಐಆರ್‌ಡಿಎಐ) ದೂರಿತ್ತು. ಇಎಸ್ಒಪಿ ನೀಡಿಕೆಯ ಕಾನೂನು ಮತ್ತು ರಚನಾತ್ಮಕ ಆಧಾರದ ಬಗ್ಗೆ ವ್ಯಾಪಕ ವಿಚಾರಣೆಯ ಭಾಗವಾಗಿ ದಾತಾರ್‌ ಅವರಿಗೆ ಸಮನ್ಸ್‌ ನೀಡಲಾಗಿತ್ತು.