CJI NV Ramana 
ಸುದ್ದಿಗಳು

ವಿಧೇಯ ನೌಕರವರ್ಗ ಮಾತ್ರವೇ ಸೃಷ್ಟಿಸುತ್ತಿರುವ ಶಿಕ್ಷಣ ಪದ್ಧತಿ; ಮಾನವಿಕ, ವಿಜ್ಞಾನ ವಿಷಯಗಳ ನಿರ್ಲಕ್ಷ್ಯ: ಸಿಜೆಐ ರಮಣ

ಇಂದು ಶಿಕ್ಷಣ ನೀಡುವ 'ಕೈಗಾರಿಕೆಗಳು' ಅಣಬೆಯಂತೆ ತಲೆ ಎತ್ತುತ್ತಿರುವುದನ್ನು ನೋಡುತ್ತಿದ್ದೇವೆ. ಇದು ನಮ್ಮ ಮಾನವ ಸಂಪನ್ಮೂಲ ಹಾಗೂ ಪದವಿಗಳ ಮೌಲ್ಯಕುಸಿಯಲು ಕಾರಣವಾಗಿದೆ ಎಂದ ಸಿಜೆಐ.

Bar & Bench

ಕೇವಲ ಹೆಚ್ಚು ಸಂಭಾವನೆಯ ಉದ್ಯೋಗಾವಕಾಶಗಳನ್ನು ಗಳಿಸುವುದನ್ನೇ ಕೇಂದ್ರವಾಗಿರಿಸಿಕೊಂಡಿರುವ ಶಿಕ್ಷಣ ವ್ಯವಸ್ಥೆಯ ಬಗ್ಗೆ ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಎನ್‌ ವಿ ರಮಣ ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ತೆಲಂಗಾಣದ ಆಚಾರ್ಯ ನಾಗಾರ್ಜುನ ವಿಶ್ವವಿದ್ಯಾಲಯ ಘಟಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು. ವಿಶ್ವವಿದ್ಯಾಲಯವು ಸಿಜೆಐ ಅವರಿಗೆ ಇದೇ ವೇಳೆ ಗೌರವ ಡಾಕ್ಟರೇಟ್‌ ಪ್ರದಾನ ಮಾಡಿತು.

ಭಾರತದ ಪ್ರಸಕ್ತ ಶಿಕ್ಷಣ ವ್ಯವಸ್ಥೆಯ ನ್ಯೂನತೆಗಳು, ಸವಾಲುಗಳ ಬಗ್ಗೆ ಸಿಜೆಐ ಅವರು ಬೆಳಕು ಚೆಲ್ಲಿದರು. "ಪ್ರಸಕ್ತ ತಲೆಮಾರು ಆಯ್ಕೆಮಾಡಿಕೊಳ್ಳುತ್ತಿರುವ ಶಿಕ್ಷಣ ವ್ಯವಸ್ಥೆಯನ್ನು ನಾನು ಗಮನಿಸುತ್ತಿದ್ದೇನೆ. ಶಿಕ್ಷಣ ಸಂಸ್ಥೆಗಳು ತಮ್ಮ ಸಾಮಾಜಿಕ ಪ್ರಸ್ತುತತೆಯನ್ನು ಕಳೆದುಕೊಳ್ಳುತ್ತಿವೆ. ಶಿಕ್ಷಣ ನೀಡುವ 'ಕೈಗಾರಿಕೆಗಳು' ಅಣಬೆಯಂತೆ ತಲೆ ಎತ್ತುತ್ತಿರುವುದನ್ನು ನಾವು ಇಂದು ನೋಡುತ್ತಿದ್ದೇವೆ. ಇದು ನಮ್ಮ ಮಾನವ ಸಂಪನ್ಮೂಲ ಹಾಗೂ ಪದವಿಗಳ ಮೌಲ್ಯಕುಸಿಯಲು ಕಾರಣವಾಗಿದೆ. ಇದಕ್ಕೆ ಯಾರನ್ನು ಅಥವಾ ಏನನ್ನು ದೂಷಿಸಬೇಕು ಎನ್ನುವುದು ನನಗೆ ತಿಳಿಯುತ್ತಿಲ್ಲ," ಎಂದು ಅವರು ವಿಷಾದಿಸಿದರು.

ಇದೇ ವೇಳೆ ಅವರು ಮಾನವಿಕ ಶಾಸ್ತ್ರ ಹಾಗೂ ನೈಸರ್ಗಿಕ ವಿಜ್ಞಾನಗಳ ಅಧ್ಯಯನಕ್ಕೆ ಸಂಬಂಧಿಸಿದಂತೆ ಕಂಡು ಬರುತ್ತಿರುವ ತಿರಸ್ಕಾರದ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಸಮಾನ ಶಿಕ್ಷಣಾವಕಾಶಗಳ ಬಗ್ಗೆ ಸುಪ್ರೀಂಕೋರ್ಟ್‌ ಶಿಕ್ಷಣ ಹಕ್ಕಿನ ಹಿನ್ನೆಲೆಯಲ್ಲಿ ವ್ಯಾಖ್ಯಾನಿಸಿದ್ದರೂ ಸಹ ಕೇವಲ ವಿಧೇಯ ನೌಕರವರ್ಗವನ್ನು ಸೃಷ್ಟಿಸುವ ವೃತ್ತಿ ಶಿಕ್ಷಣಗಳೆಡೆಗೆ ಮಾತ್ರವೇ ಗಮನ ಹರಿಸುತ್ತಿರುವ ಬಗ್ಗೆ ಅವರು ಬೇಸರಿಸಿದರು.

"ಬೇರಾವುದೇ ವಿಷಯದಷ್ಟೇ ಮಹತ್ವವಾದ ಮಾನವಿಕ ಶಾಸ್ತ್ರ, ನೈಸರ್ಗಿಕ ವಿಜ್ಞಾನಗಳು, ಇತಿಹಾಸ, ಆರ್ಥಶಾಸ್ತ್ರ ಮತ್ತು ಭಾಷಾ ವಿಷಯಗಳ ಬಗ್ಗೆ ದಿವ್ಯ ನಿರ್ಲಕ್ಷ್ಯವಿದೆ. ವೃತ್ತಿಪರ ವಿಶ್ವವಿದ್ಯಾಲಯಗಳಿಗೆ ವಿದ್ಯಾರ್ಥಿಗಳು ಸೇರ್ಪಡೆಗೊಂಡ ನಂತರವೂ ತರಗತಿಯೊಳಗಿನ ಶಿಕ್ಷಣದ ಬಗ್ಗೆಯೇ ಗಮನ ಕೇಂದ್ರೀಕರಿಸಲಾಗುತ್ತಿದೆಯೇ ಹೊರತು ಹೊರಜಗತ್ತಿನ ಬಗ್ಗೆಯಲ್ಲ, ಇದು ನಮ್ಮ ಮುಂದಿರುವ ಭೀಕರ ವಾಸ್ತವ" ಎಂದು ಅವರು ಹೇಳಿದರು.

ನಾವು ಪಡೆದಿರುವ ವಸಾಹತುಶಾಹಿ ಕಾಲಘಟ್ಟದ ಶಿಕ್ಷಣ ಪದ್ಧತಿಯು ಹೇಗೆ ಕೇವಲ ವಿಧೇಯ ನೌಕರ ವರ್ಗವನ್ನು ಸೃಷ್ಟಿಸಲು ಮಾತ್ರವೇ ಕೇಂದ್ರೀಕೃತವಾಗಿತ್ತು ಎನ್ನುವುದನ್ನು ಹಾಗೂ ಭಾರತಕ್ಕೆ ವಸಾಹತುಶಾಹಿ ಮನಸ್ಥಿತಿಯನ್ನು ತೊಡೆದು ಹಾಕುವ, ರಾಷ್ಟ್ರೀಯ ಐಕ್ಯತಯೆನ್ನು ಸಾಧಿಸುವ ಶಿಕ್ಷಣ ವ್ಯವಸ್ಥೆಯ ಅಗತ್ಯತೆಯನ್ನು ಅವರು ವಿವರಿಸಿದರು.

ತಮ್ಮ ಕಾಲಘಟ್ಟದಲ್ಲಿನ ಶಿಕ್ಷಣವು ಭ್ರಾತೃತ್ವವನ್ನು ಪಸರಿಸುತ್ತಿತ್ತು. ಇದು ನಮ್ಮನ್ನು ನಮ್ಮ ಬೇರುಗಳೊಂದಿಗೆ ಸಂಪರ್ಕ ಹೊಂದುವಂತೆ ಮಾಡಿತು. ಸಮ ಸಮಾಜ ನಿರ್ಮಾಣದ ಜವಾಬ್ದಾರಿಯನ್ನು ನಾವು ಅರಿತೆವು. ಈ ರೀತಿಯ ಅನುಭವಗಳನ್ನು ಹಂಚಿಕೊಳ್ಳುವ ಪ್ರಕ್ರಿಯೆಯಿಂದ ನಾವು ಸಮಾಜದ ಆಂತರ್ಯವನ್ನು ಅರಿಯುವುದು ಸಾಧ್ಯವಾಯಿತು ಎಂದು ಅವರು ನೆನೆದರು.

ಇದರ ಹೋಲಿಕೆಯಲ್ಲಿ ಇಂದಿನ ವಿದ್ಯಾರ್ಥಿಗಳು ಸಾಮಾಜಿಕ ಪಾಲ್ಗೊಳ್ಳುವಿಕೆಯಿಂದ ಹಿಂದೆ ಸರಿಯುತ್ತಿರುವ ಬಗ್ಗೆ ಅವರು ಗಮನಸೆಳೆದರು. ಜೀವನದ ನೈಜ ಸಮಸ್ಯೆಗಳನ್ನು ಎದುರಿಸಲು ಕಲಿಸುವಂತಹ, ಸಾಮಾಜಿಕ ಸಮಗ್ರತೆಯನ್ನು ಎತ್ತಿಹಿಡಿಯುವಂತಹ, ಸಮಾಜದಲ್ಲಿ ಮೌಲಿಕ ವ್ಯಕ್ತಿಗಳನ್ನು ನಿರ್ಮಿಸುವಂತಹ ಶಿಕ್ಷಣ ವ್ಯವಸ್ಥೆಯು ಇಂದಿನ ಅಗತ್ಯ ಎಂದು ಪ್ರತಿಪಾದಿಸಿದರು.

ದೇಶವನ್ನು ಕಾಡುತ್ತಿರುವ ಸಮಸ್ಯೆಗಳ ಬಗ್ಗೆ ಸಮಗ್ರ ಪರಿಹಾರವನ್ನು ಕಂಡುಕೊಳ್ಳಲು ವಿಶ್ವವಿದ್ಯಾಲಯಗಳ ಸಂಶೋಧನಾ ವಿಭಾಗಗಳು ಗಮನಹರಿಸುವಂತೆ ಅವರು ಇದೇ ವೇಳೆ ಸಲಹೆ ನೀಡಿದರು.