ವಿಧಾನಸಭಾ ಚುನಾವಣೆ ಫಲಿತಾಂಶದ ನಂತರ ಯಾವುದೇ ಹಿಂಸಾಚಾರ ಸಂಭವಿಸಿಲ್ಲ ಎಂದು ಪಶ್ಚಿಮ ಬಂಗಾಳ ಸರ್ಕಾರ ಕಲ್ಕತ್ತಾ ಹೈಕೋರ್ಟ್‌ಗೆ ಸೋಮವಾರ ತಿಳಿಸಿದೆ. ಪ್ರಭಾರಿ ಮುಖ್ಯ ನ್ಯಾಯಮೂರ್ತಿ ರಾಜೇಶ್ ಬಿಂದಾಲ್ ಅವರ ನೇತೃತ್ವದ ಐವರು ನ್ಯಾಯಮೂರ್ತಿಗಳ ಪೀಠಕ್ಕೆ ಪಶ್ಚಿಮ ಬಂಗಾಳದ ಅಡ್ವೊಕೇಟ್ ಜನರಲ್ ಕಿಶೋರ್ ದತ್ತಾ ಅವರು ಈ ಮಾಹಿತಿ ನೀಡಿದ್ದಾರೆ. ವಕೀಲ ಅನಿಂದ್ಯ ಸುಂದರ್ ದಾಸ್ ಎನ್ನುವವರು ಪಶ್ಚಿಮ ಬಂಗಾಳದಲ್ಲಿ ಚುನಾವಣೋತ್ತರ ಹಿಂಸಾಚಾರದ ವೇಳೆ 11 ಮಂದಿ ಸಾವನ್ನಪ್ಪಿದ್ದಾರೆ. ಇದಕ್ಕೆ ಪೊಲೀಸರ ನಿರ್ಲಕ್ಷ್ಯ, ಕರ್ತವ್ಯಲೋಪ ಕಾರಣವಾಗಿದ್ದು ಈ ಸಂಬಂಧ ತನಿಖೆ ನಡೆಸಲು ವಿಶೇಷ ತನಿಖಾ ತಂಡವನ್ನು ನೇಮಿಸುವಂತೆ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.
ಸರ್ಕಾರದ ಹೇಳಿಕೆಯ ವಿರುದ್ಧ ಕೇಂದ್ರದ ಹೆಚ್ಚುವರಿ ಸಾಲಿಸಿಟರ್ ಜನರಲ್ ವೈ ಜೆ ದಸ್ತೂರ್ ಅವರು ತೀವ್ರ ವಿರೋಧ ವ್ಯಕ್ತಪಡಿಸಿದರು. ವಿವಿಧ ರಾಜಕೀಯ ಪಕ್ಷಗಳ ವಕ್ತಾರರು ಚುನಾವಣೋತ್ತರ ಹಿಂಸಾಚಾರದ ಬಗ್ಗೆ ಬಹಿರಂಗವಾಗಿ, ಮಾಧ್ಯಮಗಳಲ್ಲಿ ಹೇಳಿಕೆಗಳನ್ನು ನೀಡಿರುವುದನ್ನು ಉಲ್ಲೇಖಸಿದರು. ಅಲ್ಲದೆ, ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ, ಮಹಿಳಾ ಆಯೋಗ, ಮಕ್ಕಳ ಆಯೋಗಗಳಿಗೆ ಹಿಂಸಾಚಾರದ ಸಂಬಂಧ ನೀಡಲಾಗಿರುವ ದೂರುಗಳನ್ನು ಆಧರಿಸಿ ಪೊಲೀಸರು ಎಫ್‌ಐಆರ್ ದಾಖಲಿಸಿ ತನಿಖೆ ನಡೆಸಲು ನಿರ್ದೇಶಿಸುವಂತೆ ಪೀಠವನ್ನು ಕೋರಿದರು. ಈ ವೇಳೆ, ವಾಸ್ತವ ಮಾಹಿತಿಯನ್ನು ಅಧರಿಸಿ ಪ್ರತಿಕ್ರಿಯಿಸಲು ಸರ್ಕಾರಕ್ಕೆ ಸಮಯ ನೀಡಿದ ನ್ಯಾಯಾಲಯ, ಪ್ರಕರಣದ ವಿಚಾರಣೆಯನ್ನು ಮೇ. 18ಕ್ಕೆ ಮುಂದೂಡಿದೆ.
ದೆಹಲಿ ಗಲಭೆಯ ಆರೋಪಿಯಲ್ಲಿ ಒಬ್ಬರಾಗಿರುವ ಪಿಂಜರಾ ತೋಡ್ ಗುಂಪಿನ ಸದಸ್ಯೆ ನತಾಶಾ ನರ್ವಾಲ್ ಅವರಿಗೆ ದೆಹಲಿ ಹೈಕೋರ್ಟ್ ಮೂರು ವಾರಗಳ ಅವಧಿಗೆ ಮಧ್ಯಂತರ ಜಾಮೀನು ನೀಡಿದೆ. ಆರೋಪಿತೆಯ ತಂದೆ ಮಹಾವೀರ್ ನರ್ವಾಲ್ ಅವರು ಭಾನುವಾರ ಸಂಜೆ ಕೋವಿಡ್‌ನಿಂದ ಮೃತರಾದ ಹಿನ್ನೆಲೆಯಲ್ಲಿ ಜಾಮೀನು ನೀಡುವಂತೆ ಕೋರಿ ಅರ್ಜಿ ಸಲ್ಲಿಕೆಯಾಗಿತ್ತು. ನತಾಶಾ ಸಹೋದರ ಆಕಾಶ್ ನರ್ವಾಲ್ ಅವರೂ ಸಹ ಕೋವಿಡ್‌ಗೆ ತುತ್ತಾಗಿ ಪ್ರತ್ಯೇಕವಾಸದಲ್ಲಿದ್ದಾರೆ. ಹಾಗಾಗಿ, ತಂದೆಯ ಅಂತಿಮ ಸಂಸ್ಕಾರ ನಡೆಸಲು ಯಾರೂ ಇಲ್ಲ ಎನ್ನುವುದನ್ನು ಪರಿಗಣಿಸಿದ ನ್ಯಾಯಾಲಯವು ನತಾಶಾಗೆ ಜಾಮೀನು ಮಂಜೂರು ಮಾಡಿತು. ನ್ಯಾ. ಸಿದ್ಧಾರ್ಥ್ ಮೃದುಲ್ ಹಾಗೂ ನ್ಯಾ. ಅನೂಪ್ ಜೆ ಬಂಭಾನಿ ಅವರಿದ್ದ ಪೀಠವು ಪ್ರಕರಣದ ವಿಚಾರಣೆ ನಡೆಸಿತು.
ನತಾಶಾ ಜಾಮೀನು ಅರ್ಜಿಗೆ ಸರ್ಕಾರದ ಪರ ವಕೀಲರಿಂದ ಯಾವುದೇ ಆಕ್ಷೇಪಣೆ ಇಲ್ಲ ಎನ್ನುವುದನ್ನು ನ್ಯಾಯಾಲಯ ಖಚಿತಪಡಿಸಿಕೊಂಡಿತು. ರೂ. 50 ಸಾವಿರ ವೈಯಕ್ತಿಕ ಬಾಂಡ್ ನೀಡಿ ಜಾಮೀನು ಪಡೆಯಲು ಸೂಚಿಸಲಾಯಿತು. ಅಲ್ಲದೆ, ಪಿಪಿಇ ಕಿಟ್ ಧರಿಸಿ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಬೇಕು, ಜಾಮೀನು ಅವಧಿ ಮುಕ್ತಾಯವಾಗುವ ಸಂದರ್ಭದಲ್ಲಿ ಜೈಲು ಅಧಿಕಾರಿಗಳ ಮುಂದೆ ಆರ್‌ಟಿಪಿಸಿಆರ್ ಕೋವಿಡ್ ವರದಿಯೊಂದಿಗೆ ಹಾಜರಾಗಬೇಕು ಎಂದು ಷರತ್ತು ವಿಧಿಸಲಾಯಿತು. ಯುಎಪಿಎ ಕಾಯಿದೆ ಅಡಿ ನತಾಶಾ ಬಂಧಿಯಾಗಿದ್ದಾರೆ. ವಕೀಲೆ ಅದಿತಿ ಪೂಜಾರಿ ನತಾಶಾರನ್ನು ಪ್ರತಿನಿಧಿಸಿದ್ದರು.