High Court of Karnataka
High Court of Karnataka 
ಸುದ್ದಿಗಳು

ನ್ಯಾಯಾಲಯದ ಆದೇಶ ಪಾಲಿಸಲು 8 ವರ್ಷ ವಿಳಂಬ: ತಹಶೀಲ್ದಾರ್‌ಗಳಿಂದ ₹3 ಲಕ್ಷ ದಂಡ ವಸೂಲಿಗೆ ಸೂಚಿಸಿದ ಹೈಕೋರ್ಟ್‌

Bar & Bench

ವೃದ್ಧೆಯೊಬ್ಬರಿಗೆ ಸೇರಿದ ಜಮೀನಿನ ಸರ್ವೇ ಮಾಡಿ ಪೋಡಿ ದುರಸ್ತಿ ಮಾಡುವಂತೆ ಎಂಟು ವರ್ಷದ ಹಿಂದೆ ಮಾಡಿದ್ದ ಆದೇಶವನ್ನುಈವರೆಗೆ ಪಾಲಿಸದ ಕಾರಣ ಈ ಅವಧಿಯಲ್ಲಿ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನಲ್ಲಿ ತಹಶೀಲ್ದಾರ್‌ಗಳಾಗಿ ಸೇವೆ ಸಲ್ಲಿಸಿದ್ದ ಅಧಿಕಾರಿಗಳಿಂದ ಮೂರು ಲಕ್ಷ ರೂಪಾಯಿ ದಂಡ ವಸೂಲಿ ಮಾಡುವಂತೆ ಕರ್ನಾಟಕ ಹೈಕೋರ್ಟ್ ಇತ್ತೀಚೆಗೆ ಆದೇಶ ಮಾಡಿದೆ.

ಆ ಮೂಲಕ ನ್ಯಾಯಾಂಗ ನಿಂದನೆ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಬಿ ವೀರಪ್ಪ ಮತ್ತು ಕೆ ಎಸ್ ಹೇಮಲೇಖಾ ಅವರಿದ್ದ ವಿಭಾಗೀಯ ಪೀಠವು ವಿಲೇವಾರಿ ಮಾಡಿದೆ.

2014ರ ಜುಲೈ 24ರಿಂದ 2022ರ ಫೆಬ್ರವರಿ 10ರವರೆಗೆ ಪಾಂಡವಪುರ ತಾಲ್ಲೂಕಿನಲ್ಲಿ ತಹಶೀಲ್ದಾರ್‌ಗಳಾಗಿ ಸೇವೆ ಸಲ್ಲಿಸಿದ ಅಧಿಕಾರಿಗಳಿಂದ ಈ ದಂಡದ ಮೊತ್ತವನ್ನು ವಸೂಲು ಮಾಡಬೇಕು, ಈ ವಿಚಾರವನ್ನು ಅವರ ಸೇವಾ ದಾಖಲೆಯಲ್ಲೂ ನಮೂದಿಸಬೇಕು ಎಂದು ಆದೇಶಿಸಿದೆ. ಜತೆಗೆ ಒಂದು ತಿಂಗಳಲ್ಲಿ ಅರ್ಜಿದಾರರಿಗೆ ದಂಡದ ಮೊತ್ತವನ್ನು ಪಾವತಿಸಬೇಕು, ಆ ಕುರಿತು ನ್ಯಾಯಾಲಯಕ್ಕೆ ಅನುಪಾಲನಾ ವರದಿ ಸಲ್ಲಿಸಬೇಕು, ಇಲ್ಲವಾದರೆ ಜಿಲ್ಲಾಧಿಕಾರಿಯವರ ವಿರುದ್ಧ ಗಂಭೀರ ಕ್ರಮ ಜರುಗಿಸಬೇಕಾಗುತ್ತದೆ ಎಂದೂ ನ್ಯಾಯಾಲಯ ಎಚ್ಚರಿಕೆ ನೀಡಿದೆ.

ನ್ಯಾಯಾಂಗ ನಿಂದನೆ ಅರ್ಜಿ ದಾಖಲಾದ ನಂತರ ಪೀಠದ ನೋಟಿಸ್ ಆಧರಿಸಿ ಸರ್ಕಾರದ ಮುಖ್ಯ ಕಾರ್ಯದರ್ಶಿ 2022ರಲ್ಲಿ ಜನವರಿಯಲ್ಲಿ ಜನರ ಭೂಮಿಯ ಸರ್ವೇ, ಪೋಡಿ ಮತ್ತು ದುರಸ್ತಿಗೆ ಸಂಬಂಧಿಸಿದಂತೆ ವಿವರವಾದ ಮಾರ್ಗಸೂಚಿ ಹೊರಡಿಸಿದ್ದಾರೆ. ಅದನ್ನೂ ಸಹ ಅಧಿಕಾರಿಗಳು ಪಾಲನೆ ಮಾಡದಿರುವುದು ದುರದೃಷ್ಟಕರ ಎಂದು ನ್ಯಾಯಾಲಯ ಹೇಳಿದೆ.

ಪ್ರಕರಣದ ಹಿನ್ನೆಲೆ: ಮಂಡ್ಯ ಜಿಲ್ಲೆ ಪಾಂಡವಪುರ ತಾಲ್ಲೂಕಿನ ಕುರಹಳ್ಳಿ ಗ್ರಾಮದ ವೃದ್ಧೆ ಪಾರ್ವತಮ್ಮ ತಮಗೆ ಸೇರಿದ ಭೂಮಿಯ ಸರ್ವೇ ಹಾಗೂ ಪೋಡಿ ಮಾಡಿಕೊಡಲು ನಿರ್ದೇಶನ ನೀಡುವಂತೆ ಕೋರಿ 2014ರಲ್ಲಿ ಹೈಕೋರ್ಟ್ ಏಕಸದಸ್ಯ ಪೀಠದ ಮೊರೆ ಹೋಗಿದ್ದರು. ಅರ್ಜಿ ಆಲಿಸಿದ ಪೀಠವು 2014ರ ಜುಲೈ 24ರಂದು 9 ತಿಂಗಳಲ್ಲಿ ಅರ್ಜಿದಾರರಿಗೆ ಸೇರಿದ ಜಮೀನಿನ ಪೋಡಿ ದುರಸ್ತಿ ಮಾಡಿಕೊಡಬೇಕು ಎಂದು ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಆದೇಶ ಮಾಡಿತ್ತು.

ಈ ಆದೇಶವನ್ನು ಅಧಿಕಾರಿಗಳು ಪಾಲನೆ ಮಾಡಿರಲಿಲ್ಲ. ಆನಂತರ 2018ರಲ್ಲಿ ಅರ್ಜಿದಾರರು ನ್ಯಾಯಾಂಗ ನಿಂದನೆ ಅರ್ಜಿ ದಾಖಲಿಸಿದ್ದರು. ಆನಂತರ ಎಚ್ಚೆತ್ತುಕೊಂಡ ಕಂದಾಯ ಅಧಿಕಾರಿಗಳು 2022ರ ಫೆಬ್ರವರಿ 10ರಂದು ಸರ್ವೇ ಮಾಡಿದ್ದರು.