Nagaland, Supreme Court

 
ಸುದ್ದಿಗಳು

[ಮಹಿಳಾ ಮೀಸಲಾತಿ] ನೀವು ನಿರ್ಧರಿಸಿ ಇಲ್ಲಾ ನಮಗೆ ಬಿಡಿ ಎಂದು ನಾಗಾಲ್ಯಾಂಡ್ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ತಾಕೀತು

ಲಿಂಗ ಸಮಾನತೆ ಎಂಬ ಪ್ರಮುಖ ಅಂಶ ಮುಂದೂಡುವಂತೆ ಕಾಣುತ್ತಿದ್ದು ಇದಾಗಲೇ ಒಂದು ದಶಕ ಕಳೆದಿದೆ ಎಂದು ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್ ಮತ್ತು ಸುಂದರೇಶ್ ಅವರಿದ್ದ ಪೀಠ ಹೇಳಿದೆ.

Bar & Bench

ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಶೇ 33ರಷ್ಟು ಮೀಸಲಾತಿಯನ್ನು ಹೇಗೆ ಜಾರಿಗೆ ತರಲು ಉದ್ದೇಶಿಸಲಾಗಿದೆ ಎಂಬ ಕುರಿತು ವರದಿ ಸಲ್ಲಿಸಲು ನಾಗಾಲ್ಯಾಂಡ್‌ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಮಂಗಳವಾರ ಅಂತಿಮ ಅವಕಾಶ ನೀಡಿದೆ.

ಈ ಪ್ರಕರಣದಲ್ಲಿ ರಾಜ್ಯ ಚುನಾವಣಾ ಆಯೋಗ ಸಲ್ಲಿಸಿದ ವರದಿಯನ್ನು ಪರಿಶೀಲಿಸಿದ ನಂತರ ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್ ಮತ್ತು ಎಂ ಎಂ ಸುಂದರೇಶ್‌ ಅವರಿದ್ದ ಪೀಠ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತು.

ಸರ್ಕಾರ ಸಲ್ಲಿಸಿರುವ ವರದಿ ಅದರ ಇಚ್ಛಾಶಕ್ತಿಯ ಕೊರತೆಯನ್ನು ಬಿಂಬಿಸುತ್ತದೆ. ಲಿಂಗ ಸಮಾನತೆ ಎಂಬ ಪ್ರಮುಖ ಅಂಶ ಮುಂದೂಡುವಂತೆ ಕಾಣುತ್ತಿದ್ದು ಒಂದು ದಶಕ ಕಳೆದಿದೆಎಂದು ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್ ಮತ್ತು ಎಂ ಎಂ ಸುಂದರೇಶ್‌ ಅವರಿದ್ದ ಪೀಠ ಹೇಳಿತು.

ಪ್ರಕರಣವನ್ನು ಏಪ್ರಿಲ್ 12ಕ್ಕೆ ಮುಂದೂಡಿದ ಪೀಠ, ನ್ಯಾಯಾಲಯದ ಸೂಚನೆಯನ್ನು ಪಾಲಿಸದಿದ್ದರೆ ಅದು ಆದೇಶದ ಉಲ್ಲಂಘನೆಯಾಗುತ್ತದೆ ಎಂದು ನಾಗಾಲ್ಯಾಂಡ್‌ ರಾಜ್ಯಕ್ಕೆ ಎಚ್ಚರಿಕೆ ನೀಡಿತು. ಮುಂದಿನ ವಿಚಾರಣೆ ವೇಳೆಗೆ ರಾಜ್ಯ ಮೀಸಲಾತಿ ಜಾರಿ ಪ್ರಕ್ರಿಯೆ ಪೂರ್ಣಗೊಳಿಸುವ ದಿನಾಂಕವನ್ನು ಬಹಿರಂಗಪಡಿಸಿ ಚುನಾವಣಾ ಆಯೋಗದ ಪತ್ರಗಳಿಗೆ ಪ್ರತಿಕ್ರಿಯಿಸಬೇಕು ಎಂದು ನ್ಯಾಯಾಲಯ ಸೂಚಿಸಿದೆ.

"ನಮ್ಮನ್ನು ಕಠಿಣ ನಿಲುವು ತೆಗೆದುಕೊಳ್ಳುವಂತೆ ಮಾಡಬೇಡಿ. ಸ್ಥಳೀಯ ಸಮಸ್ಯೆಗಳು ಲಿಂಗ ಋಣಾತ್ಮಕವಾಗಿರಲು ಸಾಧ್ಯವಿಲ್ಲ. ನಾವು ಪ್ರಕರಣವನ್ನು ತಾರ್ಕಿಕ ತೀರ್ಮಾನಕ್ಕೆ ಒಯ್ಯದೆ ಬಿಡುವುದಿಲ್ಲ," ಎಂದು ಪೀಠ ಮೌಖಿಕವಾಗಿ ಟೀಕಿಸಿತು.