ಕಲ್ಕತ್ತಾ ಹೈಕೋರ್ಟ್
ಕಲ್ಕತ್ತಾ ಹೈಕೋರ್ಟ್ 
ಸುದ್ದಿಗಳು

ಶೈಕ್ಷಣಿಕ ಅರ್ಹತೆ ಘೋಷಿಸುವಲ್ಲಿ ಅಕ್ರಮವಾಗಿದೆ ಎಂಬ ಕಾರಣಕ್ಕೆ ಚುನಾವಣಾ ಆಯ್ಕೆ ರದ್ದುಪಡಿಸಲಾಗದು: ಕಲ್ಕತ್ತಾ ಹೈಕೋರ್ಟ್

Bar & Bench

ಅಭ್ಯರ್ಥಿಯ ಶೈಕ್ಷಣಿಕ ಅರ್ಹತೆ ಘೋಷಿಸುವಲ್ಲಿ ಅಕ್ರಮವಾಗಿದೆ ಎಂಬ ಆಧಾರದ ಮೇಲೆ ಚುನಾವಣೆಯಲ್ಲಿನ ಅವರ ಆಯ್ಕೆಯನ್ನು ಬದಿಗಿಡಲು ಸಾಧ್ಯವಿಲ್ಲ ಎಂದು ಶುಕ್ರವಾರ ಹೇಳಿರುವ ಕಲ್ಕತ್ತಾ ಹೈಕೋರ್ಟ್‌ ಬಿಜೆಪಿ ಶಾಸಕ ಸ್ವಪನ್ ಮಜುಂದಾರ್ ಅವರ ಆಯ್ಕೆ ಎತ್ತಿಹಿಡಿದಿದೆ [ಗೋಪಾಲ್ ಸೇಠ್ ವಿರುದ್ಧ ಭಾರತದ ಚುನಾವಣಾ ಆಯೋಗ].

ರಾಜ್ಯ ವಿಧಾನಸಭೆಯಯಲ್ಲಿ ತಮ್ಮ ಪ್ರತಿನಿಧಿಯಾಗಿ ಒಬ್ಬರನ್ನು ಆಯ್ಕೆ ಮಾಡುವ ಹಕ್ಕು ಅಶಿಕ್ಷಿತ ಮತದಾರರಿಗೆ ಇದೆ ಎಂದು ನ್ಯಾ. ಸಬ್ಯಸಾಚಿ ಭಟ್ಟಾಚಾರ್ಯ ಅವರಿದ್ದ ಏಕಸದಸ್ಯ ಪೀಠ ಅಭಿಪ್ರಾಯಪಟ್ಟಿತು.

ನ್ಯಾಯಮೂರ್ತಿ ಸಬ್ಯಸಾಚಿ ಭಟ್ಟಾಚಾರ್ಯ

"ಇದು ಶಿಕ್ಷಣದ ಅಂತರ್ಗತ ಮೌಲ್ಯವನ್ನು ಅಥವಾ ದೇಶವು ಅಭಿವೃದ್ಧಿಗಾಗಿ ವ್ಯಕ್ತಿಗೆ ಶಿಕ್ಷಣದ ಹಕ್ಕು ಅಗತ್ಯವಿರುವುದನ್ನು ಕೀಳಾಗಿ ಕಾಣುವ ಅಥವಾ ನಿರಾಕರಿಸುವ ಅಂಶ ಅಲ್ಲ ಎಂದು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಬೇಕು. ಆದರೂ ಕಟ್ಟಕಡೆಗೆ ಅಭ್ಯರ್ಥಿ ಮತ ಚಲಾಯಿಸಲು ಅಥವಾ ಆಯ್ಕೆಯಾಗಲು ಬರೀ ಶೈಕ್ಷಣಿಕ ಅರ್ಹತೆ ಅಗತ್ಯ ಮಾನದಂಡವಾಗದು" ಎಂದು ನ್ಯಾಯಾಧೀಶರು ಅಭಿಪ್ರಾಯಪಟ್ಟರು.

ಅಶಿಕ್ಷಿತ ಮತದಾರರಿಗೆ ತಮ್ಮಲ್ಲಿ ಒಬ್ಬರನ್ನು ವಿಧಾನಸಭೆಗೆ ಪ್ರತಿನಿಧಿಯಾಗಿ ಆಯ್ಕೆ ಮಾಡುವ ಹಕ್ಕು ಇದ್ದು ಆ ದೃಷ್ಟಿಯಲ್ಲಿ ನೋಡಿದಾಗ ಖಾಸಗಿ ಪ್ರತಿವಾದಿಯ (ಮಜುಂದಾರ್) ಶೈಕ್ಷಣಿಕ ಅರ್ಹತೆಗೆ ಸಂಬಂಧಿಸಿದ ಘೋಷಣೆಯಲ್ಲಿ ಕೆಲ ಅಕ್ರಮಗಳು ನಡೆದಿದ್ದರೂ, ಅದನ್ನು ಅವರ ಚುನಾವಣಾ ಆಯ್ಕೆಗೆ ಅಡ್ಡಿ ಎಂದು ಪರಿಗಣಿಸಲಾಗದು ಎಂಬುದಾಗಿ ನ್ಯಾಯಾಲಯ ನುಡಿಯಿತು.

ಯಾವುದೇ ದೋಷದ ಆಧಾರದ ಮೇಲೆ ಅಭ್ಯರ್ಥಿಯ ನಾಮಪತ್ರವನ್ನು ತಿರಸ್ಕರಿಸಲಾಗದು. ಅಭ್ಯರ್ಥಿ ಚುನಾಯಿತನಾಗಲು ಶೈಕ್ಷಣಿಕ ಅರ್ಹತೆ ಅಗತ್ಯ ಮಾನದಂಡ ಆಗಿರದಿರುವುದು ಗಣನೀಯ ಸ್ವರೂಪದ ದೋಷವಲ್ಲ ಎಂದು ಕಲ್ಕತ್ತಾ ಹೈಕೋರ್ಟ್ ಹೇಳಿದೆ.

2021ರ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಶಾಸಕ ಮಜುಂದಾರ್ ತನ್ನ ಶೈಕ್ಷಣಿಕ ಅರ್ಹತೆಯನ್ನು ತಪ್ಪಾಗಿ ನೀಡಿದ್ದಾರೆ ಎಂದು ಆರೋಪಿಸಿ ಗೋಪಾಲ್ ಸೇಠ್ ಎಂಬವವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯ ಈ ವಿಚಾರ ತಿಳಿಸಿದೆ.

ಅರ್ಜಿದಾರರು ಹಾಜರುಪಡಿಸಿದ ದಾಖಲೆಯು ಮಜುಂದಾರ್ ವಿರುದ್ಧದ ಆರೋಪವನ್ನು ಸಮಂಜಸವಾದ ಅನುಮಾನಕ್ಕೆ ಆಸ್ಪದವಿಲ್ಲದಂತೆ ದೃಢೀಕರಿಸಲು ಯಾವುದೇ ಮಹತ್ವದ ಸಾಕ್ಷ್ಯಗಳನ್ನು ಒದಗಿಸುವುದಿಲ್ಲ ಎಂದ ಪೀಠ ಮನವಿಯನ್ನು ವಜಾಗೊಳಿಸಿತು.

[ತೀರ್ಪಿನ ಪ್ರತಿಯನ್ನು ಇಲ್ಲಿ ಓದಿ]

Gopal Seth vs Election Commission of India.pdf
Preview