ಶರದ್ ಪವಾರ್, ಅಜಿತ್ ಪವಾರ್ ಮತ್ತು ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ Facebook
ಸುದ್ದಿಗಳು

ಅಜಿತ್ ಪವಾರ್ ಬಣವೇ ನಿಜವಾದ ಎನ್‌ಸಿಪಿ ಎಂದ ಚುನಾವಣಾ ಆಯೋಗ; ಗಡಿಯಾರ ಚಿಹ್ನೆ ಬಳಸಲು ಅನುಮತಿ

ಎರಡು ಬಣಗಳಲ್ಲಿ ಯಾವುದು ನೈಜ ಎನ್‌ಸಿಪಿ ಎಂಬುದನ್ನು ನಿರ್ಧರಿಸಲು ಶಾಸಕಾಂಗ ವಿಭಾಗದಲ್ಲಿ ಬಹುಮತದ ಪರೀಕ್ಷೆಯ ತತ್ವವನ್ನು ಚುನಾವಣಾ ಆಯೋಗ ಅನ್ವಯಿಸಿತು.

Bar & Bench

ಎನ್‌ಸಿಪಿ ನೇತಾರ ಶರದ್‌ ಪವಾರ್‌ ಅವರಿಗೆ ಭಾರೀ ಹೊಡೆತ ಎಂಬಂತೆ ಅವರ ಸೋದರಳಿಯ ಅಜಿತ್‌ ಪವಾರ್‌ ನೇತೃತ್ವದ ಬಣವೇ ನಿಜವಾದ 'ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ' ಎಂದು ಮಂಗಳವಾರ ಅಭಿಪ್ರಾಯಪಟ್ಟಿರುವ ಭಾರತದ ಚುನಾವಣಾ ಆಯೋಗ (ಇಸಿಐ) ಆ ಬಣಕ್ಕೆ ಪಕ್ಷದ ʼಗಡಿಯಾರʼ ಚಿಹ್ನೆ ಬಳಸಲು ಅನುಮತಿ ನೀಡಿದೆ.

ಎರಡು ಬಣಗಳಲ್ಲಿ ಯಾವುದು ನೈಜ ಎನ್‌ಸಿಪಿ ಎಂಬುದನ್ನು ನಿರ್ಧರಿಸಲು ಶಾಸಕಾಂಗದಲ್ಲಿ ಹೊಂದಿರುವ ಬಹುಮತದ ಪರೀಕ್ಷೆಯ ತತ್ವವನ್ನು ಚುನಾವಣಾ ಆಯೋಗ ಅನ್ವಯಿಸಿತು.

ಮಹಾರಾಷ್ಟ್ರ ವಿಧಾನಸಭೆಯಲ್ಲಿ ಒಟ್ಟು ಎನ್‌ಸಿಪಿ ಶಾಸಕರ ಸಂಖ್ಯೆ 81. ಈ ಪೈಕಿ ಅಜಿತ್ ಪವಾರ್ ಅವರ ಪರವಾಗಿ 57 ಶಾಸಕರ ಅಫಿಡವಿಟ್ ಸಲ್ಲಿಸಿದ್ದರೆ, ಶರದ್ ಪವಾರ್ ಪರ ಕೇವಲ 28 ಎಂಎಲ್‌ಎಗಳು ಅಫಿಡವಿಟ್‌ ನೀಡಿದರು.

ಈ ಹಿನ್ನೆಲೆಯಲ್ಲಿ, ಅಜಿತ್ ಪವಾರ್ ನೇತೃತ್ವದ ಗುಂಪು ಶಾಸಕರ ಬಹುಮತದ ಬೆಂಬಲವನ್ನು ಹೊಂದಿದ್ದು ಆ ಬಣವೇ ನಿಜವಾದ ಎನ್‌ಸಿಪಿ ಎಂದು ಹೇಳಿಕೊಳ್ಳಬಹುದು ಎಂಬುದಾಗಿ ಆಯೋಗ ನಿರ್ಧರಿಸಿತು.

"ಫಲಿತಾಂಶಗಳನ್ನು ಗಮನದಲ್ಲಿಟ್ಟುಕೊಂಡು, ಅಜಿತ್ ಪವಾರ್ ನೇತೃತ್ವದ ಬಣ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷವಾಗಿದ್ದು ತನ್ನ ಹೆಸರು ಮತ್ತು ಅಧಿಕೃತ ಚಿಹ್ನೆ 'ಗಡಿಯಾರ'ವನ್ನು ಬಳಸಲು ಅದು ಅರ್ಹವಾಗಿದೆ" ಎಂದು ಚುನಾವಣಾ ಆಯೋಗ ತನ್ನ ಆದೇಶದಲ್ಲಿ ತಿಳಿಸಿದೆ.

ಪಕ್ಷದ ಸಾಂಸ್ಥಿಕ ರಚನೆ, ಅದರ ಸದಸ್ಯರು ಮತ್ತು ಅವರು ಸ್ಪರ್ಧಿಸಿದ ಚುನಾವಣೆಗಳ ವಿವರಗಳಿಗೆ ಯಾವುದೇ ಆಧಾರ ಇಲ್ಲದಿರುವುದು ಕಂಡುಬಂದದ್ದರಿಂದ ಪಕ್ಷದ ಸಾಂಸ್ಥಿಕ ವಿಭಾಗದಲ್ಲಿ ಬಹುಮತ ಪರೀಕ್ಷೆ ನಡೆಸಲು ಕೋರಿದ್ದ ಅರ್ಜಿಯನ್ನು ಚುನಾವಣಾ ಆಯೋಗ ತಿರಸ್ಕರಿಸಿತು.

ದೇಶದಲ್ಲಿ ರಾಜಕೀಯ ಪಕ್ಷಗಳ ಪಾರದರ್ಶಕವಲ್ಲದ ಕಾರ್ಯನಿರ್ವಹಣೆಯಿಂದ ಉದ್ಭವಿಸುವ ಸಮಸ್ಯೆಗಳನ್ನು ಚುನಾವಣಾ ಆಯೋಗ ಎತ್ತಿ ತೋರಿಸಿದೆ.

"ಆಯೋಗದ ಮುಂದಿರುವ ಬಹುತೇಕ ಚಿಹ್ನೆಗೆ ಸಂಬಂಧಿಸಿದ ವಿವಾದ ಪ್ರಕರಣಗಳು ರಾಜಕೀಯ ಪಕ್ಷಗಳು ನಿಯಮಿತವಾಗಿ ಸಾಂಸ್ಥಿಕ ಚುನಾವಣೆಗಳನ್ನು ನಡೆಸುತ್ತಿಲ್ಲ ಅಥವಾ ಪಕ್ಷದ ಸಂವಿಧಾನದ ಪ್ರಕಾರ ಅವುಗಳನ್ನು ಆಯೋಜಿಸುತ್ತಿಲ್ಲ ಇಲ್ಲವೇ ಚುನಾವಣೆಗಳನ್ನು ನೇಮಕಾತಿಯಾಗಿ ಬದಲಿಸುವ ರೀತಿಯಲ್ಲಿ ತಮ್ಮ ಸಂವಿಧಾನವನ್ನು ತಿದ್ದುಪಡಿ ಮಾಡಿಕೊಂಡಿವೆ ಎಂಬುದನ್ನು ತೋರಿಸುತ್ತವೆ" ಎಂದು ಆಯೋಗ ಅಭಿಪ್ರಾಯಪಟ್ಟಿದೆ

ಪಕ್ಷದ ಇಂತಹ ಕ್ರಮಗಳು ಪಕ್ಷದ ಸಂಘಟನಾ ವಿಭಾಗದಲ್ಲಿ ಬಹುಮತ ಪರೀಕ್ಷೆ ಅನ್ವಯಿಸುವಿಕೆಯನ್ನು ನಿಷ್ಪ್ರಯೋಜಕವಾಗಿಸಿದೆ ಎಂದು ಅದು ಹೇಳಿದೆ.

ಪಕ್ಷಗಳು ಆಂತರಿಕವಾಗಿ ಉತ್ತಮ ಬಹಿರಂಗಪಡಿಸುವ ರೂಢಿಗಳನ್ನು ಅಳವಡಿಸಿಕೊಳ್ಳುವಂತೆ ಎಲ್ಲಾ ರಾಜಕೀಯ ಪಕ್ಷಗಳನ್ನು ಅದು ಒತ್ತಾಯಿಸಿದೆ.

ಅಜಿತ್‌ ಪವಾರ್‌ ಅವರ ಪರವಾಗಿ ಹಿರಿಯ ವಕೀಲರಾದ ಮುಕುಲ್ ರೋಹಟಗಿ, ನೀರಜ್ ಕೌಲ್, ಮಣಿಂದರ್ ಸಿಂಗ್ ಮತ್ತು ಸಿದ್ಧಾರ್ಥ್ ಭಟ್ನಾಗರ್ ಹಾಗೂ ಶರದ್‌ ಪವಾರ್‌ ಅವರ ಪರವಾಗಿ ಹಿರಿಯ ವಕೀಲರಾದ ಅಭಿಷೇಕ್ ಮನು ಸಿಂಘ್ವಿ ಮತ್ತು ದೇವದತ್ ಕಾಮತ್ ಹಾಗೂ ಅವರ ವಕೀಲರ ತಂಡಗಳು ಈ ಸಂದರ್ಭದಲ್ಲಿ ಹಾಜರಿದ್ದವು.