Shiv sena symbol and Eknath Shinde Facebook
ಸುದ್ದಿಗಳು

ಏಕನಾಥ್‌ ಶಿಂಧೆ ಬಣವೇ ನೈಜ ಶಿವಸೇನೆ ಎಂದ ಚುನಾವಣಾ ಆಯೋಗ, ಬಿಲ್ಲು-ಬಾಣ ಚಿಹ್ನೆ ಬಳಕೆ ಮಾಡಲು ಅನುಮತಿ

ಶಿಂಧೆ ಅಥವಾ ಠಾಕ್ರೆ ಬಣದಲ್ಲಿ ಯಾವುದು ನಿಜವಾದ ಶಿವಸೇನೆ ಎನ್ನುವ ಪ್ರಶ್ನೆಯನ್ನು ಮುಂದಿರಿಸಿ ಶಿಂಧೆ ಬಣ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಚುನಾವಣಾ ಆಯೋಗವು ಆದೇಶ ಮಾಡಿದೆ.

Bar & Bench

ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ ಅವರ ಬಣವೇ ನೈಜವಾದ ಶಿವಸೇನೆ ಎಂದು ಭಾರತೀಯ ಚುನಾವಣಾ ಆಯೋಗವು ಶುಕ್ರವಾರ ಗುರುತಿಸಿದ್ದು, ಆ ಪಕ್ಷಕ್ಕೆ ಬಿಲ್ಲು ಮತ್ತು ಬಾಣದ ಚಿಹ್ನೆ ಬಳಕೆ ಮಾಡಲು ಅನುಮತಿಸಿದೆ.

ಶಿಂಧೆ ಮತ್ತು ಠಾಕ್ರೆ ಬಣಗಳ ಪೈಕಿ ಯಾವುದು ನೈಜವಾದ ಶಿವಸೇನಾ ಎಂದು ತೀರ್ಮಾನ ಮಾಡುವಂತೆ ಕೋರಿ ಶಿಂಧೆ ಬಣ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ಚುನಾವಣಾ ಆಯುಕ್ತ ರಾಜೀವ್‌ ಕುಮಾರ್‌, ಚುನಾವಣಾ ಆಯುಕ್ತರಾದ ಅನೂಪ್‌ ಚಂದ್ರ ಪಾಂಡೆ ಮತ್ತು ಅರುಣ್‌ ಗೋಯಲ್‌ ಅವರು ಆದೇಶ ಮಾಡಿದ್ದಾರೆ.

“ಶಿವಸೇನಾ ಪಕ್ಷದ ಹೆಸರು ಹಾಗೂ ಪಕ್ಷದ ಚಿಹ್ನೆಯಾದ ಬಿಲ್ಲು ಮತ್ತು ಬಾಣವು ಅರ್ಜಿದಾರಿಗೆ ಸೇರಿದೆ” ಎಂದು ಆದೇಶದಲ್ಲಿ ಹೇಳಲಾಗಿದೆ.

ಚುನಾವಣಾ ಆಯೋಗದ ನಿರ್ದೇಶನಗಳೇನು?

  • ಅರ್ಜಿದಾರರ ಬಣಕ್ಕೆ ಪಕ್ಷದ ಹೆಸರಾದ ಶಿವಸೇನೆ ಮತ್ತು ಬಿಲ್ಲು-ಬಾಣ ಸೇರಿದೆ.

  • 2022ರ ಅಕ್ಟೋಬರ್‌ 11ರಂದು ಮಧ್ಯಂತರ ಆದೇಶದ ಭಾಗವಾಗಿ ಬಾಳಾಸಾಹೇಬಾಂಚಿ ಶಿವಸೇನ ಹೆಸರು ಮತ್ತು ಎರಡು ಖಡ್ಗ ಮತ್ತು ಗುರಾಣಿಯ ಚಿಹ್ನೆಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಸ್ಥಗಿತಗೊಳಿಸಲಾಗಿದೆ.

  • ಪ್ರಜಾಪ್ರತಿನಿಧಿ ಕಾಯಿದೆಯ ಸೆಕ್ಷನ್‌ 29ಎ ಗೆ ಅನುಗುಣವಾಗಿ 2018ರ ಪಕ್ಷದ ಸಂವಿಧಾನವನ್ನು ತಿದ್ದುಪಡಿ ಮಾಡಬೇಕು. ಆಂತರಿಕ ಪ್ರಜಾಪ್ರಭುತ್ವಕ್ಕೆ ಅನುಗುಣವಾಗಿ ರಾಜಕೀಯ ಪಕ್ಷಗಳ ನೋಂದಣಿಯ ಕುರಿತು ಆಯೋಗವು ಹೊರಡಿಸಿದ ಅಸ್ತಿತ್ವದಲ್ಲಿರುವ ಮಾರ್ಗಸೂಚಿಗಳಿಗೆ ಅನುಗುಣವಾಗಿ ಪಕ್ಷದ ಸಂವಿಧಾನವಿರಬೇಕು.

  • 2022ರ ಅಕ್ಟೋಬರ್‌ 10ರಂದು ಮಧ್ಯಂತರ ಆದೇಶದ ಮೂಲಕ ಉದ್ಧವ್‌ ಠಾಕ್ರೆ ಬಣಕ್ಕೆ ಹಂಚಿಕೆ ಮಾಡಲಾಗಿರುವ ಶಿವಸೇನ (ಉದ್ಧವ್‌ ಬಾಳಾಸಾಹೇಬ್‌ ಠಾಕ್ರೆ) ಹೆಸರು ಮತ್ತು ಉರಿಯುವ ಜ್ಯೋತಿಯನ್ನು ಚಿಂಚವಾಡ ಮತ್ತು ಕಸ್ಬಾ ಪೇಠ್‌ ವಿಧಾನಸಭಾ ಉಪ ಚುನಾವಣೆವರೆಗೆ ಬಳಕೆ ಮಾಡಲು ನಿರ್ದೇಶಿಸಲಾಗಿದೆ.

  • ಚುನಾವಣಾ ಆಯೋಗವು ನಿರ್ಧಾರ ಕೈಗೊಳ್ಳುವವರೆಗೆ ಶಿವಸೇನೆ ಹೆಸರು ಮತ್ತು ಬಿಲ್ಲು-ಬಾಣದ ಗುರುತು ಬಳಕೆ ಮಾಡದಂತೆ ಶಿಂಧೆ ಮತ್ತು ಠಾಕ್ರೆ ಬಣಗಳನ್ನು ನಿರ್ಬಂಧಿಸಿತ್ತು. ಸಂಘಟನೆಯ ವಿಭಾಗಗಳಿಗೆ ಬದಲಾಗಿ ಸದನದಲ್ಲಿನ ಬಲಾಬಲವನ್ನು ಆಧರಿಸಿ ಆಯೋಗ ನಿರ್ಧಾರ ಕೈಗೊಂಡಿದೆ.

ಶಿಂಧೆ ಬಣವೇ ನೈಜ ಶಿವಸೇನೆ ಎನ್ನಲು ಆಯೋಗ ನೀಡಿದ ಕಾರಣವೇನು? 

ನೈಜ ಶಿವಸೇನೆಯನ್ನು ಗುರುತಿಸಲು ತಾನು ಪಕ್ಷದ ಸಂಘಟನಾ ವಿಭಾಗದ ಆಧಾರದಲ್ಲಿ ಅಲ್ಲದೆ ಸದನದಲ್ಲಿನ ಸಂಖ್ಯಾ ಬಲವನ್ನು ಆಧರಿಸಿದ್ದಾಗಿ ಚುನಾವಣಾ ಆಯೋಗ ಹೇಳಿದೆ. ನೈಜತೆಯನ್ನು ಗುರುತಿಸುವಲ್ಲಿ ಸಂಘಟನಾ ವಿಭಾಗದ ಪರೀಕ್ಷೆಯನ್ನು ಅನ್ವಯಿಸಲು ಸಾಧ್ಯವಾಗದೆ ಹೋದದ್ದಕ್ಕೆ ಆಯೋಗವು ಕಾರಣವನ್ನು ನೀಡಿದೆ.

ಪಕ್ಷದ ಸಂಘಟನಾ ಸ್ವರೂಪವನ್ನು ಸೂಚಿಸುವುದು ಪಕ್ಷದ ಸಂವಿಧಾನವಾಗಿರುತ್ತದೆ. ಆದರೆ, ತನ್ನ ಬಳಿ ಇರುವ ಪಕ್ಷದ ಸಂವಿಧಾನವು 1999ರಲ್ಲಿ ಪಕ್ಷವು ತನಗೆ ಸಲ್ಲಿಸಿರುವುದಾಗಿದೆ. ಆದರೆ, ಪಕ್ಷವು ಪ್ರಸ್ತುತ 2018ರ ತಿದ್ದುಪಡಿ ಸಂವಿಧಾನವನ್ನು ಅನುಸರಿಸುತ್ತಿದೆ. ಪಕ್ಷದ ಸಂವಿಧಾನಕ್ಕೆ ಮಾಡಿದ ತಿದ್ದುಪಡಿಯನ್ನಾಗಲಿ, ತಿದ್ದುಪಡಿಯ ಪ್ರಕ್ರಿಯೆಯನ್ನಾಗಲಿ ತನ್ನ ಗಮನಕ್ಕೆ ತಂದಿಲ್ಲ. ಅಲ್ಲದೆ ಇದು ಪಕ್ಷಗಳ ನೊಂದಾವಣಿಗೆ ಇರುವ ಮಾರ್ಗಸೂಚಿಗಳ ಅನ್ವಯ ಇಲ್ಲ. ಹಾಗಾಗಿ, ಪಕ್ಷದ ನೈಜತೆಯನ್ನು ಪರಿಶೀಲಿಸಲು ಅಗತ್ಯವಾದ ಸಂಘಟನಾ ವಿಭಾಗದ ಪರೀಕ್ಷೆಯನ್ನು ಈ ಪ್ರಕರಣದಲ್ಲಿ ತೃಪ್ತಿದಾಯಕವಾಗಿ ಅನ್ವಯಿಸಲು ಸಾಧ್ಯವಾಗದಾಯಿತು. ಪಕ್ಷದ ಸಂಘಟನೆಯಲ್ಲಿ ಯಾರು ಬಹುಮತ ಹೊಂದಿದ್ದಾರೆ ಎಂದು ತಿಳಿಯದಾಯಿತು. ಅಂತಿಮವಾಗಿ ನೈಜತೆಯನ್ನು ನಿರ್ಧರಿಸಲು ಸದನದಲ್ಲಿ ಹೊಂದಿರುವ ಬಹುಮತ ಆಧರಿಸಲಾಯಿತು ಎಂದು ಆಯೋಗ ವಿವರಿಸಿದೆ.