ಸುಪ್ರೀಂ ಕೋರ್ಟ್, ಚುನಾವಣಾ ಆಯೋಗ 
ಸುದ್ದಿಗಳು

ಚುನಾವಣಾ ಆಯುಕ್ತರ ನೇಮಕಾತಿಗೆ ತಡೆ ನೀಡದ ಸುಪ್ರೀಂ; ಮುಂದಿನ ವಾರಕ್ಕೆ ವಿಚಾರಣೆ ಮುಂದೂಡಿಕೆ

ಮುಖ್ಯ ಚುನಾವಣಾ ಆಯುಕ್ತರು (ಸಿಇಸಿ) ಮತ್ತು ಚುನಾವಣಾ ಆಯುಕ್ತರ ನೇಮಕಾತಿ ಹಾಗೂ ಸೇವಾ ಷರತ್ತು ನಿಯಂತ್ರಿಸಲು ಇತ್ತೀಚೆಗೆ ಜಾರಿಗೆ ತಂದ ಕಾಯಿದೆ ಪ್ರಶ್ನಿಸಿದ್ದ ಅರ್ಜಿಯ ವಿಚಾರಣೆ ವೇಳೆ ಈ ನಿರ್ಧಾರ ಪ್ರಕಟಿಸಿದ ನ್ಯಾಯಾಲಯ.

Bar & Bench

ಮುಖ್ಯ ಚುನಾವಣಾ ಆಯುಕ್ತರು ಮತ್ತು ಇತರ ಚುನಾವಣಾ ಆಯುಕ್ತರ (ನೇಮಕಾತಿ, ಸೇವಾ ಷರತ್ತುಗಳು ಮತ್ತು ಅಧಿಕಾರಾವಧಿ) ಕಾಯಿದೆ- 2023ಕ್ಕೆ ತಡೆ ನೀಡಲು ಇಲ್ಲವೇ ಕೇಂದ್ರ ಸರ್ಕಾರ ಇಬ್ಬರು ಹೊಸ ಚುನಾವಣಾ ಆಯುಕ್ತರ ನೇಮಕಾತಿ ಮಾಡಿರುವ ಕುರಿತಂತೆ ಯಾವುದೇ ಆದೇಶ ಹೊರಡಿಸಲು ಸುಪ್ರೀಂ ಕೋರ್ಟ್ ಶುಕ್ರವಾರ ನಿರಾಕರಿಸಿದೆ.

ನ್ಯಾಯಾಲಯ ಮಧ್ಯಂತರ ಆದೇಶಗಳ ಮೂಲಕ ಕಾಯಿದೆಗಳನ್ನು ತಡೆಹಿಡಿಯಲು ಸಾಧ್ಯವಿಲ್ಲ ಆದರೆ ಚುನಾವಣಾ ಆಯುಕ್ತರನ್ನು ನೇಮಕ ಮಾಡುವ ಆಯ್ಕೆ ಸಮಿತಿಯಿಂದ ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಅವರನ್ನು ಹೊರಗಿಡುವ ಮನವಿಯಲ್ಲಿ ಪ್ರಸ್ತಾಪಿಸಲಾದ ವಿಷಯ ಕುರಿತು ಕೇಂದ್ರ ಸರ್ಕಾರ ಪ್ರತಿಕ್ರಿಯಿಸಬೇಕಾಗುತ್ತದೆ ಎಂದು ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ, ದೀಪಂಕರ್ ದತ್ತಾ ಮತ್ತು ಅಗಸ್ಟಿನ್ ಜಾರ್ಜ್ ಮಾಸಿಹ್ ಅವರಿದ್ದ ಪೀಠ ತಿಳಿಸಿದೆ.

ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ, ದೀಪಂಕರ್ ದತ್ತಾ ಮತ್ತು ಅಗಸ್ಟಿನ್ ಜಾರ್ಜ್ ಮಾಸಿಹ್

ಮುಖ್ಯ ಚುನಾವಣಾ ಆಯುಕ್ತರು (ಸಿಇಸಿ) ಮತ್ತು ಚುನಾವಣಾ ಆಯುಕ್ತರ ನೇಮಕಾತಿ ಹಾಗೂ ಸೇವಾ ಷರತ್ತುಗಳನ್ನು ನಿಯಂತ್ರಿಸಲು ಇತ್ತೀಚೆಗೆ ಜಾರಿಗೆ ತಂದ ಕಾಯಿದೆ ಪ್ರಶ್ನಿಸಿ ಕಾಂಗ್ರೆಸ್‌ ನಾಯಕಿ ಡಾ. ಜಯಾ ಠಾಕೂರ್‌ ಹಾಗೂ ಇತರರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ಪೀಠ ಈ ಆದೇಶ ಪ್ರಕಟಿಸಿತು.

ನೇಮಕಾತಿ ಪ್ರಕ್ರಿಯೆಯಲ್ಲಿ ಸಿಜೆಐ ಅವರು ಇಲ್ಲದಿರುವುದು ಅನೂಪ್ ಬರನ್ವಾಲ್ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪಿನ ಉಲ್ಲಂಘನೆ ಎಂದು ಅರ್ಜಿಗಳಲ್ಲಿ ದೂರಲಾಗಿತ್ತು.

ಸಮಿತಿಯಲ್ಲಿ ಪ್ರಧಾನಿ, ಸಿಜೆಐ ಹಾಗೂ ವಿರೋಧ ಪಕ್ಷದ ನಾಯಕರು ಇರಬೇಕು ಎಂಬ ಅನೂಪ್‌ ಬರನ್ವಾಲ್‌ ಪ್ರಕರಣದ ತೀರ್ಪಿಗೆ ವ್ಯತರಿಕ್ತವಾಗಿ ಕಾಯಿದೆಗೆ ತಿದ್ದುಪಡಿ ತಂದು ಸಿಜೆಐ ಬದಲಿಗೆ ಸಂಪುಟ ಸಚಿವರನ್ನು ಸದಸ್ಯರನ್ನಾಗಿ ನೇಮಕ ಮಾಡಲಾಗಿತ್ತು.

ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಮತ್ತು ಭಾರತದ ಚುನಾವಣಾ ಆಯೋಗದ ಪ್ರತಿಕ್ರಿಯೆಯನ್ನು ನ್ಯಾಯಾಲಯ ಕೇಳಿತ್ತಾದರೂ ಕಾಯಿದೆಗೆ ತಡೆ ನೀಡಲು ಅದು ಎರಡು ಬಾರಿ ನಿರಾಕರಿಸಿತ್ತು.

ಪ್ರಕರಣ ಕುರಿತಂತೆ ಈ ವರ್ಷದ ಜನವರಿಯಲ್ಲಿ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರ ಮತ್ತು ಭಾರತದ ಚುನಾವಣಾ ಆಯೋಗದ (ಇಸಿಐ) ಪ್ರತಿಕ್ರಿಯೆ ಕೇಳಿತ್ತು.

ಒಬ್ಬ ಆಯುಕ್ತರ ನಿವೃತ್ತಿ ಹಾಗೂ ಮತ್ತೊಬ್ಬ ಆಯುಕ್ತರ ರಾಜೀನಾಮೆ ಹಿನ್ನೆಲೆಯಲ್ಲಿ ಆಯುಕ್ತರ ಹುದ್ದೆಗಳನ್ನು ಭರ್ತಿ ಮಾಡುವುದಕ್ಕಾಗಿ 2023ರ ಮುಖ್ಯ ಚುನಾವಣಾ ಆಯುಕ್ತರು ಹಾಗೂ ಇತರ ಚುನಾವಣಾ ಆಯುಕ್ತರ (ನೇಮಕಾತಿ ಷರತ್ತುಗಳು ಮತ್ತು ಅಧಿಕಾರದ ಅವಧಿ) ಕಾಯಿದೆ ಬಳಸದಂತೆ ಕೇಂದ್ರ ಸರ್ಕಾರವನ್ನು ನಿರ್ಬಂಧಿಸಬೇಕು ಎಂದು ಸರ್ವೋಚ್ಚ ನ್ಯಾಯಾಲಯಕ್ಕೆ ಮನವಿ ಮಾಡಲಾಗಿತ್ತು.

ಈ ಮಧ್ಯೆ, ನಿನ್ನೆ (ಗುರುವಾರ) ಸಭೆ ಸೇರಿದ್ದ ಆಯ್ಕೆ ಸಮಿತಿ ಮಾಜಿ ಐಎಎಸ್ ಅಧಿಕಾರಿಗಳಾದ ಸುಖ್‌ಬೀರ್‌ ಸಿಂಗ್‌ ಸಂಧು ಮತ್ತು ಜ್ಞಾನೇಶ್ ಕುಮಾರ್ ಅವರನ್ನು ಚುನಾವಣಾ ಆಯುಕ್ತರನ್ನಾಗಿ ನೇಮಕ ಮಾಡಿತ್ತು.

ಪ್ರಕರಣವನ್ನು ಇಂದು ಕೈಗೆತ್ತಿಕೊಂಡ ನ್ಯಾಯಾಲಯ, ಜಯಾ ಠಾಕೂರ್ ಪರವಾಗಿ ಹಾಜರಾದ ಹಿರಿಯ ವಕೀಲ ವಿಕಾಸ್ ಸಿಂಗ್ ಅವರ ಮನವಿಯ ಹೊರತಾಗಿಯೂ ಕಾಯಿದೆಗೆ ತಡೆ ನೀಡಲು ನಿರಾಕರಿಸಿತು. ಪ್ರಕರಣವನ್ನು ಮಾರ್ಚ್ 21, ಗುರುವಾರ ವಿಚಾರಣೆ ನಡೆಸುವುದಾಗಿ ತಿಳಿಸಿತು.