Karnataka High Court 
ಸುದ್ದಿಗಳು

ಚುನಾವಣಾ ಅಕ್ರಮ ಪ್ರಕರಣ: ಕಾಂಗ್ರೆಸ್‌ ಶಾಸಕಿ ಕನೀಜ್‌ ಫಾತಿಮಾಗೆ ಹೈಕೋರ್ಟ್‌ ನೋಟಿಸ್

ಜನತಾದಳ (ಸಂಯುಕ್ತ) ಅಭ್ಯರ್ಥಿಯಾಗಿ ಸ್ಪರ್ಧಿಸಿ ಪರಾಭವಗೊಂಡ ಎ ಎಸ್ ಶರಣಬಸಪ್ಪ ಸಲ್ಲಿಸಿರುವ ಚುನಾವಣಾ ಅರ್ಜಿಯನ್ನು ನ್ಯಾಯಮೂರ್ತಿ ಸಿ ಎಂ ಪೂಣಚ್ಚ ಅವರ ನೇತೃತ್ವದ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

Bar & Bench

ಚುನಾವಾಣಾ ಆಯೋಗಕ್ಕೆ ಸಲ್ಲಿಸಿರುವ ಅಫಿಡವಿಟ್‌ನಲ್ಲಿ ಆಸ್ತಿ ವಿವರ ಮತ್ತು ವಿದ್ಯಾರ್ಹತೆಗೆ ಸಂಬಂಧಿಸಿದ ದಾಖಲೆಗಳಲ್ಲಿ ಸತ್ಯಾಂಶ ಮರೆಮಾಚಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಕಲಬುರ್ಗಿ ಉತ್ತರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಶಾಸಕಿ ಕನೀಜ್‌ ಫಾತಿಮಾ ಅವರಿಗೆ ಕರ್ನಾಟಕ ಹೈಕೋರ್ಟ್‌ ಶುಕ್ರವಾರ ನೋಟಿಸ್‌ ಜಾರಿಗೊಳಿಸಿದೆ.

ಜನತಾದಳ (ಸಂಯುಕ್ತ) ಅಭ್ಯರ್ಥಿಯಾಗಿ ಸ್ಪರ್ಧಿಸಿ ಪರಾಭವಗೊಂಡ ಎ ಎಸ್ ಶರಣಬಸಪ್ಪ ಸಲ್ಲಿಸಿರುವ ಚುನಾವಣಾ ಅರ್ಜಿಯನ್ನು ನ್ಯಾಯಮೂರ್ತಿ ಸಿ ಎಂ ಪೂಣಚ್ಚ ಅವರ ನೇತೃತ್ವದ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

ಪ್ರತಿವಾದಿಗಳಾದ ಶಾಸಕಿ, ಕನೀಜ್‌ ಫಾತಿಮಾ, ಚಂದ್ರಕಾಂತ್‌, ನಾಸಿರ್ ಹುಸೇನ್‌, ಮೆಹಬೂಬ್‌ ಷಾ, ಸೈಯದ್‌ ಸಜ್ಜದ್‌ ಅಲಿ, ಅಬ್ದುಲ್‌ ಹಾಜಿ ಮೊಹಮದ್‌, ತಾರಾಭಾಯಿ ಭೋವಿ, ಮೊಹಮದ್‌ ಅಶ್ರಫ್‌, ಅಬ್ದುರ್ ರಹೀಂ, ಅಬ್ದುಲ್‌ ಹಮೀದ್‌ ಬಾಗಬಾನ್‌ ಮತ್ತು ಮುಜಾಹಿದ್‌ ರೌಫ್‌ ಮಜ್ಹರಿ ಅವರಿಗೆ ನೋಟಿಸ್‌ ಜಾರಿಗೊಳಿಸಿದೆ.

ವಿಚಾರಣೆ ವೇಳೆ ಕನೀಜ್‌ ಫಾತಿಮಾ ಪರ ಹಾಜರಾಗಿ ವಕಾಲತ್ತು ಸಲ್ಲಿಸಿದ ಹೈಕೋರ್ಟ್‌ ವಕೀಲ ರಹಮತ್‌ ಉಲ್ಲಾ ಕೊತ್ವಾಲ್‌, ಆಕ್ಷೇಪಣೆ ಸಲ್ಲಿಸಲು ಸಮಯಾವಕಾಶ ಕೋರಿದರು. ಇದನ್ನು ಮಾನ್ಯ ಮಾಡಿದ ಪೀಠವು ನಾಲ್ಕು ವಾರಗಳಲ್ಲಿ ಆಕ್ಷೇಪಣೆ ಸಲ್ಲಿಸುವಂತೆ ನಿರ್ದೇಶಿಸಿ, ವಿಚಾರಣೆ ಮುಂದೂಡಿದೆ.

ಅರ್ಜಿ ವಿವರ: ರಾಜ್ಯ ವಿಧಾನಸಭೆಗೆ 2023ರ ಮೇ 10ರಂದು ನಡೆದ ಚುನಾವಣೆಯಲ್ಲಿ ಕನೀಜ್‌ ಫಾತಿಮಾ ಕಲಬುರ್ಗಿ ಉತ್ತರ ಕ್ಷೇತ್ರದಿಂದ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ. ಇವರು ಚುನಾವಣೆಗೆ ಸ್ಪರ್ಧಿಸುವ ವೇಳೆ ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಅಫಿಡವಿಟ್‌ನಲ್ಲಿ ತಮ್ಮ ಸ್ಥಿರಾಸ್ತಿ, ಷೇರುಗಳು ಹಾಗೂ ವಿದ್ಯಾರ್ಹತೆಗೆ ಸಂಬಂಧಿಸಿದ ದಾಖಲೆಗಳಲ್ಲಿ ಸತ್ಯಾಂಶದ ವಿವರಗಳನ್ನು ನೀಡಿಲ್ಲ. ಇದು ಜನಪ್ರತಿನಿಧಿಗಳ ಕಾಯಿದೆಯ ಉಲ್ಲಂಘನೆ. ಆದ್ದರಿಂದ, ಇವರ ಆಯ್ಕೆಯನ್ನು ಅನೂರ್ಜಿತಗೊಳಿಸಿ ಇವರ ಸಮೀಪದ ಪ್ರತಿಸ್ಪರ್ಧಿಯಾಗಿ ಎರಡನೇ ಅತಿಹೆಚ್ಚು ಮತ ಪಡೆದ ಅಭ್ಯರ್ಥಿಯನ್ನು ವಿಜಯಿ ಎಂದು ಘೋಷಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.