ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅಕ್ರಮಗಳನ್ನು ಎಸಗುವ ಮೂಲಕ ವರುಣಾ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗಿ ಮುಖ್ಯಮಂತ್ರಿಯಾಗಿರುವ ಸಿದ್ದರಾಮಯ್ಯ ಅವರನ್ನು ಪ್ರಜಾಪ್ರತಿನಿಧಿ ಕಾಯಿದೆ ಅನ್ವಯ ಅನರ್ಹಗೊಳಿಸಬೇಕು ಎಂದು ಕೋರಿರುವ ಅರ್ಜಿಗೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನೋಟಿಸ್ ಜಾರಿ ಮಾಡಿದೆ.
ವರುಣಾ ವಿಧಾನಸಭಾ ಕ್ಷೇತ್ರದ ಕೂಡನಹಳ್ಳಿಯ ಕೆ ಶಂಕರ ಅವರು ಸಲ್ಲಿಸಿರುವ ಚುನಾವಣಾ ಅರ್ಜಿಯನ್ನು ನ್ಯಾಯಮೂರ್ತಿ ಎಸ್ ಸುನಿಲ್ ದತ್ ಯಾದವ್ ಅವರ ನೇತೃತ್ವದ ಏಕಸದಸ್ಯ ಪೀಠವು ವಿಚಾರಣೆ ನಡೆಸಿತು.
ಅರ್ಜಿದಾರರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲೆ ಪ್ರಮೀಳಾ ನೇಸರ್ಗಿ ಅವರು “ಕಾಂಗ್ರೆಸ್‌ನ ಪ್ರಣಾಳಿಕೆಯಲ್ಲಿ ಐದು ಗ್ಯಾರೆಂಟಿ ಯೋಜನೆಗಳ ಮೂಲಕ ಮತದಾರರಿಗೆ ಆಮಿಷವೊಡ್ಡಿ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್‌ನ ಶಾಸಕರು ಆಯ್ಕೆಯಾಗಿದ್ದಾರೆ. ಇದು ಚುನಾವಣಾ ಅಕ್ರಮಕ್ಕೆ ಸಮನಾಗಿದೆ. ಹೀಗಾಗಿ, ಅವರ ಆಯ್ಕೆಯನ್ನು ಅಸಿಂಧುಗೊಳಿಸಬೇಕು” ಎಂದು ಕೋರಿದರು.
ಕೆಲಕಾಲ ವಾದ ಆಲಿಸಿದ ಪೀಠವು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನೋಟಿಸ್ ಜಾರಿ ಮಾಡಿ, ವಿಚಾರಣೆಯನ್ನು ಸೆಪ್ಟೆಂಬರ್ 1ಕ್ಕೆ ಮುಂದೂಡಿತು.
“ಪ್ರಜಾಪ್ರತಿನಿಧಿ ಕಾಯಿದೆ ಸೆಕ್ಷನ್ 123 (1) ಪ್ರಕಾರ ಗ್ಯಾರಂಟಿ ಯೋಜನೆಗಳ ಮೂಲಕ ಮತದಾರರಿಗೆ ಆಮಿಷ ಒಡ್ಡುವುದು ಲಂಚಕ್ಕೆ ಸಮ. ಸೆಕ್ಷನ್ 123 (2) ಪ್ರಕಾರ ಇದು ಮತದಾರರ ಮೇಲೆ ಪ್ರಭಾವ ಬೀರುವ ಯತ್ನವಾಗಿದೆ. ಸೆಕ್ಷನ್ 123 (4)ರ ಪ್ರಕಾರ ಅದನ್ನು ಪ್ರಚಾರ ಮಾಡುವುದೂ ಅಪರಾಧ. ಅಲ್ಲದೇ, ಇದನ್ನು ಅಭ್ಯರ್ಥಿಯ ಚುನಾವಣಾ ಲೆಕ್ಕಕ್ಕೆ ಸೇರ್ಪಡೆ ಮಾಡದಿರುವುದು ಸೆಕ್ಷನ್ 123 (6)ರ ಅಪರಾಧವಾಗಿದೆ” ಎಂದು ಅರ್ಜಿಯಲ್ಲಿ ಆಕ್ಷೇಪಿಸಲಾಗಿದೆ.