Karnataka High Court and Justice S Sunil Dutt Yadav 
ಸುದ್ದಿಗಳು

ಚುನಾವಣಾ ಅಕ್ರಮ: ಬಿಜೆಪಿ ಮುಖಂಡ ತುಳಸಿ ಮುನಿರಾಜು ಗೌಡ ವಿರುದ್ಧದ ಪ್ರಕರಣ ರದ್ದುಪಡಿಸಿದ ಹೈಕೋರ್ಟ್‌

ಚುನಾವಣಾಧಿಕಾರಿಗಳು ನೇರವಾಗಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಹಾಗಾಗಿ, ದೂರು ದಾಖಲಿಸುವಾಗ ಕಾನೂನು ಲೋಪವಾಗಿದ್ದು, ಇದಕ್ಕೆ ವಿಚಾರಣಾ ಮಾನ್ಯತೆ ಇಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

Bar & Bench

ಕಳೆದ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಮತದಾರರಿಗೆ ಹಣ ಆಮಿಷ ಆರೋಪ ಸಂಬಂಧ ಬಿಜೆಪಿ ಅಭ್ಯರ್ಥಿ ತುಳಸಿ ಮುನಿರಾಜು ಗೌಡ ವಿರುದ್ಧ ಯಶವಂತಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ದೂರು ರದ್ದುಪಡಿಸಿ ಕರ್ನಾಟಕ ಹೈಕೋರ್ಟ್ ಗುರುವಾರ ಆದೇಶಿಸಿದೆ.

ತುಳಸಿ ಮುನಿರಾಜು ಗೌಡ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸುನಿಲ್ ದತ್ ಯಾದವ್ ನೇತೃತ್ವದ ಏಕಸದಸ್ಯ ಪೀಠವು ಆದೇಶ ಮಾಡಿದೆ.

ಚುನಾವಣಾ ನೀತಿ ಸಂಹಿತೆ ಆರೋಪ ಸಂಬಂಧ ಚುನಾವಣಾಧಿಕಾರಿಗಳು ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಖಾಸಗಿ ದೂರು ಸಲ್ಲಿಸಬೇಕಾಗುತ್ತದೆ. ಆದರೆ, ದೂರಿನಲ್ಲಿನ ಅಂಶಗಳು ಮೇಲ್ನೊಟಕ್ಕೆ ಸತ್ಯ ಎಂಬುದಾಗಿ ಕಂಡುಬಂದರೆ ತನಿಖೆ ನಡೆಸಲು ಪೊಲೀಸರಿಗೆ ನ್ಯಾಯಾಲಯ ನಿರ್ದೇಶಿಸಬಹುದು. ಆದರೆ, ಈ ಪ್ರಕರಣದಲ್ಲಿ ಚುನಾವಣಾಧಿಕಾರಿಗಳು ನೇರವಾಗಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಹಾಗಾಗಿ, ದೂರು ದಾಖಲಿಸುವಾಗ ಕಾನೂನು ಲೋಪವಾಗಿದ್ದು, ಇದಕ್ಕೆ ವಿಚಾರಣಾ ಮಾನ್ಯತೆ ಇಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಅಲ್ಲದೇ, ತುಳಸಿ ಮುನಿರಾಜುಗೌಡ ವಿರುದ್ಧದ ದೂರು ಮತ್ತು ಆ ಕುರಿತ 28ನೇ ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯದ ವಿಚಾರಣೆ ರದ್ದುಪಡಿಸಿ ಆದೇಶಿಸಿದೆ.

ಪ್ರಕರಣದ ಹಿನ್ನೆಲೆ: ಮಾದರಿ ಚುನಾವಣಾ ನೀತಿ ಸಂಹಿತೆ ಅಧಿಕಾರಿಯಾಗಿದ್ದ ವಿ ಕೃಷ್ಣ ಅವರು 2018ರ ಮೇ 27ರಂದು ಯಶವಂತಪುರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ರಾಜರಾಜೇಶ್ವರಿ ವಿಧಾಸಭಾ ಕ್ಷೇತ್ರದಲ್ಲಿ ಮುತ್ಯಾಲನಗರ ವಾರ್ಡ್ ನಂ.17ರ ವ್ಯಾಪ್ತಿಯ ಜೆ ಪಿ ಪಾರ್ಕ್ ಹಿಂಭಾಗದ ಗೇಟ್ ಬಳಿ 2018ರ ಮೇ 27ರಂದು ಮಧ್ಯಾಹ್ನ 12.30 ಗಂಟೆಯಲ್ಲಿ ಪ್ರಶಾಂತ ರೆಡ್ಡಿ ಎಂಬವರು ತಮ್ಮ ಕಾರಿನಲ್ಲಿ ಎರಡು ಸಾವಿರ ಮುಖಬೆಲೆಯ ಒಂದು ಲಕ್ಷ ರೂಪಾಯಿ ಹಣ ಇಟ್ಟುಕೊಂಡಿದ್ದರು. ಅವರ ಬಳಿ ರಾಜರಾಜೇಶ್ವರಿನಗರ ವಿಧಾನಸಬಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತುಳಸಿ ಮುನಿರಾಜು ಗೌಡ ಎಂಬುವವರ 390 ಪ್ರಚಾರ ಪತ್ರಗಳು, ಬಿಜೆಪಿಯ ಕಮಲದ ಹೂ ಇರುವ ಟೋಪಿ, ಐದು ಕೇಸರಿ ಮತ್ತು ಬಳಿ ಬಣ್ಣದ ಟೋಪಿಗಳು, ಎರಡು ಕೇಸರಿ ಬಣ್ಣದ ಶಾಲಗಳಿದ್ದವು ಎಂದು ದೂರುದಾರರು ಆರೋಪಿಸಿದ್ದರು.

ಅಲ್ಲದೆ, ಈ ಬಗ್ಗೆ ಪ್ರಶ್ನಿಸಿದಾಗ ಪ್ರಶಾಂತರೆಡ್ಡಿ ಸಮಂಜಸ ಉತ್ತರ ನೀಡಲಿಲ್ಲ. ಇದು ನೀತಿ ಸಂಹಿತೆ ಉಲ್ಲಂಘನೆಯಾಗಿದೆ. ಮತದಾರರಿಗೆ ಹಂಚಲು ಈ ಹಣ ತೆಗೆದುಕೊಂಡು ಬಂದಿರುವುದು ಮೇಲ್ನೊಟಕ್ಕೆ ಕಂಡುಬರುತ್ತದೆ. ಆದ್ದರಿಂದ ಪ್ರಕರಣ ಕುರಿತು ಕಾನೂನು ಕ್ರಮ ಜರುಗಿಸಬೇಕು ಎಂದು ದೂರುದಾರರು ಕೋರಿದ್ದರು. ಈ ದೂರು ಆಧರಿಸಿ ಪ್ರಶಾಂತ್ ರೆಡ್ಡಿ ಮತ್ತು ತುಳಸಿ ಮುನಿರಾಜುಗೌಡ ವಿರುದ್ಧ ಎಫ್‌ಐಆರ್ ದಾಖಲಿಸಿದ್ದ ಪೊಲೀಸರು, ತನಿಖೆ ಪೂರ್ಣಗೊಳಿಸಿ 28ನೇ ಎಸಿಎಂಎಂ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.