G S Patil, Former MLA-Rona constituency
G S Patil, Former MLA-Rona constituency 
ಸುದ್ದಿಗಳು

ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ: ಕಾಂಗ್ರೆಸ್‌ ಮಾಜಿ ಶಾಸಕ ಜಿ ಎಸ್‌ ಪಾಟೀಲ್‌ ಖುಲಾಸೆಗೊಳಿಸಿದ ವಿಶೇಷ ನ್ಯಾಯಾಲಯ

Bar & Bench

ಅನುಮತಿ ಪಡೆಯದೇ ಕರಪತ್ರ ಮತ್ತು ಮತದಾರರ ಹೆಸರು ಹೊಂದಿರುವ ಸ್ಟಿಕ್ಕರ್‌ ಮುದ್ರಿಸುವ ಮೂಲಕ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ್ದ ಆರೋಪಕ್ಕೆ ಗುರಿಯಾಗಿದ್ದ ಕಾಂಗ್ರೆಸ್‌ ಮುಖಂಡ ಹಾಗೂ ಗದಗ ಜಿಲ್ಲೆಯ ರೋಣದ ಮಾಜಿ ಶಾಸಕ ಜಿ ಎಸ್‌ ಪಾಟೀಲ್‌ ಅವರನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಇತ್ತೀಚೆಗೆ ಖುಲಾಸೆಗೊಳಿಸಿದೆ.

ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ (ಮ್ಯಾಜಿಸ್ಟ್ರೇಟ್‌) ನ್ಯಾಯಾಧೀಶೆ ಜೆ ಪ್ರೀತ್‌ ಅವರು ಜಿ ಎಸ್‌ ಪಾಟೀಲ್‌ ಮತ್ತು ಅವರ ಬೆಂಬಲಿಗ ಬಶೀರ್‌ ಅಹಮ್ಮದ್‌ ಅವರನ್ನು ಖುಲಾಸೆಗೊಳಿಸಿ ಆದೇಶ ಮಾಡಿದ್ದಾರೆ.

“ಸಂಜ್ಞೇತರ ಅಪರಾಧದ ಬಗ್ಗೆ ಠಾಣಾಧಿಕಾರಿ ಮಾಹಿತಿ ಸ್ವೀಕರಿಸಿದ ಬಳಿಕ ಅದನ್ನು ನಿರ್ದಿಷ್ಟ ಪುಸ್ತಕದಲ್ಲಿ ದಾಖಲಿಸಿ, ಸಿಆರ್‌ಪಿಸಿ ಸೆಕ್ಷನ್‌ 155(1) ರ ಅಡಿ ಮಾಹಿತಿದಾರರನ್ನು ಮ್ಯಾಜಿಸ್ಟ್ರೇಟ್‌ ಮುಂದೆ ಹಾಜರುಪಡಿಸಬೇಕು. ಆನಂತರ ವ್ಯಾಪ್ತಿ ಹೊಂದಿದ ಮ್ಯಾಜಿಸ್ಟ್ರೇಟ್‌ ಅವರು ಸಿಆರ್‌ಪಿಸಿ ಸೆಕ್ಷನ್‌ 155(2)ರ ತನಿಖೆ ನಡೆಸಲು ಪೊಲೀಸರಿಗೆ ಅನುಮತಿಸಬೇಕು. ಮ್ಯಾಜಿಸ್ಟ್ರೇಟ್‌ ಅನುಮತಿ ಇಲ್ಲದೇ ಪೊಲೀಸ್‌ ಅಧಿಕಾರಿಯು ತನಿಖೆ ನಡೆಸಿ, ಅಂತಿಮ ವರದಿ ಸಲ್ಲಿಸಲು ಅವಕಾಶವಿಲ್ಲ. ಹಾಲಿ ಪ್ರಕರಣದಲ್ಲಿ ಈ ನಿಯಮವನ್ನು ಪಾಲಿಸಲಾಗಿಲ್ಲ. ದಾಖಲೆಯ ಸಾಕ್ಷ್ಯ ಮತ್ತು ಪ್ರಕ್ರಿಯೆ ಪಾಲನೆಯಲ್ಲಿ ವೈಫಲ್ಯದ ಹಿನ್ನೆಲೆಯಲ್ಲಿ ಪ್ರಜಾಪ್ರತಿನಿಧಿ ಕಾಯಿದೆ ಸೆಕ್ಷನ್‌ 127(ಎ) ಅಡಿ ಆರೋಪಿಗಳನ್ನು ದೋಷಿಗಳನ್ನಾಗಿಸಲಾಗದು” ಎಂದು ನ್ಯಾಯಾಲಯವು ಆದೇಶದಲ್ಲಿ ಹೇಳಿದೆ.

ಪ್ರಕರಣದ ಹಿನ್ನೆಲೆ: 2018ರ ಏಪ್ರಿಲ್‌ 1ರಂದು ಮತದಾರರಿಗೆ ಮನವಿ ಮಾಡುವ 20 ಬಂಡಲ್‌ ಕರಪತ್ರ ಮತ್ತು ಮತದಾರರ ಹೆಸರು ಹೊಂದಿರುವ ಸ್ಟಿಕ್ಕರ್‌ಗಳನ್ನು ಒಳಗೊಂಡ ಮೂರು ಬಂಡಲ್‌ಗಳನ್ನು ಬಶೀರ್‌ ಅವರು ಖಾಸಗಿ ಬಸ್‌ನಲ್ಲಿ ಸಾಗಿಸುವಾಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದರು. ಇವುಗಳನ್ನು ಯಾರು ಮುದ್ರಿಸಿದ್ದಾರೆ ಎಂಬುದನ್ನೂ ಉಲ್ಲೇಖಿಸಿರಲಿಲ್ಲ. ಮುದ್ರಿಸಲು ಮತ್ತು ಅವುಗಳನ್ನು ಸಾಗಿಸಲು ಅನುಮತಿ ಪಡೆಯಲಾಗಿರಲಿಲ್ಲ. ಬೆಂಗಳೂರಿನಿಂದ ರೋಣಕ್ಕೆ ಅವುಗಳನ್ನು ಮತದಾರರಿಗೆ ಹಂಚಲು ತರಲಾಗಿತ್ತು. ಈ ಹಿನ್ನೆಲೆಯಲ್ಲಿ ಪ್ರಜಾಪ್ರತಿನಿಧಿ ಕಾಯಿದೆ ಸೆಕ್ಷನ್‌ 127(ಎ) ಅಡಿ ನೀತಿ ಸಂಹಿತೆ ಉಲ್ಲಂಘನೆ ಆರೋಪಿಸಿ ಪ್ರಕರಣ ದಾಖಲಿಸಲಾಗಿತ್ತು. ಹುಬ್ಬಳ್ಳಿಯ ಕೇಶ್ವಾಪುರ ಪೊಲೀಸ್‌ ಠಾಣೆಯ ಪಿಎಸ್‌ಐ ಆರೋಪ ಪಟ್ಟಿ ಸಲ್ಲಿಸಿದ್ದರು.