ಸುದ್ದಿಗಳು

'ನೋಟಾ' ಅಧಿಕ ಮತಗಳಿಸಿದರೆ ಚುನಾವಣೆ ರದ್ದುಗೊಳಿಸಬೇಕೇ? ಕೇಂದ್ರ ಹಾಗೂ ಚುನಾವಣಾ ಆಯೋಗದ ಪ್ರತಿಕ್ರಿಯೆ ಕೇಳಿದ ಸುಪ್ರೀಂ

ಒಂದೊಮ್ಮೆ ನೋಟಾ ಗರಿಷ್ಠ ಮತ ಪಡೆದರೆ ಉದ್ಭವಿಸಬಹುದಾದ ವಿಚಿತ್ರ ಸಮಸ್ಯೆಯ ಬಗ್ಗೆಯೂ ಇದೇ ವೇಳೆ ಸಿಜೆಐ ಎಸ್‌ ಎ ಬೊಬ್ಡೆ ಅವರು ಚರ್ಚಿಸಿದರು.

Bar & Bench

ಚುನಾವಣಾ ಫಲಿತಾಂಶದ ವೇಳೆ ಒಂದೊಮ್ಮೆ ‘ನೋಟಾ’ವು (ನನ್‌ ಆಫ್‌ ದಿ ಅಬವ್- ಮೇಲಿನ ಯಾರೊಬ್ಬರೂ ಬೇಡ) ಬೇರಾವುದೇ ಅಭ್ಯರ್ಥಿಗಳಿಗಿಂತ ಗರಿಷ್ಠ ಮತಗಳನ್ನು ಪಡೆದರೆ ಅಂತಹ ಚುನಾವಣಾ ಕ್ಷೇತ್ರದ ಫಲಿತಾಂಶವನ್ನು ರದ್ದುಗೊಳಿಸಿ ಮತ್ತೊಮ್ಮೆ ಹೊಸತಾಗಿ ಚುನಾವಣೆ ನಡೆಸುವಂತೆ ನಿರ್ದೇಶನ ನೀಡಬೇಕು ಎಂದು ಕೋರಿರುವ ಅರ್ಜಿಯೊಂದರ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್‌ ಈ ಕುರಿತು ಕೇಂದ್ರ ಸರ್ಕಾರ ಹಾಗೂ ಭಾರತೀಯ ಚುನಾವಣಾ ಆಯೋಗದ ಪ್ರತಿಕ್ರಿಯೆಯನ್ನು ಕೇಳಿದೆ.

ಬಿಜೆಪಿಯ ಮುಖಂಡ ಹಾಗೂ ವಕೀಲ ಆಶ್ವಿನಿ ಕುಮಾರ್‌ ಉಪಾಧ್ಯಾಯ ಸಲ್ಲಿಸಿರುವ ಅರ್ಜಿಯಲ್ಲಿ, ನೋಟಾದಿಂದಾಗಿ ರದ್ದುಗೊಂಡ ಚುನಾವಣೆಯಲ್ಲಿ ಮತ್ತೊಮ್ಮೆ ಅದೇ ಅಭ್ಯರ್ಥಿಗಳು ಹೊಸತಾಗಿ ನಡೆಯುವ ಚುನಾವಣೆಯಲ್ಲಿ ಸ್ಪರ್ಧಿಸದಂತೆ ನಿರ್ಬಂಧಿಸಲೂ ಸಹ ಕೋರಲಾಗಿದೆ.

ಪ್ರಕರಣದ ವಿಚಾರಣೆಯನ್ನು ಕೈಗೊಂಡ ಸಿಜೆಐ ಎಸ್ ಎ ಬೊಬ್ಡೆ ನೇತೃತ್ವದ ಎ ಎಸ್‌ ಬೋಪಣ್ಣ ಹಾಗೂ ವಿ ರಾಮಸುಬ್ರಮಣಿಯನ್‌ ಅವರಿದ್ದ ಪೀಠವು ಅರ್ಜಿಯ ಸಂಬಂಧ ಪ್ರತಿಕ್ರಿಯೆಯನ್ನು ಕೋರಿ ಕೇಂದ್ರ ಸರ್ಕಾರ ಹಾಗೂ ಕೇಂದ್ರ ಚುನಾವಣಾ ಆಯೋಗಕ್ಕೆ ನೋಟಿಸ್ ಜಾರಿಗೊಳಿಸಿತು.

ಆದರೆ ಇದೇ ವೇಳೆ ಸಿಜೆಐ ಅವರು, ಅಂತಹ ಸನ್ನಿವೇಶವು (ನೋಟಾದಿಂದಾಗಿ ಚುನಾವಣೆಯನ್ನು ರದ್ದುಗೊಳಿಸುವುದು) ವಿಚಿತ್ರ ಸಮಸ್ಯೆಗೆ ಕಾರಣವಾಗಬಹುದು, ಸಂಬಂಧಪಟ್ಟ ಮತಕ್ಷೇತ್ರವು ಯಾರ ಪ್ರತಿನಿಧಿತ್ವವನ್ನೂ ಹೊಂದದ ಕಾರಣಕ್ಕೆ ಸಂಸತ್ತು/ವಿದಾನಸಭೆಗಳ ಕಾರ್ಯನಿರ್ವಹಣೆಗೆ ಧಕ್ಕೆಯುಂಟು ಮಾಡಬಹುದು ಎಂದು ಅಭಿಪ್ರಾಯಪಟ್ಟರು. “ಒಂದು ವೇಳೆ ರಾಜಕೀಯ ಪಕ್ಷವು ತನ್ನ ಪ್ರಭಾವದಿಂದ ಅಭ್ಯರ್ಥಿಗಳನ್ನು ತಿರಸ್ಕರಿಸುವಂತೆ ಮಾಡುವಲ್ಲಿ ಸಫಲವಾದರೆ ಆಗ ಸಂಸತ್ತಿನಲ್ಲಿ ಸ್ಥಾನಗಳು ಖಾಲಿ ಉಳಿಯಲಿವೆ. ಅಂತಹ ಸನ್ನಿವೇಶದಲ್ಲಿ ಏನಾಗಲಿದೆ?” ಎಂದು ಪ್ರಶ್ನಿಸಿದರು.

ಅರ್ಜಿದಾರರನ್ನು ಪ್ರತಿನಿಧಿಸಿದ ಹಿರಿಯ ವಕೀಲೆ ಡಾ. ಮೇನಕಾ ಗುರುಸ್ವಾಮಿ ಅವರು, “ತಿರಸ್ಕರಿಸಲ್ಪಡುವ ಹಕ್ಕು ಇದೆ ಎಂದಾಗ ರಾಜಕೀಯ ಪಕ್ಷಗಳು ಸಹಜವಾಗಿಯೇ ತಿರಸ್ಕರಿಸಲ್ಪಡದಂತಹ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತವೆ,” ಎಂದರು. ಆದರೆ ಸಿಜೆಐ ಅವರು “ಅಂತಹ ಸಲಹೆಯನ್ನು ಒಪ್ಪಿಕೊಳ್ಳುವುದು ಕಷ್ಟ,” ಎಂದರು.

ವಕೀಲ ಅಶ್ವನಿ ಕುಮಾರ್ ದುಬೆ ಅವರ ಮೂಲಕ ಸಲ್ಲಿಸಲಾದ ಅರ್ಜಿಯಲ್ಲಿ, ರಾಜಕೀಯ ಪಕ್ಷಗಳು ಕ್ಷೇತ್ರದ ಮತದಾರರನ್ನು ಸಂಪರ್ಕಿಸದೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತವೆ. ಇದು ಅತ್ಯಂತ ಪ್ರಜಾಪ್ರಭುತ್ವ ವಿರೋಧಿ ನಡೆಯಾಗಿದೆ. ಇದರಿಂದಾಗಿ ಅನೇಕ ಬಾರಿ ಕ್ಷೇತ್ರದ ಮತದಾರರು ತಮ್ಮ ಮುಂದಿರಿಸಲಾದ ಅಭ್ಯರ್ಥಿಗಳ ಬಗ್ಗೆ ಸಂಪೂರ್ಣವಾಗಿ ಅಸಂತುಷ್ಟರಾಗಿರುತ್ತಾರೆ ಎಂದಿದೆ.

ಪ್ರಕರಣವನ್ನು ನ್ಯಾಯಾಲಯವು ನಾಲ್ಕು ವಾರಗಳ ನಂತರ ಮತ್ತೆ ಆಲಿಸಲಿದೆ.