INC MLA N A Haris and Karnataka HC 
ಸುದ್ದಿಗಳು

ಅಸಮರ್ಪಕ ನಾಮಪತ್ರ ಸ್ವೀಕಾರ ಗೆಲುವಿಗೆ ಹೇಗೆ ಅಡ್ಡಿ ಎಂಬುದ ವಿವರಿಸಿ: ಬಿಜೆಪಿ ಅಭ್ಯರ್ಥಿ ಚುನಾವಣಾ ಅರ್ಜಿಗೆ ಆಕ್ಷೇಪ

ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಶಾಸಕ ಎನ್ ಎ ಹ್ಯಾರಿಸ್ ತಮ್ಮ ಆಸ್ತಿ ಮಾಹಿತಿಯನ್ನು ಸಮರ್ಪಕವಾಗಿ ಒದಗಿಸಿಲ್ಲ. ಈ ಅಸಮರ್ಪಕ ನಾಮಪತ್ರ ಸ್ವೀಕಾರ ಗೆಲುವಿನ ಮೇಲೆ ಪರಿಣಾಮ ಬೀರಿದೆ ಎನ್ನುವುದು ಅರ್ಜಿದಾರರ ವಾದ.

Bar & Bench

ಅಸಮರ್ಪಕ ನಾಮಪತ್ರ ಸ್ವೀಕಾರವು ಪ್ರತಿಸ್ಪರ್ಧಿಯ ಗೆಲುವಿಗೆ ಹೇಗೆ ಅಡ್ಡಿಯಾಗುತ್ತದೆ ಎಂಬುದನ್ನು ವಿವರಿಸದ ಚುನಾವಣಾ ತಕರಾರು ಅರ್ಜಿಯನ್ನು ತಿರಸ್ಕರಿಸುವಂತೆ ಕಾಂಗ್ರೆಸ್‌ ಶಾಸಕ ಎನ್‌ ಹ್ಯಾರಿಸ್‌ ಪರ ವಕೀಲರು ಕರ್ನಾಟಕ ಹೈಕೋರ್ಟ್‌ಗೆ ಗುರುವಾರ ಮನವಿ ಮಾಡಿದ್ದಾರೆ.

ಚುನಾವಣೆ ವೇಳೆ ಸಲ್ಲಿಸಲಾದ ಫಾರಂ ನಂ. 26ರಲ್ಲಿ ಶಾಂತಿನಗರ ವಿಧಾನಸಭಾ ಕ್ಷೇತ್ರದ ಶಾಸಕ ಹ್ಯಾರಿಸ್‌ ತಮ್ಮ ಆಸ್ತಿ ವಿವರಗಳನ್ನು ಸರಿಯಾಗಿ ಘೋಷಿಸಿಲ್ಲ. ಹೀಗಾಗಿ, ಅವರನ್ನು ಅನರ್ಹಗೊಳಿಸಿ ತಮ್ಮನ್ನು ವಿಜೇತ ಎಂದು ಘೋಷಿಸಬೇಕು ಎಂದು ಕೋರಿ ಪರಾಜಿತ ಬಿಜೆಪಿ ಅಭ್ಯರ್ಥಿ ಕೆ ಶಿವಕುಮಾರ್ ಸಲ್ಲಿಸಿರುವ ಚುನಾವಣಾ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಸೂರಜ್‌ ಗೋವಿಂದರಾಜ್ ಅವರ ನೇತೃತ್ವದ ಏಕಸದಸ್ಯ ಪೀಠ ವಿಚಾರಣೆ ನಡೆಸಿತು. ಈ ವೇಳೆ, ಪ್ರತಿವಾದಿ ಹ್ಯಾರಿಸ್‌ ಪರ ವಕೀಲರು ಗಂಭೀರ ಆಕ್ಷೇಪ ವ್ಯಕ್ತಪಡಿಸಿದರು.

ಅಸಮರ್ಪಕ ನಾಮಪತ್ರ ಸ್ವೀಕರಿಸಿದ ಕಾರಣ ಅದು ಪ್ರತಿಸ್ಪರ್ಧಿಯ ಗೆಲುವಿಗೆ ಹೇಗೆ ಅಡ್ಡಿ ಉಂಟು ಮಾಡಿದೆ ಎಂಬ ಆರೋಪವನ್ನು ಸಾಬೀತುಪಡಿಸಬೇಕು ಮತ್ತು ಅಂತಹ ಕ್ರಮ ಸೋಲಿಗೆ ಹೇಗೆ ಕಾರಣವಾಯಿತು ಎಂಬ ನಿಖರ ವಿಚಾರವನ್ನು ಅರ್ಜಿದಾರರು ತಮ್ಮ ದಾವೆಯಲ್ಲಿ ಉಲ್ಲೇಖಿಸಬೇಕು. ಆದರೆ, ಕೆ ಶಿವಕುಮಾರ್ ಸಲ್ಲಿಸಿರುವ ಚುನಾವಣಾ ತಕರಾರು ಅರ್ಜಿಯಲ್ಲಿ ಇಂತಹ ಯಾವುದೇ ಅಂಶಗಳು ಇಲ್ಲದ ಕಾರಣ ಈ ನಿರರ್ಥಕ ಅರ್ಜಿಯನ್ನು ತಿರಸ್ಕರಿಸಬೇಕು ಎಂದು ಕಾಂಗ್ರೆಸ್‌ ಶಾಸಕ ಎನ್‌ ಎ ಹ್ಯಾರಿಸ್ ಪರ ವಕೀಲರು ಕರ್ನಾಟಕ ಹೈಕೋರ್ಟ್‌ಗೆ ಮನವಿ ಮಾಡಿದರು.

ಶಾಸಕ ಹ್ಯಾರಿಸ್‌ ಅವರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಉದಯ ಹೊಳ್ಳ ಅವರು, ಅರ್ಜಿದಾರರು ಹ್ಯಾರಿಸ್‌ ಅವರಿಗೆ ಕಿರುಕುಳ ನೀಡಲು ಮತ್ತು ಮಾನಸಿಕ ಯಾತನೆ ಉಂಟು ಮಾಡುವ ಉದ್ದೇಶದಿಂದ ಅರ್ಜಿ ಸಲ್ಲಿಸಿದ್ದಾರೆ ಎಂದು ಆಕ್ಷೇಪಿಸಿದರು.

ಅರ್ಜಿಯಲ್ಲಿ ವಿವರಿಸಿರುವ ಅಂಶಗಳ ಆಧಾರದಲ್ಲಿ ಹ್ಯಾರಿಸ್‌ ಅವರ ವಿರುದ್ಧದ ಆರೋಪಗಳ ವಿಚಾರಣೆಗಾಗಿ ಪ್ರತಿವಾದಿಗಳನ್ನು ಅರೆ ಅಪರಾಧಿಕ ನ್ಯಾಯಿಕ ಪ್ರಕ್ರಿಯೆಗೆ ಒಳಪಡಿಸಬಾರದು. ಈ ಹಂತದಲ್ಲಿಯೇ ಈ ಅರ್ಜಿಯನ್ನು ತಿರಸ್ಕರಿಸಬೇಕು ಎಂದು ಕೋರಿ ಸುಪ್ರೀಂ ಕೋರ್ಟ್‌ನ ಪೂರ್ವ ನಿದರ್ಶನದ ತೀರ್ಪೊಂದನ್ನು ಉಲ್ಲೇಖಿಸಿದರು.

ಪ್ರತಿವಾದಿ ಪರ ಹಾಜರಿದ್ದ ಹಿರಿಯ ವಕೀಲ ವಿವೇಕ ರೆಡ್ಡಿ ಅವರು ಇದಕ್ಕೆ ಪ್ರತಿಯಾಗಿ ತಮ್ಮ ವಾದವನ್ನು ಸಮರ್ಥಿಸಿಕೊಳ್ಳುವ ಸುಪ್ರೀಂ ಕೋರ್ಟ್‌ನ ಮತ್ತೊಂದು ಪೂರ್ವ ನಿದರ್ಶನದ ತೀರ್ಪು ಉಲ್ಲೇಖಿಸಿದರು. ಉಭಯ ಪಕ್ಷಕಾರರ ವಾದ–ಪ್ರತಿವಾದ ಆಲಿಸಿದ ಪೀಠವು ಸುಪ್ರೀಂ ಕೋರ್ಟ್‌ನ ಎರಡೂ ತೀರ್ಪುಗಳ ಪರಾಮರ್ಶೆ ನಡೆಸುವುದಾಗಿ ತಿಳಿಸಿ ವಿಚಾರಣೆಯನ್ನು ಜನವರಿ 29ಕ್ಕೆ ಮುಂದೂಡಿತು.

ಅರ್ಜಿದಾರರ ಆಕ್ಷೇಪವೇನು: 2023ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಶಾಂತಿನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಶಾಸಕ ಎನ್ ಎ ಹ್ಯಾರಿಸ್ ತಮ್ಮ ಚರ ಮತ್ತು ಸ್ಥಿರಾಸ್ತಿಗಳ ಮಾಹಿತಿಯನ್ನು ಸಮರ್ಪಕವಾಗಿ ಒದಗಿಸಿಲ್ಲ. ಸುಳ್ಳು ಘೋಷಣೆಯ ಪ್ರಮಾಣ ಪತ್ರ ಸಲ್ಲಿಸಿದ್ದಾರೆ. ಚರ ಮತ್ತು ಸ್ಥಿರಾಸ್ತಿಗಳನ್ನು ವಾಸ್ತವಕ್ಕಿಂತಲೂ ಕಡಿಮೆ ಅಂದಾಜಿನಲ್ಲಿ ದಾಖಲಿಸಿದ್ದಾರೆ. ಹೀಗಾಗಿ, ಈ ನಾಮಪತ್ರ ಸ್ವೀಕರಿಸಿರುವುದರಿಂದ ಅದು ಚುನಾವಣಾ ಫಲಿತಾಂಶದ ಮೇಲೆ ಪರಿಣಾಮ ಉಂಟು ಮಾಡಿದ್ದು ಅವರನ್ನು ಅನರ್ಹಗೊಳಿಸಬೇಕು ಎಂಬುದು ಅರ್ಜಿದಾರರ ಮನವಿಯಾಗಿದೆ.