CM Siddaramaiah and Karnataka HC 
ಸುದ್ದಿಗಳು

ಚುನಾವಣಾ ತಕರಾರು ಅರ್ಜಿಯು ಸುಳ್ಳುಗಳ ಸರಮಾಲೆ, ದುರುದ್ದೇಶಪೂರಿತ: ಸಿದ್ದರಾಮಯ್ಯ ಪರ ಪ್ರೊ. ರವಿವರ್ಮ ಕುಮಾರ್ ವಾದ

"ಗ್ಯಾರಂಟಿಗಳ ಪ್ರಣಾಳಿಕೆ ಪಕ್ಷಕ್ಕೆ ಸೇರಿದ್ದು, ಇದನ್ನು ನನ್ನ ವೆಚ್ಚಕ್ಕೆ ಸೇರಿಸಬಹುದೇ? ಗ್ಯಾರಂಟಿ ಯೋಜನೆ ನನ್ನ ಚುನಾವಣಾ ವೆಚ್ಚಕ್ಕೆ ಸೇರುತ್ತದೆಯೇ? ಈ ಎಲ್ಲಾ ಆರೋಪಗಳನ್ನು ಮುಖ್ಯಮಂತ್ರಿಯಾದ ನಂತರ ಮಾಡಲಾಗಿದೆ” ಎಂದು ಸಿದ್ದರಾಮಯ್ಯ ಪರ ವಾದ.

Bar & Bench

ಚುನಾವಣಾ ಅಕ್ರಮಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧ ಸುಳ್ಳಿನ ಸರಪಳಿಯನ್ನೇ ಹೆಣೆಯಲಾಗಿದ್ದು, ನಾನು ಮುಖ್ಯಮಂತ್ರಿಯಾದ ಬಳಿಕ ದುರುದ್ದೇಶಪೂರಿತವಾಗಿ ಆರೋಪ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರ ಹಿರಿಯ ವಕೀಲ ಪ್ರೊ. ರವಿವರ್ಮ ಕುಮಾರ್‌ ಅವರು ಬುಧವಾರ ಕರ್ನಾಟಕ ಹೈಕೋರ್ಟ್‌ ಮುಂದೆ ಬಲವಾಗಿ ಪ್ರತಿಪಾದಿಸಿದರು.

ವರುಣಾ ವಿಧಾನಸಭಾ ಕ್ಷೇತ್ರದ ಕೂಡನಹಳ್ಳಿಯ ಕೆ ಶಂಕರ ಅವರು ಸಿದ್ದರಾಮಯ್ಯ ಅವರ ವಿರುದ್ಧ ಸಲ್ಲಿಸಿರುವ ಚುನಾವಣಾ ಅಕ್ರಮಗಳ ಕುರಿತಾದ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಎಸ್‌ ಸುನಿಲ್‌ ದತ್‌ ಯಾದವ್‌ ಅವರ ನೇತೃತ್ವದ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

“ಚುನಾವಣಾ ಅಕ್ರಮಕ್ಕೆ ಸಂಬಂಧಿಸಿದಂತೆ ನನ್ನ ವಿರುದ್ಧ 11 ಆರೋಪಗಳನ್ನು ಮಾಡಲಾಗಿದೆ. ಈ ಪೈಕಿ ಚುನಾವಣಾ ವೆಚ್ಚದ ಬಗ್ಗೆ ಪ್ರಮುಖ ಆರೋಪ ಮಾಡಲಾಗಿದೆ. ಅರ್ಜಿಯು ಸುಳ್ಳುಗಳಿಂದ ಕೂಡಿದ್ದು, ಮುಖ್ಯಮಂತ್ರಿಯಾದ ಬಳಿಕ ದುರುದ್ದೇಶಪೂರಿತ ಆರೋಪ ಮಾಡಲಾಗಿದೆ” ಎಂದು ಪ್ರೊ. ಕುಮಾರ್‌ ಹೇಳಿದರು.

ಸಿದ್ದರಾಮಯ್ಯ ಪರವಾಗಿ ಒಂದೂವರೆ ತಾಸಿಗೂ ಅಧಿಕ ಕಾಲ ವಾದಿಸಿದ ಹಿರಿಯ ವಕೀಲ ಪ್ರೊ. ರವಿವರ್ಮ ಕುಮಾರ್‌ ಅವರು “ಚುನಾವಣಾಧಿಕಾರಿ ಅಥವಾ ಚುನಾವಣಾ ಆಯೋಗಕ್ಕೆ ನಾನು ಚುನಾವಣಾ ವೆಚ್ಚದ ಮಿತಿ ಮೀರಿದ್ದೇನೆ ಎಂಬುದಕ್ಕೆ ಸಂಬಂಧಿಸಿದಂತೆ ದೂರು ನೀಡಿಲ್ಲ. ಈ ಎಲ್ಲಾ ಆರೋಪಗಳನ್ನು ನಾನು ಮುಖ್ಯಮಂತ್ರಿಯಾದ ಬಳಿಕ ಮಾಡಲಾಗಿದೆ. ಅಲ್ಲಿಯವರೆಗೆ ಇರಲಿಲ್ಲ. ನಾನು ಸಿಎಂ ಆದ ಬಳಿಕ ಆರೋಪಗಳನ್ನು ಸೃಷ್ಟಿ ಮಾಡಲಾಗಿದೆ” ಎಂದು ಆಕ್ಷೇಪಿಸಿದರು.

“ಅರ್ಜಿದಾರರು ನ್ಯಾಯಾಲಯವನ್ನು ಮಾತ್ರ ದಾರಿ ತಪ್ಪಿಸುತ್ತಿಲ್ಲ. ಇಡೀ ಜಗತ್ತನ್ನು ದಾರಿ ತಪ್ಪಿಸಿದ್ದಾರೆ. ನಾನು ಎಷ್ಟು ವೆಚ್ಚ ಮಾಡಿದ್ದೇನೆ ಎಂಬುದು ಮುಖ್ಯವಾಗುತ್ತದೆ. ಅದನ್ನು ಉಲ್ಲೇಖಿಸಿಲ್ಲ. ಗ್ಯಾರಂಟಿಗಳನ್ನು ಒಳಗೊಂಡ ಪ್ರಣಾಳಿಕೆ ಪಕ್ಷಕ್ಕೆ ಸೇರಿದ್ದು, ಇದನ್ನು ನನ್ನ ವೆಚ್ಚಕ್ಕೆ ಸೇರಿಸಬಹುದೇ? ಗ್ಯಾರಂಟಿ ಯೋಜನೆ ಘೋಷಿಸಲಾಗಿದೆ ಎಂದು ಹೇಳಿದ್ದಾರೆ. ಇದು ನನ್ನ ಚುನಾವಣಾ ವೆಚ್ಚಕ್ಕೆ ಸೇರುತ್ತದೆಯೇ, ನಾನು ಮುಖ್ಯಮಂತ್ರಿಯಾದ ಮೇಲೆ ಇದು ಅನ್ವಯಿಸುವುದೇ?” ಎಂದು ಪ್ರಶ್ನಿಸಿದರು.

Prof. Ravi Varma Kumar and Karnataka HC

“ಎಷ್ಟು ಹಣ ವೆಚ್ಚ ಮಾಡಿದ್ದೇನೆ. ಯಾವಾಗ, ಹೇಗೆ, ಎಲ್ಲಿ ವೆಚ್ಚ ಮಾಡಿದ್ದೇನೆ ಎಂಬ ಗುಸುಗುಸು ಸಹ ಅರ್ಜಿಯಲ್ಲಿಲ್ಲ. ನನ್ನ ವಾಹನಗಳಿಗೆ ವೆಚ್ಚ ಮಾಡಿದ್ದೇನೆಯೇ? ಕಾರಿಗೆ, ಭಿತ್ತಿಪತ್ರ, ಪೋಸ್ಟರ್‌ಗಾಗಿ ವೆಚ್ಚ ಮಾಡಿದ್ದೇನೆಯೇ? ಯಾವಾಗ ಮಾಡಿದ್ದೇನೆ? ನನ್ನ ಕ್ಷೇತ್ರದಲ್ಲಿ ನೂರಾರು ಗ್ರಾಮಗಳಿವೆ. ಯಾವ ಹಳ್ಳಿಯಲ್ಲಿ ವೆಚ್ಚ ಮಾಡಿದ್ದೇನೆ. ಮೈಸೂರು ನಗರ ನನ್ನ ಕ್ಷೇತ್ರದ ವ್ಯಾಪ್ತಿಗೆ ಬರುತ್ತದೆ. ನಗರದಲ್ಲಿ ನಾನು ವೆಚ್ಚ ಮಾಡಿದ್ದೇನೆಯೇ ಅಥವಾ ಹಳ್ಳಿಗಳಲ್ಲಿ ವೆಚ್ಚ ಮಾಡಿದ್ದೇನೆಯೇ? ಈ ಕುರಿತು ಯಾವುದೇ ವಿಚಾರ ಅರ್ಜಿಯಲ್ಲಿ ಉಲ್ಲೇಖಿಸಿಲ್ಲ” ಎಂದು ಆಕ್ಷೇಪಿಸಿದರು.

“ಇಡೀ ಚುನಾವಣಾ ವೆಚ್ಚದ ಹಣವನ್ನು ನಾನು ಒಂದೇ ದಿನ ವೆಚ್ಚ ಮಾಡದಿರಬಹುದು. ಉಮೇದುವಾರಿಕೆ ಸಲ್ಲಿಸಿದ ಬಳಿಕ ವೆಚ್ಚ ಮಾಡಿರಬಹುದು. ಎರಡು ವಾರಗಳ ನಂತರ ಮಾಡಿರಬಹುದು. ನಾನು 40 ಲಕ್ಷ ರೂಪಾಯಿಯಿಂದ 20 ಕೋಟಿ ರೂಪಾಯಿ ಹಣ ವೆಚ್ಚ ಮಾಡಿದ್ದೇನೆ ಎಂಬುದು ಅರ್ಜಿದಾರರ ವಾದವಾಗಿದ್ದರೆ ಇದಕ್ಕೆ ಪೂರಕವಾಗಿ ಚುನಾವಣಾ ವೆಚ್ಚ ಮಿತಿ ಮೀರಿದ್ದೇನೆ ಎಂಬುದಕ್ಕೆ ದತ್ತಾಂಶ ಸಲ್ಲಿಸಬೇಕಿತ್ತು” ಎಂದರು.

“ಅಕ್ಕಿ ಬೆಂದಿದೆಯೇ ಎಂದು ನೋಡಲು ಇಡೀ ಪಾತ್ರೆಯಲ್ಲಿನ ಅಕ್ಕಿ ಪರಿಶೀಲಿಸಬೇಕಿಲ್ಲ. ಒಂದು ಕಾಳನ್ನು ಬೆಂದಿದೆಯೇ ಎಂದು ನೋಡಿದರೆ ಸಾಕಾಗುತ್ತದೆ. ನಾನು 40 ಲಕ್ಷ ರೂಪಾಯಿಗೂ ಅಧಿಕ ಹಣ ವೆಚ್ಚ ಮಾಡಿದ್ದೇನೆ ಎಂಬುದು ಅರ್ಜಿದಾರರ ಆರೋಪವಾಗಿದೆ. ಇದನ್ನು ಅರ್ಜಿಯಲ್ಲಿ ವಿವರಿಸಿಲ್ಲ. ಚುನಾವಣಾ ಅಕ್ರಮ ಎಸಗಲಾಗಿದೆ ಎಂಬುದಕ್ಕೆ ಅವರು ಎಲ್ಲಿ, ಹೇಗೆ ನಡೆದಿದೆ ಎಂಬುದರ ಅಫಿಡವಿಟ್‌ ಅನ್ನು ಸಲ್ಲಿಕೆ ಮಾಡಬೇಕು. ಅದನ್ನೂ ಮಾಡಿಲ್ಲ” ಎಂದರು.

ಮುಂದುವರಿದು, ಅರ್ಜಿಯಲ್ಲಿ ಸುಳ್ಳಿನ ಸರಮಾಲೆಯಿಂದ ಕೂಡಿದೆ ಎಂದು ಕಟುವಾಗಿ ಆಕ್ಷೇಪಿಸಿದ ಪ್ರೊ. ರವಿವರ್ಮ ಕುಮಾರ್‌ ಅವರು “ಹಳಿ ಮೇಲೆ ರೈಲು ಬಿಟ್ಟರೆ ಅದು ಒಂದು ಗುರಿ ತಲುಪುತ್ತದೆ. ಹೀಗಾಗಿಯ ಹಳಿಯ ಮೇಲೆ ರೈಲು ಬಿಡಬೇಕು” ಎಂದು ಅರ್ಜಿದಾರರ ಕುರಿತು ವ್ಯಂಗ್ಯವಾಡಿದರು.

“ಸಿದ್ದರಾಮಯ್ಯ ಮುಖ್ಯಮಂತ್ರಿಯಾದ ಬಳಿಕ ದುರುದ್ದೇಶಪೂರಿತವಾದ ಆರೋಪ ಮಾಡಲಾಗಿದೆ. ಇದು ದ್ವೇಷದಿಂದ ಕೂಡಿದ ಆರೋಪವಾಗಿದೆ. ಸೂಕ್ತ ಮತ್ತು ನಿರ್ದಿಷ್ಟ ವಿಚಾರ ಒಳಗೊಂಡಿರದ ಇದನ್ನು ಚುನಾವಣಾ ಅರ್ಜಿ ಎನ್ನಬಹುದೇ? ಯಾವುದೇ ಪರಿಶೀಲನೆ ಇಲ್ಲ. ಅಫಿಡವಿಟ್‌ ಇಲ್ಲ. ವಾಸ್ತವಿಕ ಅಂಶಗಳನ್ನು ಅಡಕಗೊಳಿಸಬೇಕಿತ್ತು. ಆದರೆ, ಸುಳ್ಳುಗಳನ್ನು ಅರ್ಜಿಯಲ್ಲಿ ತುಂಬಿದ್ದಾರೆ” ಎಂದು ಟೀಕಿಸಿದರು.

ಅರ್ಜಿದಾರರ ಪರ ಹಿರಿಯ ವಕೀಲೆ ಪ್ರಮೀಳಾ ನೇಸರ್ಗಿ ಇದ್ದರು. ಅಂತಿಮವಾಗಿ ವಿಚಾರಣೆಯನ್ನು ಪೀಠವು ಮಾರ್ಚ್‌ 25ಕ್ಕೆ ಮುಂದೂಡಿತು.