Dr. Prabha Mallikarjun and Shreyas Patel and Karnataka HC Facebook
ಸುದ್ದಿಗಳು

ಸಂಸದರಾದ ಪ್ರಭಾ ಮಲ್ಲಿಕಾರ್ಜುನ್‌, ಶ್ರೇಯಸ್‌ ಪಟೇಲ್‌ ಆಯ್ಕೆ ಅಸಿಂಧುಗೊಳಿಸಲು ಕೋರಿ ಹೈಕೋರ್ಟ್‌ನಲ್ಲಿ ಅರ್ಜಿ

ಸಂಸದ ಶ್ರೇಯಸ್‌ ಪಟೇಲ್‌ ಆಯ್ಕೆ ಅಸಿಂಧು ಕೋರಿ ವಕೀಲ ಜಿ ದೇವರಾಜೇಗೌಡ ಪುತ್ರ ಡಿ.ಚರಣ್‌ ಚುನಾವಣಾ ಅರ್ಜಿ ಸಲ್ಲಿಸಿದ್ದಾರೆ. ಪ್ರಭಾ ಆಯ್ಕೆ ವಿರೋಧಿಸಿ ಪರಾಜಿತ ಅಭ್ಯರ್ಥಿ ಬಿಜೆಪಿಯ ಗಾಯಿತ್ರಿ ಸಿದ್ದೇಶ್ವರ್‌ ಅರ್ಜಿ ಸಲ್ಲಿಸಿದ್ದಾರೆ.

Bar & Bench

ಕಳೆದ ಲೋಕಸಭಾ ಚುನಾವಣೆಯಲ್ಲಿ ಹಾಸನ ಕ್ಷೇತ್ರದಿಂದ ಚುನಾಯಿತರಾಗಿರುವ ಕಾಂಗ್ರೆಸ್‌ನ ಶ್ರೇಯಸ್‌ ಎಂ.ಪಟೇಲ್‌ ಮತ್ತು ದಾವಣೆಗೆರೆ ಕ್ಷೇತ್ರದಿಂದ ಆಯ್ಕೆಯಾಗಿರುವ ಡಾ.ಪ್ರಭಾ ಮಲ್ಲಿಕಾರ್ಜುನ್‌ ಆಯ್ಕೆಯ ಸಿಂಧುತ್ವವನ್ನು ಪ್ರಶ್ನಿಸಿ ಕರ್ನಾಟಕ ಹೈಕೋರ್ಟ್‌ನಲ್ಲಿ ಗುರುವಾರ ಎರಡು ಪ್ರತ್ಯೇಕ ಚುನಾವಣಾ ಅರ್ಜಿಗಳನ್ನು ಸಲ್ಲಿಸಲಾಗಿದೆ.

ಆ ಅರ್ಜಿಗಳು ಇನ್ನೂ ಕಚೇರಿಯ ಪರಿಶೀಲನೆಗೆ ಒಳಪಟ್ಟು ವಿಚಾರಣೆಗೆ ಬರಬೇಕಿದೆ. ಹಾಸನ ಸಂಸದ ಶ್ರೇಯಸ್‌ ಪಟೇಲ್‌ ಆಯ್ಕೆ ಅಸಿಂಧು ಕೋರಿ ವಕೀಲ ಜಿ ದೇವರಾಜೇಗೌಡ ಪುತ್ರ ಡಿ.ಚರಣ್‌ ಚುನಾವಣಾ ಅರ್ಜಿ ಸಲ್ಲಿಸಿದ್ದಾರೆ. ಶ್ರೇಯಸ್‌ ಪಟೇಲ್‌ ಅವರ ನಾಮಪತ್ರ ಕ್ರಮಬದ್ಧವಾಗಿಲ್ಲ ಎಂದು ಘೋಷಿಸುವಂತೆ ಕೋರಲಾಗಿದೆ. ಶ್ರೇಯಸ್‌ ಪಟೇಲ್‌ ಹಿಂದಿನ ಐದು ವರ್ಷಗಳ ಆದಾಯ ತೆರಿಗೆ ಪಾವತಿ ಸಲ್ಲಿಸಿಲ್ಲ. ಆ ಕುರಿತು ಪ್ರಮಾಣ ಪತ್ರದಲ್ಲಿ ಸಂಪೂರ್ಣ ಮಾಹಿತಿ ನೀಡಿಲ್ಲಎಂದು ದೂರಲಾಗಿದೆ.

ಚುನಾವಣಾ ವೆಚ್ಚದ ಬಗ್ಗೆಯೂ ತಪ್ಪು ಮಾಹಿತಿ ನೀಡಿದ್ದಾರೆ. ನಿಗದಿಗಿಂತ ಹೆಚ್ಚಿನ ಹಣ ಖರ್ಚು ಮಾಡಿದ್ದಾರೆ. ಆ ಕುರಿತು ಸರಿಯಾದ ಲೆಕ್ಕವನ್ನು ಆಯೋಗಕ್ಕೆ ಸಲ್ಲಿಕೆ ಮಾಡಿಲ್ಲ. ಹಾಗಾಗಿ ಅವರ ಆಯ್ಕೆಯನ್ನೇ ರದ್ದುಗೊಳಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.

ದಾವಣಗೆರೆ ಸಂಸದರಾಗಿರುವ ದಂತವೈದ್ಯೆ ಡಾ. ಪ್ರಭಾ ಮಲ್ಲಿಕಾರ್ಜುನ ಆಯ್ಕೆ ಅಸಿಂಧು ಕೋರಿ ಬಿಜೆಪಿಯ ಪರಾಜಿತ ಅಭ್ಯರ್ಥಿ ಜಿ ಎಸ್‌ ಗಾಯತ್ರಿ ಸಿದ್ದೇಶ್ವರ ಸಲ್ಲಿಸಿರುವ ಅರ್ಜಿಯಲ್ಲಿ, ‘ಪ್ರಭಾ ಅವರು, ಮತದಾರರಿಗೆ ಕಾಂಗ್ರೆಸ್‌ ಗ್ಯಾರಂಟಿ ಕಾರ್ಡ್‌ ವಿತರಿಸುವ ಮೂಲಕ ಮಹಿಳೆಯರಿಗೆ ವರ್ಷವೊಂದಕ್ಕೆ ₹1 ಲಕ್ಷ ಕೊಡುವ ಭರವಸೆ ನೀಡಿದ್ದಾರೆ. ಇದು ಪ್ರಜಾಪ್ರತಿನಿಧಿ ಕಾಯ್ದೆ–1951ರ ಸೆಕ್ಷನ್‌ 123(1), 123(2), 123(4) ಮತ್ತು 123(6)ಕ್ಕೆ ವಿರುದ್ಧವಾಗಿದೆ. ಮತದಾರರಿಗೆ ಲಂಚದ ಆಮಿಷ ಒಡ್ಡಿರುವ ಮತ್ತು ಚುನಾವಣಾ ಅಕ್ರಮಗಳನ್ನು ನಡೆಸಿರುವ ಇವರ ಆಯ್ಕೆಯನ್ನು ಅಸಿಂಧು ಎಂದು ಘೋಷಿಸಬೇಕು" ಎಂದು ಮನವಿ ಮಾಡಿದ್ದಾರೆ.