Attorney General R Venkataramani and Supreme Court A1
ಸುದ್ದಿಗಳು

ರಾಜಕೀಯ ಪಕ್ಷಗಳ ನಿಧಿಯ ಮೂಲದ ಬಗ್ಗೆ ತಿಳಿದುಕೊಳ್ಳುವ ಹಕ್ಕು ಪ್ರಜೆಗಳಿಗೆ ಇಲ್ಲ: ಸುಪ್ರೀಂ ಮುಂದೆ ಎಜಿ ಹೇಳಿಕೆ

ನಾಳೆ (ಅಕ್ಟೋಬರ್ 31)ರಂದು ಚುನಾವಣಾ ಬಾಂಡ್ ಪ್ರಕರಣದ ವಿಚಾರಣೆಯನ್ನು ಸಾಂವಿಧಾನಿಕ ಪೀಠ ಆರಂಭಿಸಲಿದೆ.

Bar & Bench

ಚುನಾವಣಾ ಬಾಂಡ್‌ಗಳ ಸಿಂಧುತ್ವ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ಆರಂಭವಾಗಲಿರುವ ಹಿನ್ನೆಲೆಯಲ್ಲಿ ಭಾರತದ ಅಟಾರ್ನಿ ಜನರಲ್ (ಎಜಿ) ಆರ್ ವೆಂಕಟರಮಣಿ ಅವರು ರಾಜಕೀಯ ಪಕ್ಷಗಳ ನಿಧಿಯ ಮೂಲದ ಬಗ್ಗೆ ತಿಳಿದುಕೊಳ್ಳುವ ಹಕ್ಕು ಪ್ರಜೆಗಳಿಗೆ ಇಲ್ಲ ಎಂದು ಸುಪ್ರೀಂ ಕೋರ್ಟ್‌ಗೆ ತಿಳಿಸಿದ್ದಾರೆ.

ಎಜಿ ಅವರ ಈ ವಾದವು ಕೇಂದ್ರ ಸರ್ಕಾರದ ಪರವಾಗಿ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಲಿಖಿತ ವಾದದ ಭಾಗವಾಗಿದೆ.

ರಾಜಕೀಯ ಪಕ್ಷಗಳಿಗೆ ಅನಾಮಧೇಯ ರೀತಿಯಲ್ಲಿ ದೇಣಿಗೆ ನೀಡಲು ಅನುಕೂಲ ಕಲ್ಪಿಸುವ ಚುನಾವಣಾ ಬಾಂಡ್‌ ಯೋಜನೆ ಸಮರ್ಥಿಸಿಕೊಂಡಿರುವ ಎ ಜಿ ವೆಂಕಟರಮಣಿ, ಇದರಿಂದ ಅಸ್ತಿತ್ವದಲ್ಲಿರುವ ಯಾವುದೇ ಹಕ್ಕುಗಳಿಗೆ ಧಕ್ಕೆಯಾಗುವುದಿಲ್ಲ ಹಾಗಾಗಿ ಸಂವಿಧಾನದ ಭಾಗ IIIರ ಅಡಿಯ ಮೂಲಭೂತ ಹಕ್ಕುಗಳಿಗೆ ಇದು ವಿರುದ್ಧವಾಗಿದೆ ಎನ್ನಲಾಗದು ಎಂದಿದ್ದಾರೆ.

ಪ್ರಕರಣ ದಾಖಲಾದ ಆರು ವರ್ಷಗಳ ನಂತರ, ಈ ಅರ್ಜಿಗಳ ವಿಚಾರಣೆಯನ್ನು ಸಿಜೆಐ ಡಿ ವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ, ಬಿ ಆರ್ ಗವಾಯಿ, ಜೆ ಬಿ ಪರ್ದಿವಾಲಾ ಹಾಗೂ ಮನೋಜ್ ಮಿಶ್ರಾ ಅವರನ್ನೊಳಗೊಂಡ ಐವರು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠ ನಾಳೆಯಿಂದ ಆರಂಭಿಸಲಿದೆ.

ಕೇಂದ್ರ ಮಂಡಿಸಿರುವ ವಾದದ ಪ್ರಮುಖಾಂಶಗಳು

  • ಸಮಂಜಸ ನಿರ್ಬಂಧಗಳಿಗೆ ಒಳಪಡದೆ ಏನನ್ನೂ ಮತ್ತು ಎಲ್ಲವನ್ನೂ ತಿಳಿದುಕೊಳ್ಳುವ ಸಾಮಾನ್ಯ ಹಕ್ಕು ಇರುವುದಿಲ್ಲ.

  • ಚುನಾವಣಾ ಅಭ್ಯ ರ್ಥಿಗಳ ಬಗ್ಗೆ ಅರಿತು ಆಯ್ಕೆ ಮಾಡುವ ಮತ್ತವರ ಪೂರ್ವಾಪರ ತಿಳಿದುಕೊಳ್ಳುವ ಸಂದರ್ಭಕ್ಕೆ ಸುಪ್ರೀಂ ಕೋರ್ಟ್‌ನ ‘ಅರಿವಿನ ಹಕ್ಕಿ’ಗೆ ಸಂಬಂಧಿಸಿದ ತೀರ್ಪುಗಳಿವೆ.

  •  ಸಂವಿಧಾನದ 19(1)(ಎ) ಪ್ರಜೆಗಳಿಗೆ ಮಾಹಿತಿ ಹಕ್ಕು ಪಡೆಯುವ ಹಕ್ಕು ಇದೆ ಎಂದು ಸೂಚಿಸಲು ಈ ತೀರ್ಪುಗಳನ್ನು ಓದುವಂತಿಲ್ಲ.

  • ವಿಧಿ 19 (1) (ಎ) ಅಡಿಯಲ್ಲಿ ಯಾವುದೇ ಹಕ್ಕಿಲ್ಲದಿದ್ದರೆ 19 (2) ವಿಧಿ ಅಡಿಯಲ್ಲಿ ಸಮಂಜಸವಾದ ನಿರ್ಬಂಧ ಹುಡುಕುವ ಪ್ರಶ್ನೆ ಉದ್ಭವಿಸುವುದಿಲ್ಲ.

  • ಮೂಲಭೂತ ಹಕ್ಕುಗಳ ಮೇಲೆ ಸಮಂಜಸ ನಿರ್ಬಂಧ ವಿಧಿಸಲು ಸರ್ಕಾರಕ್ಕೆ ಅವಕಾಶ ಮಾಡಿಕೊಡುವ ಸಂವಿಧಾನದ 19 (2) ಪರಿಚ್ಛೇದದ ವ್ಯಾಪ್ತಿಯಲ್ಲಿ ಚುನಾವಣಾ ಬಾಂಡ್‌ಗಳ ಯೋಜನೆ ಇದೆ.

  • “ಪ್ರಜಾಪ್ರಭುತ್ವದ ಸಾಮಾನ್ಯ ಆರೋಗ್ಯಕ್ಕಾಗಿ ಅರಿವಿನ ಹಕ್ಕು ಇದೆ" ಎಂಬ ಅರ್ಜಿದಾರರ ವಾದ ಬಹಳಷ್ಟು ವಿಶಾಲ ವ್ಯಾಪ್ತಿಯುಳ್ಳದ್ದು. ಅಭ್ಯರ್ಥಿಯ ಅಪರಾಧ ಹಿನ್ನೆಲೆ ತಿಳಿಯುವ ಹಕ್ಕನ್ನು ಈ ಪ್ರಕರಣದೊಂದಿಗೆ ಹೋಲಿಸಲಾಗದು.

  • ಆದ್ದರಿಂದ ಸಾಮಾನ್ಯ ಅಥವಾ ವಿಶಾಲ ಉದ್ದೇಶಗಳಿಗಾಗಿ ಅರಿವಿನ ಹಕ್ಕನ್ನು ಪಾಲಿಸಬೇಕು ಎಂದು ಹೇಳಲಾಗದು.

  • ಇದು ಸಂಸತ್ತಿನಲ್ಲಿ ಚರ್ಚಿಸಲು ಅರ್ಹವಾದ ವಿಚಾರ.

  • ರಾಜಕೀಯ ಪಕ್ಷಗಳಿಗೆ ಕೊಡುಗೆ ನೀಡುವುದಕ್ಕೆ ಪ್ರಜಾಸತ್ತಾತ್ಮಕ ಮಹತ್ವ ಇದೆ.

  • ಯಾವುದೇ ಕಾನೂನು ಸಂವಿಧಾನವನ್ನು ಉಲ್ಲಂಘಿಸದ ಹೊರತು ಆ ಕಾನೂನಿನ ಕುರಿತಾಗಿ ಸರ್ಕಾರದ ಉತ್ತರದಾಯಿತ್ವದ ಹೆಸರಿನಲ್ಲಾಗಲಿ ಅಥವಾ ವಶೀಲಿಗಳಿಂದ ಸರ್ಕಾರವನ್ನು ಮುಕ್ತಗೊಳಿಸಲೆಂದಾಗಲಿ ನ್ಯಾಯಾಲಯವು ಮಧ್ಯಪ್ರವೇಶಿಸಲಾಗದು.