ಎಸ್‌ಬಿಐ, ಚುನಾವಣಾ ಬಾಂಡ್‌ ಹಾಗೂ ಸುಪ್ರೀಂ ಕೋರ್ಟ್
ಎಸ್‌ಬಿಐ, ಚುನಾವಣಾ ಬಾಂಡ್‌ ಹಾಗೂ ಸುಪ್ರೀಂ ಕೋರ್ಟ್ 
ಸುದ್ದಿಗಳು

ಚುನಾವಣಾ ಬಾಂಡ್: ವಿಶೇಷ ಸಂಖ್ಯೆಗಳ ಬಹಿರಂಗಕ್ಕೆ ಎಸ್‌ಬಿಐಗೆ ಸುಪ್ರೀಂ ತಾಕೀತು; ತೀರ್ಪು ದುರುಪಯೋಗದ ವಾದ ತಿರಸ್ಕೃತ

Bar & Bench

ಚುನಾವಣಾ ಬಾಂಡ್‌ಗೆ ಕುರಿತಾದ ಎಲ್ಲ ಮಾಹಿತಿಯನ್ನು ಸಂಪೂರ್ಣವಾಗಿ ಬಹಿರಂಗಗೊಳಿಸುವಂತೆ ಎಸ್‌ಬಿಐಗೆ ಸುಪ್ರೀಂ ಕೋರ್ಟ್‌ ಸೋಮವಾರ ತಾಕೀತು ಮಾಡಿದೆ. ಅಲ್ಲದೆ, ಯೋಜನೆಯನ್ನು ರದ್ದುಗೊಳಿಸಲಾದ ತೀರ್ಪನ್ನು ವಿವಿಧ ವ್ಯಕ್ತಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂಬ ಬಗ್ಗೆ ಕೇಂದ್ರ ಸರ್ಕಾರ ವ್ಯಕ್ತಪಡಿಸಿದ್ದ ಕಳವಳವನ್ನು ಸಹ ಸುಪ್ರೀಂ ಕೋರ್ಟ್‌ ಇದೇ ವೇಳೆ ತಳ್ಳಿಹಾಕಿದೆ.

ಚುನಾವಣಾ ಬಾಂಡ್‌ ಮೂಲಕ ಬಹಿರಂಗಪಡಿಸಲಾದ ಎಲ್ಲಾ ವಿವರಗಳನ್ನು ತಮ್ಮ ಕಾರ್ಯಸೂಚಿಗೆ ತಕ್ಕಂತೆ ತಿರುಚಲಾಗುತ್ತಿದ್ದು ಇದರಿಂದಾಗಿ ನ್ಯಾಯಾಲಯ ಮುಜಗರಕ್ಕೊಳಗಾಗುತ್ತಿದೆ ಎಂದು ಕೇಂದ್ರದ ಪರವಾಗಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಸುಪ್ರೀಂ ಕೋರ್ಟ್‌ ಸಿಜೆಐ ಡಿ ವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ, ಬಿ ಆರ್ ಗವಾಯಿ, ಜೆ ಬಿ ಪರ್ದಿವಾಲಾ ಹಾಗೂ ಮನೋಜ್ ಮಿಶ್ರಾ ಅವರಿದ್ದ ಐವರು ಸದಸ್ಯರ ಪೀಠಕ್ಕೆ ತಿಳಿಸಿದರು. ಆದರೆ ಇದನ್ನು ಪೀಠ ಸ್ಪಷ್ಟವಾಗಿ ತಳ್ಳಿ ಹಾಕಿತು. ತನ್ನ ತೀರ್ಪುಗಳನ್ನು ಮೂರನೆಯವರು ಹೇಗೆ ವ್ಯಾಖ್ಯಾನಿಸುತ್ತಾರೆ ಎಂಬುದರ ಬಗ್ಗೆ ತಾನು ತಲೆಕೆಡಿಸಿಕೊಳ್ಳುವುದಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿತು.

ಕೇಂದ್ರ ಮಂಡಿಸಿದ ವಾದದ ಪ್ರಮುಖಾಂಶಗಳು

  • ಕಪ್ಪು ಹಣ ನಿಗ್ರಹಿಸುವುದು ಅಂತಿಮ ಗುರಿಯಾಗಿದ್ದು ತೀರ್ಪನ್ನು ನ್ಯಾಯಾಲಯದ ಹೊರಗೆ ಹೇಗೆ ಬಳಸಿಕೊಳ್ಳಲಾಗುತ್ತದೆ ಎಂಬದರ ಬಗ್ಗೆ ಈ ನ್ಯಾಯಾಲಯಕ್ಕೆ ತಿಳಿದಿರಬೇಕಿತ್ತು.

  • ಕಿರುಕುಳ ಎಂಬುದು ಕೇಂದ್ರ ಸರ್ಕಾರದ ಮಟ್ಟದಲ್ಲಿ ಅಲ್ಲ ಬದಲಿಗೆ ಬೇರೊಂದು ನೆಲೆಯಲ್ಲಿ ಆರಂಭವಾಗಿದೆ.

  • ನ್ಯಾಯಾಲಯದ ಮುಂದೆ ಇದ್ದವರು ಪತ್ರಿಕಾ ಸಂದರ್ಶನಗಳನ್ನು ನೀಡಲು ಪ್ರಾರಂಭಿಸಿ, ಉದ್ದೇಶಪೂರ್ವಕವಾಗಿ ನ್ಯಾಯಾಲಯವನ್ನು ಮುಜುಗರಕ್ಕೀಡು ಮಾಡಿದರು. ಇದು ನ್ಯಾಯಸಮ್ಮತವಲ್ಲ.

  • ಮುಜುಗರ ಉಂಟುಮಾಡುವ ಉದ್ದೇಶದಿಂದ ಸಾಮಾಜಿಕ ಮಾಧ್ಯಮಗಳಲ್ಲಿ ಹೇಳಿಕೆಗಳ ಸುರಿಮಳೆಯಾಗಿದೆ. ಮಾಹಿತಿ ತೆರೆದ ಬಯಲಾಗಿದ್ದು ಜನ ತಮಗೆ ಬೇಕಾದಂತೆ ಅಂಕಿ ಅಂಶ ತಿರುಚಬಹುದು.

  • ಅಂಕಿಅಂಶಗಳ ಆಧಾರದ ಮೇಲೆ ಬೇಕಾದಂತೆ ಹೇಳಿಕೆ ನೀಡಲಾಗುತ್ತಿದೆ.

ನ್ಯಾಯಮೂರ್ತಿಗಳಾಗಿ ನಾವು ಕಾನೂನು ಪರಿಪಾಲನೆಯನ್ನು ಮಾತ್ರವೇ ಪರಿಗಣಿಸುತ್ತೇವೆ, ಸಂವಿಧಾನದ ಪ್ರಕಾರ ಕೆಲಸ ಮಾಡುತ್ತೇವೆ. ರಾಜ್ಯಾಡಳಿತ ವ್ಯವಸ್ಥೆಯಲ್ಲಿ ಕಾನೂನು ಪರಿಪಾಲನೆಗಾಗಿ ಮಾತ್ರವೇ ನಮ್ಮ ನ್ಯಾಯಾಲಯವು ಕೆಲಸ ಮಾಡುತ್ತದೆ. ನ್ಯಾಯಮೂರ್ತಿಗಳ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಮಾತನಾಡಲಾಗುತ್ತದೆ. ಆದರೆ ಆ ಮಾತುಗಳನ್ನು ಸಹಿಸುವಷ್ಟು ನ್ಯಾಯಾಂಗದ ಭುಜಗಳು ವಿಶಾಲವಾಗಿವೆ. ತೀರ್ಪಿನ ಪ್ಯಾರಾ ಬಿ ಮತ್ತು ಸಿಯಲ್ಲಿ ನೀಡಲಾದ ನಿರ್ದೇಶನಗಳನ್ನು ಜಾರಿಗೊಳಿಸಲಾಗಿದೆಯೇ ಎಂಬುದನ್ನಷ್ಟೇ ತಾನು ಗಮನಿಸುವುದಾಗಿ ನ್ಯಾಯಾಲಯ ತಿಳಿಸಿತು.

ಬಾಂಡ್‌ಗಳಿಗೆ ನೀಡಲಾದ ಆಲ್ಫಾ ನ್ಯೂಮರಿಕ್‌ ಸಂಖ್ಯೆಗಳ ವಿವರ ಸೇರಿದಂತೆ ಅವುಗಳಿಗೆ ಸಂಬಂಧಿಸಿದ ಎಲ್ಲಾ ಮಾಹಿತಿ ಬಹಿರಂಗಪಡಿಸುವಂತೆ ಇದೇ ವೇಳೆ ನ್ಯಾಯಾಲಯ ಎಸ್‌ಬಿಐಗೆ ತಾಕೀತು ಮಾಡಿತು.

ಬಾಂಡ್‌ಗಳಿಗೆ ನೀಡಲಾದ ಆಲ್ಫಾ ನ್ಯೂಮರಿಕ್‌ ಸಂಖ್ಯೆಗಳ ವಿವರ ಸೇರಿದಂತೆ ಅವುಗಳಿಗೆ ಸಂಬಂಧಿಸಿದ ಎಲ್ಲಾ ಮಾಹಿತಿಗಳನ್ನು ಎಸ್‌ಬಿಐ ಬಹಿರಂಗಪಡಿಸಬೇಕು.
ಸಿಜೆಐ ಡಿ ವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ, ಬಿ ಆರ್ ಗವಾಯಿ, ಜೆ ಬಿ ಪರ್ದಿವಾಲಾ ಹಾಗೂ ಮನೋಜ್ ಮಿಶ್ರಾ

ಬಾಂಡ್‌ಗಳನ್ನು ನಗದೀಕರಿಸಿಕೊಂಡ ಮತ್ತು ಅವುಗಳನ್ನು ಪಡೆದವರನ್ನು ಗುರುತಿಸಲು ಸಹಾಯವಾಗುವಂತೆ ಚುನಾವಣಾ ಬಾಂಡ್‌ ಸಂಖ್ಯೆಗಳನ್ನು ಬಹಿರಂಗಪಡಿಸದೆ ಇರುವ ಬಗ್ಗೆ ಮಾ. 15ರಂದು ನ್ಯಾಯಾಲಯ ಎಸ್‌ಬಿಐ ಪ್ರತಿಕ್ರಿಯೆ ಕೇಳಿತ್ತು.