Madras High Court and Elephant 
ಸುದ್ದಿಗಳು

ಆನೆಗಳನ್ನು ಸುಪರ್ದಿನಲ್ಲಿಟ್ಟುಕೊಳ್ಳದಂತೆ ಕ್ರಮವಹಿಸಿ: ರಾಜ್ಯ ಸರ್ಕಾರಕ್ಕೆ ಮದ್ರಾಸ್ ಹೈಕೋರ್ಟ್ ತಾಕೀತು

"ಈಗಾಗಲೇ ಇರುವ ಆನೆಗಳನ್ನು ಹೊರತುಪಡಿಸಿ ಯಾವುದೇ ಖಾಸಗಿ ವ್ಯಕ್ತಿ ಯಾವುದೇ ಆನೆಯನ್ನು ಹಿಡಿಯುವುದು ಅಥವಾ ಸಾಕುವುದಕ್ಕೆ ಅವಕಾಶ ಇರಬಾರದು" ಎಂದು ಕೋರ್ಟ್ ತನ್ನ ಮಧ್ಯಂತರ ಆದೇಶದಲ್ಲಿ ಹೇಳಿದೆ.

Bar & Bench

ಆನೆಗೆ ವೈದ್ಯಕೀಯ ಚಿಕಿತ್ಸೆ ಅಗತ್ಯವಿದ್ದ ಅಥವಾ ಅದು ಕಾಡಿನಲ್ಲಿ ಬದುಕಲು ಸಾಧ್ಯವಾಗದೇ ಇದ್ದ ಸಂದರ್ಭ ಹೊರತುಪಡಿಸಿದಂತೆ ಯಾವುದೇ ಆನೆಯನ್ನು ಸುಪರ್ದಿಗೆ ತೆಗೆದುಕೊಳ್ಳದಂತೆ ನೋಡಿಕೊಳ್ಳಬೇಕು ಎಂದು ಮದ್ರಾಸ್‌ ಹೈಕೋರ್ಟ್‌ ತಮಿಳುನಾಡು ಸರ್ಕಾರಕ್ಕೆ ಸೂಚಿಸಿದೆ (ರಂಗರಾಜನ್ ನರಸಿಂಹನ್ ಮತ್ತು ತಮಿಳುನಾಡು ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಮತ್ತಿತರರ ನಡುವಣ ಪ್ರಕರಣ).

ಕೆಲವು ಬಂಧಿತ ಆನೆಗಳ ಏಳಿಗೆಗೆ ಸಂಬಂಧಿಸಿದಂತೆ ಕಳವಳ ವ್ಯಕ್ತಪಡಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಸಂಜೀಬ್‌ ಬ್ಯಾನರ್ಜಿ ಮತ್ತು ನ್ಯಾಯಮೂರ್ತಿ ಪಿ ಡಿ ಆದಿಕೇಶವುಲು ಅವರಿದ್ದ ಪೀಠ ಮಧ್ಯಂತರ ಆದೇಶ ನೀಡಿದೆ.

ಕಾಡಿನಲ್ಲಿ ತನ್ನ ನೆರವಿನಿಂದ ಉಳಿಯಲು ಸಾಧ್ಯವಾಗದ ಆನೆಗಳಿಗೆ ಚಿಕಿತ್ಸೆ ನೀಡುವ ಉದ್ದೇಶ ಹೊರತುಪಡಿಸಿ ಯಾವುದೇ ಆನೆಯನ್ನು ಸೆರೆಗೆ ತೆಗೆದುಕೊಳ್ಳದಂತೆ ಸರ್ಕಾರ ನೋಡಿಕೊಳ್ಳಬೇಕು. ಈಗಾಗಲೇ ಸುಪರ್ದಿಯಲ್ಲಿರುವ ಆನೆಗಳನ್ನು ಹೊರತುಪಡಿಸಿ ಯಾವುದೇ ಖಾಸಗಿ ವ್ಯಕ್ತಿ ಯಾವುದೇ ಆನೆಯನ್ನು ಹಿಡಿಯುವಂತಿಲ್ಲ ಅಥವಾ ಸಾಕುವಂತಿಲ್ಲ ಎಂದು ನ್ಯಾಯಾಲಯ ಹೇಳಿದೆ. ಮುಂದಿನ ದಿನಗಳಲ್ಲಿ ವ್ಯಕ್ತಿಗಳು ಅಥವಾ ದೇವಸ್ಥಾನಗಳು ಆನೆ ಒಡೆತನ ಹೊಂದುವುದನ್ನು ತಪ್ಪಿಸಲು ಏಕರೂಪದ ನೀತಿಯನ್ನು ಜಾರಿಗೆ ತರಬೇಕು ಎಂದು ನ್ಯಾಯಾಲಯ ಈ ಹಿಂದೆ ಅಭಿಪ್ರಾಯಪಟ್ಟಿತ್ತು.

ತಮಿಳುನಾಡು ದೇವಾಲಯಗಳಲ್ಲಿ 32 ಆನೆಗಳಿದ್ದು ಖಾಸಗಿಯವರ ಸುಪರ್ದಿಯಲ್ಲಿ 31 ಆನೆಗಳಿವೆ. ಅರಣ್ಯ ಇಲಾಖೆಯ ವಶದಲ್ಲಿ 64 ಆನೆಗಳಿವೆ ಎಂದು ಶುಕ್ರವಾರ ನ್ಯಾಯಾಲಯಕ್ಕೆ ತಿಳಿಸಲಾಯಿತು. ಪ್ರಕರಣದಲ್ಲಿ ಮಧ್ಯಪ್ರವೇಶ ಅರ್ಜಿ ಸಲ್ಲಿಸಿರುವ ಎಲ್ಸಾ ಪ್ರತಿಷ್ಠಾನ,” 2019ರಲ್ಲಿ ಸರ್ಕಾರ 86 ಆನೆಗಳ ವಿವರಗಳನ್ನು ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯಕ್ಕೆ (MOEF) ಸಲ್ಲಿಸಿದ್ದು ಇದರಲ್ಲಿ ಅರಣ್ಯ ಇಲಾಖೆಯ ಸುಪರ್ದಿಯಲ್ಲಿರುವ ಆನೆಗಳನ್ನು ಸೇರಿಸಿರಲಿಲ್ಲ.” ಎಂದು ನ್ಯಾಯಾಲಯಕ್ಕೆ ತಿಳಿಸಿತ್ತು. ಶುಕ್ರವಾರ ಸೂಚಿಸಿದ ಅಂಕಿಅಂಶಗಳ ಪ್ರಕಾರ, 23 ಆನೆಗಳು ಕಾಣೆಯಾಗಿವೆ ಎಂದು ಅದು ಹೇಳಿದೆ. ಆನೆಗಳಿಗೆ ಸಂಬಂಧಿಸಿದಂತೆ ಕಳೆದ ಐದು ವರ್ಷಗಳಲ್ಲಿ ಸಚಿವಾಲಯಕ್ಕೆ ನೀಡಿದ ಮಾಹಿತಿ ಇದ್ದರೆ ಅದನ್ನು ಒದಗಿಸುವಂತೆ ಸೂಚಿಸಿದ ನ್ಯಾಯಾಲಯ ಪ್ರಕರಣವನ್ನು ಅಕ್ಟೋಬರ್ 21ಕ್ಕೆ ಮುಂದೂಡಿತು.