Supreme Court 
ಸುದ್ದಿಗಳು

ಸರ್ಕಾರಿ ಉದ್ಯೋಗ: ನೇಮಕಾತಿ ಪ್ರಕ್ರಿಯೆ ಮಧ್ಯದಲ್ಲಿ ಅರ್ಹತಾ ಮಾನದಂಡ ಬದಲಿಸುವಂತಿಲ್ಲ ಎಂದ ಸುಪ್ರೀಂ

ಪ್ರಕರಣದ ತೀರ್ಪು ಸರ್ಕಾರಿ ಸೇವಾ ಹುದ್ದೆಗಳ ಆಯ್ಕೆ ಮತ್ತು ನೇಮಕಾತಿಯ ಮೇಲೆ ಪ್ರಭಾವ ಬೀರಲಿದೆ.

Bar & Bench

ನಿಯಮಾವಳಿಗಳು ಅನುಮತಿಸದ ಹೊರತು ಸರ್ಕಾರಿ ಉದ್ಯೋಗಗಳಿಗೆ ಆಯ್ಕೆ ಮಾಡುವ ನಿಯಮ ಅಥವಾ ಅರ್ಹತಾ ಮಾನದಂಡಗಳನ್ನು ನೇಮಕಾತಿ ಪ್ರಕ್ರಿಯೆ ಮಧ್ಯದಲ್ಲಿ ಇಲ್ಲವೇ ಅದು ಒಮ್ಮೆ ಆರಂಭವಾದ ಬಳಿಕ ಬದಲಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್‌ ಸಾಂವಿಧಾನಿಕ ಪೀಠ ಗುರುವಾರ ತೀರ್ಪು ನೀಡಿದೆ [ತೇಜ್ ಪ್ರಕಾಶ್ ಪಾಠಕ್ ಮತ್ತು ರಾಜಸ್ಥಾನ ಹೈಕೋರ್ಟ್ ನಡುವಣ ಪ್ರಕರಣ].

ಜುಲೈ 2023ರಲ್ಲಿ ತೀರ್ಪು ಕಾಯ್ದಿರಿಸಿದ್ದ ಸಿಜೆಐ ಡಿ ವೈ ಚಂದ್ರಚೂಡ್‌ ನ್ಯಾಯಮೂರ್ತಿಗಳಾದ ಹೃಷಿಕೇಶ್ ರಾಯ್ , ಪಿಎಸ್ ನರಸಿಂಹ , ಪಂಕಜ್ ಮಿತ್ತಲ್‌ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ  ಪೀಠ ಇಂದು ತೀರ್ಪು ನೀಡಿದೆ.

ಸರ್ಕಾರಿ ಹುದ್ದೆಗೆ ಅಗತ್ಯವಾದ ನೇಮಕಾತಿ  ಮಾನದಂಡವನ್ನು ನೇಮಕಾತಿ ಪ್ರಕ್ರಿಯೆಯ ಮಧ್ಯದಲ್ಲಿ ಅಥವಾ ನೇಮಕಾತಿ ಪ್ರಕ್ರಿಯೆ ಆರಂಭವಾದ ನಂತರ ಸಂಬಂಧಪಟ್ಟ ಅಧಿಕಾರಿಗಳು ಬದಲಾಯಿಸಬಹುದೇ ಎಂಬ ಕಾನೂನು ಪ್ರಶ್ನೆಯನ್ನು ಪ್ರಸ್ತುತ ಪ್ರಕರಣ ಒಳಗೊಂಡಿತ್ತು. ಬೇರೆ ರೀತಿಯಲ್ಲಿ ಹೇಳುವುದಾದರೆ ಆಟದ ನಡುವೆ ಆಟದ ನಿಯಮಾವಳಿ ಬದಲಿಸಬಹುದೇ ಎಂಬ ಪ್ರಶ್ನೆ ಉದ್ಭವವಾಗಿತ್ತು.

ನೇಮಕಾತಿ ಪ್ರಕ್ರಿಯೆಯ ಮಧ್ಯದಲ್ಲಿ ನಿಯಮಾವಳಿ ಬದಲಿಸುವಂತಿಲ್ಲ ಎಂದು 2008ರ ಕೆ ಮಂಜುಶ್ರೀ ಇತರರು ಹಾಗೂ ಆಂಧ್ರಪ್ರದೇಶ ಸರ್ಕಾರ ನಡುವಣ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯ  ನೀಡಿದ್ದ ತೀರ್ಪನ್ನು ಪೀಠ ಇಂದು ಎತ್ತಿಹಿಡಿದಿದೆ.  

ಇಂದಿನ ತೀರ್ಪಿನ ಪ್ರಮುಖಾಂಶಗಳು

1. ನೇಮಕಾತಿ ಪ್ರಕ್ರಿಯೆ ಎಂಬುದು ಅರ್ಜಿಗಳನ್ನು ಆಹ್ವಾನಿಸುವುದರೊಂದಿಗೆ ಆರಂಭವಾಗಿ  ಹುದ್ದೆ ಭರ್ತಿ ಬಳಿಕ ಕೊನೆಗೊಳ್ಳುತ್ತದೆ.

2. ಅಸ್ತಿತ್ವದಲ್ಲಿರುವ ನಿಯಮಗಳು ಅನುಮತಿಸದ ವಿನಾ ಅರ್ಹತಾ ನಿಯಮಗಳನ್ನು ಮಧ್ಯದಲ್ಲಿಯೇ ಬದಲಾಯಿಸುವಂತಿಲ್ಲ.

3. ನೇಮಕಾತಿ ನಿಯಮಗಳು ಮನಸೋಇಚ್ಛೆಯಾಗಿರದೆ ಸಂವಿಧಾನದ 14 (ಸಮಾನತೆಯ ಹಕ್ಕು) ಮತ್ತು 16ನೇ (ಸರ್ಕಾರಿ ಉದ್ಯೋಗದಲ್ಲಿ ತಾರತಮ್ಯ ಮಾಡದಿರುವುದು) ವಿಧಿಗಳಿಗೆ ಅನುಗುಣವಾಗಿರಬೇಕು.

4. ಆಯ್ಕೆ ಪಟ್ಟಿಯಲ್ಲಿ ನಿಯೋಜನೆಯಾಗಿದ್ದ ಮಾತ್ರಕ್ಕೆ ಅಭ್ಯರ್ಥಿಗೆ ಉದ್ಯೋಗದ ಸಂಪೂರ್ಣ ಹಕ್ಕು ದೊರೆಯುವುದಿಲ್ಲ.

5. ಕೆ ಮಂಜುಶ್ರೀ ಪ್ರಕರಣದ ತೀರ್ಪು ಉತ್ತಮ ಕಾನೂನಾಗಿದ್ದು ಹರಿಯಾಣ ಸರ್ಕಾರ ಮತ್ತು ಸುಭಾಷ್‌ ಚಂದರ್‌ ಮರ್ವಾಹಾ ಇನ್ನಿತರರ ನಡುವಣ ಪ್ರಕರಣದ ತೀರ್ಪನ್ನು ಪರಿಗಣನೆಗೆ ತೆಗೆದುಕೊಳ್ಳದೆ ಇರುವುದು ತಪ್ಪಲ್ಲ.

ಪ್ರಕರಣದ ಹಿನ್ನೆಲೆ

ರಾಜಸ್ಥಾನ ಹೈಕೋರ್ಟ್‌ನ ಸಿಬ್ಬಂದಿಗೆ ಹದಿಮೂರು ಭಾಷಾಂತರಕಾರ ಹುದ್ದೆಗಳನ್ನು ಭರ್ತಿ ಮಾಡುವ ನೇಮಕಾತಿ ಪ್ರಕ್ರಿಯೆಗೆ ಸಂಬಂಧಿಸಿದ ಪ್ರಕರಣ ಇದಾಗಿದೆ. ಪರೀಕ್ಷೆ ಬರೆದ ಇಪ್ಪತ್ತೊಂದು ಅಭ್ಯರ್ಥಿಗಳಲ್ಲಿ ಕೇವಲ ಮೂರು ಮಂದಿ ಉತ್ತೀರ್ಣರಾಗಿದ್ದರು.

ಈ ಪ್ರಕರಣವು ರಾಜಸ್ಥಾನ ಹೈಕೋರ್ಟ್‌ನ ಸಿಬ್ಬಂದಿಗೆ ಹದಿಮೂರು ಭಾಷಾಂತರಕಾರ ಹುದ್ದೆಗಳನ್ನು ಭರ್ತಿ ಮಾಡುವ ನೇಮಕಾತಿ ಪ್ರಕ್ರಿಯೆಗೆ ಸಂಬಂಧಿಸಿದೆ. ಅಭ್ಯರ್ಥಿಗಳು ಲಿಖಿತ ಪರೀಕ್ಷೆಗೆ ಹಾಜರಾಗಬೇಕಿತ್ತು, ನಂತರ ವೈಯಕ್ತಿಕ ಸಂದರ್ಶನಕ್ಕೆ ಹಾಜರಾಗಬೇಕಿತ್ತು. ಕನಿಷ್ಠ ಶೇ.75 ಅಂಕ ಗಳಿಸಿದವರನ್ನೇ ಹುದ್ದೆಗಳಿಗೆ ಆಯ್ಕೆ ಮಾಡಬೇಕು ಎಂದು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ಆದೇಶ ಹೊರಡಿಸಿರುವುದು ನಂತರ ಬೆಳಕಿಗೆ ಬಂದಿತ್ತು.

ಆದರೆ ಅಧಿಸೂಚನೆ ಹೊರಡಿಸುವಾಗಲೇ ಶೇಕಡಾ 75 ಮಾನದಂಡ ಉಲ್ಲೇಖಿಸರಲಿಲ್ಲ. ನಂತರ ತಿದ್ದುಪಡಿ ಮಾಡಿ ಮೂವರನ್ನಷ್ಟೇ ಆಯ್ಕೆ ಮಾಡಿ ಉಳಿದ ಅಭ್ಯರ್ಥಿಗಳನ್ನು ಕೈಬಿಡಲಾಗಿದೆ. ಅನುತ್ತೀರ್ಣಗೊಂಡವರು ಸಲ್ಲಿಸಿದ್ದ ರಿಟ್‌ ಅರ್ಜಿಯನ್ನು  ಮಾರ್ಚ್ 2010 ರಲ್ಲಿ ಹೈಕೋರ್ಟ್‌ ವಜಾಗೊಳಿಸಿತ್ತು. ಹೀಗಾಗಿ ಅವರು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದರು.