Acting Chief Justice Alok Aradhe and Justice S Vishwajith Shetty, Karnataka High Court 
ಸುದ್ದಿಗಳು

ವಕ್ಫ್‌ ಆಸ್ತಿ ಕಬಳಿಕೆ: ಸದನದಲ್ಲಿ ಮಾಣಿಪ್ಪಾಡಿ ವರದಿ ಮಂಡಿಸಿರುವ ಬಗ್ಗೆ ಮಾಹಿತಿ ನೀಡಲು ಸರ್ಕಾರಕ್ಕೆ ಹೈಕೋರ್ಟ್‌ ಆದೇಶ

“ವಿಶೇಷ ವರದಿಯನ್ನು ಸಚಿವ ಸಂಪುಟದಲ್ಲಿ ಮಂಡಿಸಿದ ಬಳಿಕ ಕೈಗೊಂಡ ಕ್ರಮದ ಬಗ್ಗೆ ಹಾಗೂ ವರದಿಯನ್ನು ವಿಧಾನಮಂಡಲದ ಉಭಯ ಸದನಗಳಲ್ಲಿ ಮಂಡಿಸಿರುವ ಬಗ್ಗೆ ಮಾಹಿತಿ ನೀಡಬೇಕು. ತನಿಖೆಗೆ ವಹಿಸುವ ವಿಚಾರದ ಬಗ್ಗೆ ನಿಲುವು ತಿಳಿಸಬೇಕು” ಎಂದಿರುವ ಪೀಠ.

Bar & Bench

ರಾಜ್ಯದಲ್ಲಿ ವಕ್ಫ್ ಆಸ್ತಿಗಳ ಕಬಳಿಕೆ ಹಾಗೂ ದುರ್ಬಳಕೆಗೆ ಸಂಬಂಧಿಸಿದಂತೆ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಮಾಜಿ ಅಧ್ಯಕ್ಷ ಅನ್ವರ್ ಮಾಣಿಪ್ಪಾಡಿ ಸಲ್ಲಿಸಿದ್ದ ವಿಶೇಷ ವರದಿಯನ್ನು ಸಚಿವ ಸಂಪುಟ ಸಭೆಯಲ್ಲಿ ಮಂಡಿಸಿದ ಬಳಿಕ ಕೈಗೊಂಡ ಕ್ರಮದ ಬಗ್ಗೆ ಹಾಗೂ ವರದಿಯನ್ನು ವಿಧಾನ ಮಂಡಲದ ಉಭಯ ಸದನಗಳಲ್ಲಿ ಮಂಡಿಸಿರುವ ಬಗ್ಗೆ ಮಾಹಿತಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್ ಇತ್ತೀಚೆಗೆ ನಿರ್ದೇಶನ ನೀಡಿದೆ.

ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗ ವಕ್ಫ್ ಆಸ್ತಿ ದುರ್ಬಳಕೆಗೆ ಸಂಬಂಧಿಸಿದಂತೆ 2012ರಲ್ಲಿ ಸಲ್ಲಿಸಿರುವ ವಿಶೇಷ ವರದಿ ಆಧರಿಸಿ ಬೀದರ್ ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿನ ವಕ್ಫ್ ಆಸ್ತಿಗಳ ಕಬಳಿಕೆ ಹಾಗೂ ದುರ್ಬಳಕೆಯನ್ನು ಪತ್ತೆ ಹಚ್ಚಲು ತನಿಖೆಗೆ ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ವಹಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಲು ಕೋರಿ ಮಾಜಿ ಸಚಿವ ಎಸ್ ಕೆ ಕಾಂತಾ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಅಲೋಕ್ ಅರಾಧೆ ಮತ್ತು ನ್ಯಾಯಮೂರ್ತಿ ಎಸ್ ವಿಶ್ವಜಿತ್ ಶೆಟ್ಟಿ ಅವರಿದ್ದ ವಿಭಾಗೀಯ ಪೀಠವು ವಿಚಾರಣೆ ನಡೆಸಿತು.

“ವಿಶೇಷ ವರದಿಯನ್ನು ಸಚಿವ ಸಂಪುಟದಲ್ಲಿ ಮಂಡಿಸಿದ ಬಳಿಕ ಕೈಗೊಂಡ ಕ್ರಮದ ಬಗ್ಗೆ ಹಾಗೂ ವರದಿಯನ್ನು ವಿಧಾನಮಂಡಲದ ಉಭಯ ಸದನಗಳಲ್ಲಿ ಮಂಡಿಸಿರುವ ಬಗ್ಗೆ ಮಾಹಿತಿ ನೀಡಬೇಕು. ತನಿಖೆ ವಹಿಸುವ ವಿಚಾರದ ಬಗ್ಗೆ ನಿಲುವು ತಿಳಿಸಬೇಕು” ಎಂದು ರಾಜ್ಯ ಸರ್ಕಾರಕ್ಕೆ ಪೀಠವು ನಿರ್ದೇಶಿಸಿದೆ.

ಇದಕ್ಕೂ ಮುನ್ನ ಅರ್ಜಿದಾರರನ್ನು ಪ್ರತಿನಿಧಿಸಿದ್ದ ವಕೀಲ ಶ್ರೀಧರ್ ಪ್ರಭು ಅವರು “ವಿಶೇಷ ವರದಿಯನ್ನು ಸಚಿವ ಸಂಪುಟ ಸಭೆಯಲ್ಲಿ ಮಂಡಿಸಲಾಗಿದೆ. ಆದರೆ, ಮುಂದೇನು ಕ್ರಮ ಕೈಗೊಳ್ಳಲಾಗಿದೆ ಎಂಬ ಬಗ್ಗೆ ತಿಳಿದಿಲ್ಲ. ಅದೇ ರೀತಿ ಇತ್ತೀಚೆಗೆ ನಡೆದ ವಿಧಾನ ಮಂಡಲದ ಅಧಿವೇಶನದಲ್ಲಿ ವಿಧಾನ ಪರಿಷತ್ತಿನಲ್ಲಿ ವರದಿಯನ್ನು ಮಂಡಿಸಲಾಗಿದೆ ಎಂಬ ಮಾಹಿತಿ ಇದೆ. ಆದರೆ, ರಾಜ್ಯ ಅಲ್ಪಸಂಖ್ಯಾತರ ಆಯೋಗದ ಕಾಯಿದೆ ಪ್ರಕಾರ ವರದಿಯ ಜೊತೆಗೆ ‘ಕ್ರಮ ಕೈಗೊಂಡ ವರದಿ’ (ಎಟಿಆರ್) ಅನ್ನು ವಿಧಾನಮಂಡಲದ ಉಭಯ ಸದನಗಳಲ್ಲಿ ಮಂಡಿಸುವ ಬಗ್ಗೆ ಹೇಳಲಾಗಿದೆ” ಎಂದು ಪೀಠದ ಗಮನಕ್ಕೆ ತಂದರು.

ಮುಂದುವರೆದು, “ರಾಜ್ಯದಲ್ಲಿ ವಕ್ಫ್ ಆಸ್ತಿ ಕಬಳಿಕೆ ಮತ್ತು ದುರ್ಬಳಕೆ ಹಗರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂಬುದು ಅರ್ಜಿದಾರರ ಮನವಿಯಾಗಿದೆ. ಈ ಬಗ್ಗೆ ನ್ಯಾಯಾಲಯ ಸರ್ಕಾರಕ್ಕೆ ಸೂಕ್ತ ನಿರ್ದೇಶನ ನೀಡಬೇಕು” ಎಂದು ಕೋರಿದರು. ಇದಕ್ಕೆ ಸರ್ಕಾರವನ್ನು ಪ್ರತಿನಿಧಿಸಿದ್ದ ವಕೀಲರು ಸಿಬಿಐ ತನಿಖೆಯ ಅರ್ಜಿದಾರರ ಮನವಿಗೆ ಆಕ್ಷೇಪಿಸಿದರು.

ಅಂತಿಮವಾಗಿ ನ್ಯಾಯಾಲಯವು ಪ್ರಕರಣದ ವಿಚಾರಣೆಯನ್ನು ಅಕ್ಟೋಬರ್ 20ಕ್ಕೆ ಮುಂದೂಡಿತು.