Bombay High Court 
ಸುದ್ದಿಗಳು

ಕೈದಿಗಳಿಗೆ ತುರ್ತು ಪೆರೋಲ್‌ ಸಂಬಂಧಿಗಳ ಸಾವಿಗೆ ಮಾತ್ರ ಸೀಮಿತಗೊಳ್ಳಬಾರದು: ಬಾಂಬೆ ಹೈಕೋರ್ಟ್‌

ಪ್ರಾಕೃತಿಕ ವಿಕೋಪಗಳು, ಕೌಟುಂಬಿಕ ಅನಾರೋಗ್ಯ ಮತ್ತು ಗರ್ಭಿಣಿ ಪತ್ನಿಯ ಹೆರಿಗೆ ವಿಚಾರಗಳು ಅನಿರೀಕ್ಷಿತವಾಗಿದ್ದು, ಅವುಗಳನ್ನು ಸಹ ತುರ್ತು ಎಂದು ಪರಿಗಣಿಸಬೇಕು ಎಂದು ನ್ಯಾಯಾಲಯ ಹೇಳಿದೆ.

Bar & Bench

ಹತ್ತಿರದ ಸಂಬಂಧಿಗಳ ಸಾವಿನ ಸಂದರ್ಭದಲ್ಲಿ ತುರ್ತು ಪೆರೋಲ್‌ ಹೊರತುಪಡಿಸಿ ಜೈಲಿನಲ್ಲಿ ಒಂದೂವರೆ ವರ್ಷ ಪೂರೈಸದ ಕೈದಿಗಳಿಗೆ ಬಿಡುಗಡೆ ಅವಕಾಶ ಕಲ್ಪಿಸದ ಜೈಲು ನಿಯಮವನ್ನು ಈಚೆಗೆ ಬಾಂಬೆ ಹೈಕೋರ್ಟ್‌ ಪ್ರಶ್ನಿಸಿದೆ.

ಪತ್ನಿ ಗಂಭೀರ ಅನಾರೋಗ್ಯಕ್ಕೆ ತುತ್ತಾಗಿರುವ ಹಿನ್ನೆಲೆಯಲ್ಲಿ ಪೆರೋಲ್‌ ಕೋರಿ ಬಾಲಾಜಿ ಪುಯದ್‌ ಸೆಪ್ಟೆಂಬರ್‌ 2024ರಲ್ಲಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಭಾರತಿ ಡಾಂಗ್ರೆ ಮತ್ತು ಮಂಜುಶಾ ದೇಶಪಾಂಡೆ ಅವರ ವಿಭಾಗೀಯ ಪೀಠ ನಡೆಸಿತು.

ಪ್ರಾಕೃತಿಕ ವಿಕೋಪಗಳು, ಕೌಟುಂಬಿಕ ಅನಾರೋಗ್ಯ ಮತ್ತು ಗರ್ಭಿಣಿ ಪತ್ನಿಯ ಹೆರಿಗೆ ವಿಚಾರಗಳು ಅನಿರೀಕ್ಷಿತವಾಗಿದ್ದು, ಅವುಗಳನ್ನು ಊಹಿಸಲಾಗದು. ಇಂತಹ ಸಂದರ್ಭಗಳಲ್ಲಿ ಕೈದಿಗಳನ್ನು 1.5 ವರ್ಷ ಮುಗಿಯುವುದರಲ್ಲೇ ಬಿಡುಗಡೆ ಮಾಡಬೇಕಾಗಿರುತ್ತದೆ ಎಂದು ಪೀಠ ಹೇಳಿದೆ.

ಇಂತಹ ಸನ್ನಿವೇಶಗಳಲ್ಲಿ ಕೈದಿಯನ್ನು 1.5 ವರ್ಷ ಕಾಯುವಂತೆ ಸೂಚಿಸುವುದು ಅತಾರ್ಕಿಕ. ಈ ನಿರ್ಬಂಧಗಳು ಸ್ಪಷ್ಟವಾಗಿ ಅನಿಯಂತ್ರಿತವಾಗಿವೆ ಎಂದು ನ್ಯಾಯಾಲಯ ಹೇಳಿದೆ.

“ಸಾವಿನಂಥ ವಿಚಾರಗಳನ್ನು ತುರ್ತು ಪೆರೋಲ್‌ಗೆ ಪರಿಗಣಿಸಲಾಗುತ್ತಿದ್ದು, ತಂದೆ/ತಾಯಿ/ಪತ್ನಿ/ಪುತ್ರಿಯ ಗಂಭೀರ ಅನಾರೋಗ್ಯವನ್ನು ತುರ್ತು ಎಂದು ಪರಿಗಣಿಸಿಲ್ಲ. ಪತ್ನಿಗೆ ಹೆರಿಗೆ, ಪ್ರಾಕೃತಿಕ ವಿಕೋಪದಿಂದ ಉಂಟಾಗುವ ಮನೆ ಕುಸಿತ, ಪ್ರವಾಹ, ಬೆಂಕಿ, ಭೂಕಂಪ ಇಂಥವು ಅನಿರೀಕ್ಷಿತ ಘಟನೆಗಳಾಗಿವೆ. ಇಂಥವು ಯಾವಾಗ ಆಗುತ್ತವೆ ಎಂಬುದನ್ನು ನಿರೀಕ್ಷಿಸಲಾಗದು ಮತ್ತು ಇದಕ್ಕಾಗಿ ಒಂದೂವರೆ ವರ್ಷ ಶಿಕ್ಷೆ ಅನುಭವಿಸಬೇಕು ಎಂದು ಹೇಳಲಾಗದು. ಇಂತಹ ತುರ್ತು ಘಟನೆಗಳನ್ನು ಸಾಮಾನ್ಯ ಪೆರೋಲ್‌ ಪಡೆಯಲು ಅನುಮತಿಸಬೇಕು” ಎಂದು ನ್ಯಾಯಾಲಯ ಹೇಳಿದೆ.