Senior Advocate Fali Sam Nariman 
ಸುದ್ದಿಗಳು

ಖ್ಯಾತ ಹಿರಿಯ ನ್ಯಾಯವಾದಿ ಫಾಲಿ ನಾರಿಮನ್ ನಿಧನ

ನಾರಿಮನ್‌ ಅವರು ಮುಂಬೈನ ಸರ್ಕಾರಿ ಕಾನೂನು ಕಾಲೇಜಿನ ಹಳೆಯ ವಿದ್ಯಾರ್ಥಿಯಾಗಿದ್ದರು. ದೆಹಲಿಗೆ ಸ್ಥಳಾಂತರಗೊಳ್ಳುವ ಮೊದಲು ಬಾಂಬೆ ಹೈಕೋರ್ಟ್‌ನಲ್ಲಿ ವಕೀಲಿಕೆ ಪ್ರಾರಂಭಿಸಿದ್ದರು.

Bar & Bench

ಖ್ಯಾತ ನ್ಯಾಯವಾದಿ ಹಿರಿಯ ವಕೀಲ ಫಾಲಿ ಎಸ್. ನಾರಿಮನ್ ಬುಧವಾರ ಬೆಳಿಗ್ಗೆ ನಿಧನರಾಗಿದ್ದಾರೆ. ಅವರಿಗೆ 95 ವರ್ಷ ವಯಸ್ಸಾಗಿತ್ತು.

ಮುಂಬೈನ ಸರ್ಕಾರಿ ಕಾನೂನು ಕಾಲೇಜಿನ ಹಳೆಯ ವಿದ್ಯಾರ್ಥಿಯಾಗಿದ್ದ ನಾರಿಮನ್ ಅವರು ಪ್ರಧಾನಿ ಇಂದಿರಾ ಗಾಂಧಿ ಸರ್ಕಾರದಲ್ಲಿ ಹೆಚ್ಚುವರಿ ಸಾಲಿಸಿಟರ್ ಜನರಲ್ (ಎಎಸ್‌ಜಿ) ಆಗಿ ನೇಮಕಗೊಂಡಿದ್ದರು. ದೆಹಲಿಗೆ ಸ್ಥಳಾಂತರಗೊಳ್ಳುವ ಮೊದಲು ಬಾಂಬೆ ಹೈಕೋರ್ಟ್‌ನಲ್ಲಿ ಅವರು ವಕೀಲಿಕೆ ಪ್ರಾರಂಭಿಸಿದ್ದರು.

ಇಂದಿರಾ ಗಾಂಧಿ ಅವರು ತುರ್ತು ಪರಿಸ್ಥಿತಿ ಹೇರಿದಾಗ ನಾರಿಮನ್ ಅವರು ಎಎಸ್‌ಜಿ ಹುದ್ದೆಗೆ ರಾಜೀನಾಮೆ ನೀಡಿದರು ಮತ್ತು ಖಾಸಗಿಯಾಗಿ ತಮ್ಮ ವಕೀಲಿಕೆ ಮುಂದುವರಿಸಿದರು.

ಕೋವಿಡ್ ವಲಸೆ ಕಾರ್ಮಿಕರ ಬಿಕ್ಕಟ್ಟನ್ನು ಸುಪ್ರೀಂ ಕೋರ್ಟ್ "ಭಯಾನಕವಾಗಿ" ನಿಭಾಯಿಸಿತು ಎಂದು ನಾರಿಮನ್‌ ಅವರು ಜುಲೈ 2020ರಲ್ಲಿ ಬಾರ್ & ಬೆಂಚ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದರು. ಆ ಮೂಲಕ ಅವರು ಸರ್ಕಾರದ ಆತುರದ ನಿರ್ಧಾರಗಳಿಂದ ಸಂಕಷ್ಟಕ್ಕೀಡಾದ ಜನತೆ ನೆರವಿಗೆ ಧಾವಿಸುವಲ್ಲಿ ಸುಪ್ರೀಂ ಕೋರ್ಟ್‌ ಸಮರ್ಥವಾಗಿ ಕಾರ್ಯನಿರ್ವಹಿಸಲಿಲ್ಲ ಎನ್ನುವ ಅಸಮಾಧಾನ ಹೊರಹಾಕಿದ್ದರು.

2023ರಲ್ಲಿ, ನ್ಯಾಯಾಧೀಶರನ್ನು ನೇಮಕ ಮಾಡುವಾಗ ಕೊಲಿಜಿಯಂ ವ್ಯವಸ್ಥೆಯು ಕಡಿಮೆ ದುಷ್ಟವಾಗಿದೆ ಎಂದು ಅವರು ಹೇಳಿದ್ದರು. ನಾರಿಮನ್ ಅವರೊಂದಿಗಿನ 2023ರ ಸಂದರ್ಶನವನ್ನು ಇಲ್ಲಿ ವೀಕ್ಷಿಸಿ. ನಾರಿಮನ್ ಅವರೊಂದಿಗಿನ 2010ರ ಸಂದರ್ಶನವನ್ನು ಇಲ್ಲಿ ಓದಿ.

ನಾರಿಮನ್‌ ಅವರ ಪುತ್ರ ರೋಹಿಂಟನ್ ನಾರಿಮನ್ ಅವರೂ ಸಹ ಮುಂದೆ ಭಾರತದ ಸಾಲಿಸಿಟರ್ ಜನರಲ್ ಆಗಿ ಸೇವೆ ಸಲ್ಲಿಸಿದ್ದು ವಿಶೇಷ. ತದನಂತರ ರೋಹಿಂಟನ್‌ ನಾರಿಮನ್‌ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾದರು.