Empire hotel 
ಸುದ್ದಿಗಳು

ಬಿರಿಯಾನಿಗೆ ₹40 ಪೈಸೆ ಹೆಚ್ಚು ಪಡೆದರು ಎಂದು ವ್ಯಾಜ್ಯ ಹೂಡಿದ ಗ್ರಾಹಕನಿಗೆ ಆಯೋಗವು ₹4,000 ದಂಡ ವಿಧಿಸಿದ್ದೇಕೆ?

ಹೆಚ್ಚುವರಿ ಹಣ ಪಡೆದಿದ್ದ ನನಗೆ ಹೋಟೆಲ್‌ಗೆ ಒಂದು ರೂಪಾಯಿ ಪರಿಹಾರ ಪಾವತಿಸುವ ಜತೆಗೆ, ಈ ಪ್ರಕರಣದ ವೆಚ್ಚವನ್ನೂ ಭರಿಸುವಂತೆ ನಿರ್ದೇಶಿಸಬೇಕು ಎಂದು ಕೋರಿ ನರಸಿಂಹ ಮೂರ್ತಿ ಗ್ರಾಹಕ ನ್ಯಾಯಾಲಯಕ್ಕೆ ದೂರು ನೀಡಿದ್ದರು.

Bar & Bench

ಬಿರಿಯಾನಿಗೆ 40 ಪೈಸೆ ಹೆಚ್ಚುವರಿ ಹಣ ಪಡೆದಿರುವ ಬೆಂಗಳೂರಿನ ಪ್ರತಿಷ್ಠಿತ ಎಂಪೈರ್‌ ಹೋಟೆಲ್‌ ಗ್ರಾಹಕರನ್ನು ಲೂಟಿ ಮಾಡುತ್ತಿದೆ ಎಂದು ಆರೋಪಿಸಿ ಹಲಸೂರಿನ 61 ವರ್ಷದ ಟಿ ನರಸಿಂಹಮೂರ್ತಿ ಎಂಬುವರು ಸಲ್ಲಿಸಿದ್ದ ದೂರನ್ನು ವಜಾಗೊಳಿಸಿರುವ ಬೆಂಗಳೂರಿನ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಹೋಟೆಲ್‌ಗೆ 4 ಸಾವಿರ ರೂಪಾಯಿ ಪರಿಹಾರ ನೀಡುವಂತೆ ದೂರುದಾರರಿಗೆ ಈಚೆಗೆ ಆದೇಶಿದೆ.

ನರಸಿಂಹಮೂರ್ತಿ ಸಲ್ಲಿಸಿದ್ದ ಮನವಿಯ ವಿಚಾರಣೆಯನ್ನು ನಡೆಸಿದ ಆಯೋಗದ ಅಧ್ಯಕ್ಷ ಎಚ್‌ ಆರ್‌ ಶ್ರೀನಿವಾಸ್‌ ಮತ್ತು ಸದಸ್ಯೆ ಎಸ್‌ ಎಂ ಸರಸ್ವತಿ ಅವರಿದ್ದ ಪೀಠವು ತೀರ್ಪು ನೀಡಿದೆ.

ಕೇಂದ್ರ ಸರ್ಕಾರವು 1, 2, 5, 10, 20, 25 ಹಾಗೂ 50 ಪೈಸೆಗಳ ಚಲಾವಣೆಯನ್ನು ಈಗಾಗಲೇ ಹಿಂಪಡೆದಿದೆ. ಜತೆಗೆ, ಯಾವುದೇ ಮೊತ್ತ 50 ಪೈಸೆಗಿಂತ ಕಡಿಮೆ ಇದ್ದಾಗ ಅದರ ಹಿಂದಿನ ರೂಪಾಯಿ ಹಾಗೂ 50 ಪೈಸೆಗಿಂತ ಹೆಚ್ಚಿದ್ದಾಗ ಅದರ ಮುಂದಿನ ರೂಪಾಯಿಗೆ ಹೊಂದಿಸಬೇಕು ಎಂದು ಸೂಚಿಸಿ 2006ರಲ್ಲೇ ಕೇಂದ್ರ ಸರ್ಕಾರ ಸುತ್ತೋಲೆ ಹೊರಡಿಸಿದೆ. ಹೀಗಿರುವಾಗ 264.60 ರೂಪಾಯಿಗಳಿಗೆ 265 ರೂಪಾಯಿ ಪಡೆದಿರುವ ಹೋಟೆಲ್‌ನ ಕ್ರಮ ಯಾವುದೇ ರೀತಿಯಲ್ಲೂ ಅನುಚಿತ ವ್ಯಾಪಾರ ಪದ್ಧತಿ ಎನಿಸುವುದಿಲ್ಲ ಎಂದು ಆಯೋಗವು ಅಭಿಪ್ರಾಯಪಟ್ಟಿದೆ.

ದೂರುದಾರರು ಯಾವುದೇ ಪರಿಹಾರ ಪಡೆಯಲು ಅರ್ಹರಾಗಿಲ್ಲ. ಕೇವಲ ಪ್ರಚಾರದ ಉದ್ದೇಶಕ್ಕೆ ಇಂಥ ದೂರು ಸಲ್ಲಿಸಿರುವಂತೆ ಕಂಡುಬರುತ್ತಿದ್ದು, ಇದನ್ನು ಒಪ್ಪಲು ಸಾಧ್ಯವಿಲ್ಲ. ಇಂಥ ದೂರಿನಿಂದ ನ್ಯಾಯಾಲಯದ ಅಮೂಲ್ಯ ಸಮಯದ ಜತೆಗೆ ಹೋಟೆಲ್ ಮತ್ತದರ ಪರ ವಕೀಲರ ಸಮಯವೂ ವ್ಯರ್ಥವಾಗಿದೆ. ಆದ್ದರಿಂದ, ದೂರುದಾರರೇ ಪರಿಹಾರ ಪಾವತಿಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟಿರುವ ಗ್ರಾಹಕ ನ್ಯಾಯಾಲಯ, ಹೋಟೆಲ್‌ಗೆ ಎರಡು ಸಾವಿರ ರೂಪಾಯಿ ಪರಿಹಾರದ ಜತೆಗೆ, ವ್ಯಾಜ್ಯದ ವೆಚ್ಚ ಎರಡು ಸಾವಿರ ರೂಪಾಯಿಗಳನ್ನೂ ಪಾವತಿಸಬೇಕು ಎಂದು ದೂರುದಾರರಿಗೆ ಆದೇಶಿಸಿದೆ.

ಪ್ರಕರಣದ ಹಿನ್ನೆಲೆ: 2021ರ ಮಾರ್ಚ್‌ 21ರಂದು ರಾತ್ರಿ 8.15ಕ್ಕೆ ಇನ್‌ಫೆಂಟ್ರಿ ರಸ್ತೆಯಲ್ಲಿರುವ ಹೋಟೆಲ್‌ಗೆ ತೆರಳಿ ಬಿರಿಯಾನಿ ಪಾರ್ಸಲ್ ತೆಗೆದುಕೊಂಡಿದ್ದೆ. ಶುಲ್ಕದಲ್ಲಿ 264 ರೂಪಾಯಿ 60 ಪೈಸೆ ಮೊತ್ತ ನಮೂದಿಸಲಾಗಿತ್ತು. ಕೌಂಟರ್‌ನಲ್ಲಿ ಹಣ ಪಾವತಿಸಿದಾಗ 265 ರೂಪಾಯಿ ಪಡೆದು ರಸೀದಿ ನೀಡಲಾಗಿತ್ತು. 40 ಪೈಸೆ ಹೆಚ್ಚುವರಿ ಹಣ ಪಡೆದಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಕ್ಯಾಷಿಯರ್, ಹೋಟೆಲ್‌ನ ಮೇಲ್ವಿಚಾರಕ ಹಾಗೂ ವ್ಯವಸ್ಥಾಪಕ ಯಾರಿಂದಲೂ ಸೂಕ್ತ ಉತ್ತರ ಸಿಗಲಿಲ್ಲ. ಹೋಟೆಲ್‌ನ ವರ್ತನೆ ಗ್ರಾಹಕರನ್ನು ಲೂಟಿ ಮಾಡುವುದಲ್ಲದೆ ಬೇರೇನೂ ಅಲ್ಲ. ಹೆಚ್ಚುವರಿ ಹಣ ಪಡೆಯುವ ಮೂಲಕ ಸೇವಾ ಲೋಪ ಎಸಗಿರುವ ಹೋಟೆಲ್ ನನಗೆ ಮಾನಸಿಕ ಆಘಾತ ಹಾಗೂ ಯಾತನೆ ಉಂಟು ಮಾಡಿದೆ. ಆದ್ದರಿಂದ, ನನಗೆ 1 ರೂಪಾಯಿ ಪರಿಹಾರ ಪಾವತಿಸುವ ಜತೆಗೆ, ಈ ಪ್ರಕರಣದ ವೆಚ್ಚವನ್ನೂ ಭರಿಸುವಂತೆ ಹೋಟೆಲ್‌ಗೆ ನಿರ್ದೇಶಿಸಬೇಕು ಎಂದು ಕೋರಿ ನರಸಿಂಹಮೂರ್ತಿ ಗ್ರಾಹಕ ನ್ಯಾಯಾಲಯಕ್ಕೆ ದೂರು ನೀಡಿದ್ದರು.

ದೂರುದಾರರು ಹೋಟೆಲ್‌ನಲ್ಲಿ ಎರಡು ಬಿರಿಯಾನಿ ರೈಸ್ ಪಾರ್ಸಲ್ ತೆಗೆದುಕೊಂಡಿದ್ದರು. ಒಂದು ರೈಸ್‌ಗೆ 120 ರೂಪಾಯಿಗಳಂತೆ ಒಟ್ಟು 240 ರೂಪಾಯಿ ಪಾರ್ಸಲ್ ಶುಲ್ಕ 12 ರೂಪಾಯಿ ಸೇರಿ ಒಟ್ಟು 252 ರೂಪಾಯಿಗಳಾಗಿತ್ತು. ಈ ಮೊತ್ತಕ್ಕೆ ಶೇಕಡಾ 2.5 ಕೇಂದ್ರ ಜಿಎಸ್‌ಟಿ ಹಾಗೂ ಶೇಕಡಾ 2.5 ರಾಜ್ಯ ಜಿಎಸ್‌ಟಿ ಸೇರಿ ಒಟ್ಟು ಶೇಕಡಾ 5 ತೆರಿಗೆಯ ಮೊತ್ತ 12.60 ರೂಪಾಯಿಗಳನ್ನು ಸೇರಿಸಲಾಗಿದ್ದು, ಒಟ್ಟಾರೆ ಬಿಲ್ 264.60 ರೂಪಾಯಿಗಳಾಗಿವೆ. ತೆರಿಗೆಯ ಮೊತ್ತ 50 ಪೈಸೆಗಿಂತ ಹೆಚ್ಚಿದ್ದ ಕಾರಣ ಅದರ ಮುಂದಿನ ರೂಪಾಯಿ ಮೊತ್ತಕ್ಕೆ ಹೊಂದಾಣಿಕೆ (ರೌಂಡ್ ಫಿಗರ್) ಮಾಡಲಾಗಿದೆ. ಮೇಲಾಗಿ ಈ ರೀತಿ ಮೊತ್ತ ಹೊಂದಿಸಿರುವುದು ಕೇವಲ ತೆರಿಗೆ ಮೊತ್ತದ ಮೇಲೆಯೇ ಹೊರತು ದೂರುದಾರರು ಖರೀದಿಸಿರುವ ಆಹಾರ ಪದಾರ್ಥದ ಮೇಲಲ್ಲ ಎಂದು ಹೋಟೆಲ್ ಪರ ವಕೀಲರು ನ್ಯಾಯಾಲಯಕ್ಕೆ ವಿವರಿಸಿದ್ದರು.

ತೆರಿಗೆ ಮೊತ್ತ 0-99 ಪೈಸೆಯೊಳಗಿದ್ದಾಗ ಒಟ್ಟು ಮೊತ್ತವನ್ನು ಹೊಂದಿಸಲು ಕೇಂದ್ರ ಸರಕು ಮತ್ತು ಸೇವೆಗಳ ತೆರಿಗೆ ಕಾಯಿದೆ-2017ರ ಸೆಕ್ಷನ್ 170ರಲ್ಲಿ9 ಅವಕಾಶ ನೀಡಲಾಗಿದೆ. ಅದರ ಪ್ರಕಾರ ತೆರಿಗೆ ಮೊತ್ತವು 50 ಪೈಸೆಗಿಂತ ಕಡಿಮೆ ಇದ್ದಾಗ ಅದರ ಹಿಂದಿನ ರೂಪಾಯಿಗೆ ಹಾಗೂ 50 ಪೈಸೆಗಿಂತ ಹೆಚ್ಚಾಗಿದ್ದರೆ ಮುಂದಿನ ರೂಪಾಯಿಗೆ ಹೊಂದಿಸಬಹುದಾಗಿದೆ. ಈ ಪ್ರಕರಣದಲ್ಲಿ 60 ಪೈಸೆ ಇದ್ದ ಕಾರಣ ಅದರ ಮುಂದಿನ ರೂಪಾಯಿಗೆ ಹೊಂದಿಸಿ 265 ರೂಪಾಯಿ ಪಡೆಯಲಾಗಿದೆ. ದೂರುದಾರರು ಆರೋಪಿಸಿರುವಂತೆ ಹೋಟೆಲ್ ವತಿಯಿಂದ ಯಾವುದೇ ರೀತಿಯ ಸೇವಾ ಲೋಪವಾಗಿಲ್ಲ. ಆದ್ದರಿಂದ, ದೂರು ವಜಾಗೊಳಿಸಬೇಕು ಎಂದು ಹೋಟೆಲ್ ಪರ ವಕೀಲರು ಮನವಿ ಮಾಡಿದ್ದರು.

T Narasimha Murthy Versus Empire Hotel.pdf
Preview