pregnant woman 
ಸುದ್ದಿಗಳು

ಮಹಿಳಾ ಉದ್ಯೋಗಿಗಳ ವೃತ್ತಿಜೀವನದ ಮೇಲೆ ಮಾತೃತ್ವ ಪರಿಣಾಮ ಬೀರದಂತೆ ಉದ್ಯೋಗದಾತರು ನೋಡಿಕೊಳ್ಳಬೇಕು: ಕೇರಳ ಹೈಕೋರ್ಟ್

ಗುತ್ತಿಗೆ ಆಧಾರದ ಮೇಲೆ ದೀರ್ಘಾವಧಿ ಉದ್ಯೋಗದಲ್ಲಿದ್ದ ಮೂವರು ಮಹಿಳೆಯರಿಗೆ ಹೆರಿಗೆ ಸೌಲಭ್ಯ ನೀಡುವಂತೆ ಕೇರಳ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯಕ್ಕೆ ನಿರ್ದೇಶನ ನೀಡುವ ವೇಳೆ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿತು.

Bar & Bench

ಮಾತೃತ್ವದಿಂದ ವೃತ್ತಿಜೀವನಕ್ಕೆ ಹಾನಿಯಾಗದಂತೆನೋಡಿಕೊಳ್ಳುವ ಹೊಣೆ ಉದ್ಯೋಗದಾತರದ್ದು ಎಂದು ಕೇರಳ ಹೈಕೋರ್ಟ್‌ ತಿಳಿಸಿದೆ.

ಮಹಿಳಾ ಉದ್ಯೋಗಿಗಳಿಗೆ ಹೆರಿಗೆ ಸೌಲಭ್ಯಗಳನ್ನು ಒದಗಿಸುವುದು ಸೇರಿದಂತೆ ಮಾತೃತ್ವದಿಂದ ಮಹಿಳೆಯರ ವೃತ್ತಿಜೀವನಕ್ಕೆ ಅಡ್ಡಿಯಾಗದಂತೆ ನೋಡಿಕೊಳ್ಳಲು ಉದ್ಯೋಗದಾತರು ಸಾಧ್ಯವಿರುವ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ನ್ಯಾಯಮೂರ್ತಿ ವಿ ರಾಜಾ ವಿಜಯರಾಘವನ್ ತಿಳಿಸಿದರು.

ಗುತ್ತಿಗೆ ಆಧಾರದ ಮೇಲೆ ಪ್ರೋಗ್ರಾಮರ್‌ಗಳಾಗಿ ಕೆಲಸ ಮಾಡುತ್ತಿದ್ದ ಮೂವರು ಮಹಿಳೆಯರಿಗೆ ಹೆರಿಗೆ ಸೌಲಭ್ಯ ಒದಗಿಸುವಂತೆ ಕೇರಳ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯಕ್ಕೆ ನಿರ್ದೇಶನ ನೀಡುವ ವೇಳೆ ಅದು ಈ ಅಭಿಪ್ರಾಯ ವ್ಯಕ್ತಪಡಿಸಿದೆ. ಗುತ್ತಿಗೆ ಅವಧಿ ಮುಗಿದಿರುವುದರಿಂದ ಹೆರಿಗೆ ರಜೆ ಒದಗಿಸಲಾಗದು ಎಂದು ವಿವಿ ತಿಳಿಸಿದ್ದಾಗಿ ಅರ್ಜಿದಾರರು ದೂರಿದ್ದರು.

ಮಹಿಳಾ ಉದ್ಯೋಗಿಗಳು ಪಡೆಯಬೇಕಾದ ಎಲ್ಲಾ ಅರ್ಹ ಸೌಲಭ್ಯಗಳನ್ನು ಒದಗಿಸಲು ಕಾಳಜಿ ವಹಿಸಬೇಕು. ಮಹಿಳಾ ಅಧಿಕಾರಿ ಎಂದು ಪರಿಗಣಿಸಿ ಉದ್ಯೋಗದಾತ ಸಹಾನುಭೂತಿ ತೋರಬೇಕು. ಜೊತೆಗೆ ಕೆಲಸದ ಸ್ಥಳದಲ್ಲಿ ಮಹಿಳಾ ಉದ್ಯೋಗಿಯ ಘನತೆಗೆ ಕುಂದು ತರುವಂತಹ ಯಾವುದೇ ಕ್ರಮ ತೆಗೆದುಕೊಳ್ಳಬಾರದು ಎಂದು ನ್ಯಾಯಾಲಯ ಹೇಳಿದೆ. ಅಂತೆಯೇ ಅರ್ಜಿದಾರರಿಗೆ ನೀಡಬೇಕಾದ ಹೆರಿಗೆ ಸೌಲಭ್ಯವನ್ನು ತ್ವರಿತವಾಗಿ ವಿತರಿಸುವಂತೆ ಅದು ಸೂಚಿಸಿತು.