Karnataka HC and Justice Sachin Shankar Magadum 
ಸುದ್ದಿಗಳು

ರಜೆ ನಗದೀಕರಣವು ಸಂವಿಧಾನದಡಿ ಲಭ್ಯವಿರುವ ಕಾನೂನುಬದ್ಧ ಹಕ್ಕು: ಹೈಕೋರ್ಟ್‌

ವಾಟರ್‌ಮನ್‌ ಆಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದ ಪಾವಗಡ ಎಚ್ ಚನ್ನಯ್ಯಗೆ ಮೂರು ತಿಂಗಳಲ್ಲಿ 1.32 ಲಕ್ಷ ರೂಪಾಯಿ ರಜೆ ನಗದೀಕರಣವನ್ನು ಶೇ.6ರಷ್ಟು ಬಡ್ಡಿದರಲ್ಲಿ ಪಾವತಿಸುವಂತೆ ಸರ್ಕಾರಕ್ಕೆ ನಿರ್ದೇಶಿಸಿದ ನ್ಯಾಯಾಲಯ.

Bar & Bench

ರಜೆ ನಗದೀಕರಣವನ್ನು ವಿವೇಚನೆಯ ಉಡುಗೊರೆ ಎಂದು ಪರಿಗಣಿಸಲಾಗದು, ಅದೊಂದು ಸಂವಿಧಾನದಡಿ ಲಭ್ಯವಿರುವ ಕಾನೂನುಬದ್ಧ ಹಕ್ಕು ಆಗಿದೆ ಎಂದು ಕರ್ನಾಟಕ ಹೈಕೋರ್ಟ್‌ ಹೇಳಿದೆ.

ವಾಟರ್‌ಮನ್‌ ಆಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದ ಪಾವಗಡ ಎಚ್ ಚನ್ನಯ್ಯಗೆ ಮೂರು ತಿಂಗಳಲ್ಲಿ1.32 ಲಕ್ಷ ರೂಪಾಯಿ ರಜೆ ನಗದೀಕರಣವನ್ನು ಶೇ.6ರಷ್ಟು ಬಡ್ಡಿದರಲ್ಲಿ ಪಾವತಿಸುವಂತೆ ಸರ್ಕಾರಕ್ಕೆ ನ್ಯಾಯಾಲಯ ನಿರ್ದೇಶನ ನೀಡಿದೆ. 

ರಜೆ ನಗದೀಕರಣ ಮಾಡದ ಸರ್ಕಾರದ ಕ್ರಮ ಪ್ರಶ್ನಿಸಿ ಎಚ್‌ ಚನ್ನಯ್ಯ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಸಚಿನ್‌ ಶಂಕರ್‌ ಮಗದುಮ್‌ ಅವರ ಏಕಸದಸ್ಯ ಪೀಠವು ಮಾನ್ಯ ಮಾಡಿದೆ.

“ಅರ್ಜಿದಾರರ ಸೇವಾ ದಾಖಲೆಗಳ ಬಗ್ಗೆ ಪ್ರತಿವಾದಿ ಆಕ್ಷೇಪ ಎತ್ತಿದ್ದಾರೆ, ಆದರೆ ಅವರು ಹಲವು ವರ್ಷಗಳಿಂದ ನಾನಾ ಆಡಳಿತ ಘಟಕಗಳಡಿ ಸೇವೆ ಸಲ್ಲಿಸಿದ್ದಾರೆ. ಸೇವಾ ನಿವೃತ್ತಿ ನಂತರ ಅವರಿಗೆ ಪಿಂಚಣಿ ಭತ್ಯೆಗಳನ್ನು ನೀಡುವಂತೆ ಗ್ರಾಮ ಪಂಚಾಯಿತಿ ಆದೇಶಿಸಿದೆ” ಎಂದು ಪೀಠ ಹೇಳಿದೆ.

“ಸುಪ್ರೀಂ ಕೋರ್ಟ್‌ ದಿಯೋಕಿ ನಂದನ್‌ ಪ್ರಸಾದ್‌ ವರ್ಸಸ್‌ ಸ್ಟೇಟ್‌ ಆಫ್‌ ಬಿಹಾರ ಪ್ರಕರಣದಲ್ಲಿಪಿಂಚಣಿ ಮತ್ತು ಗ್ರ್ಯಾಚುಟಿ ಪಾವತಿ ಉದ್ಯೋಗದಾತರ ವಿವೇಚನೆಗೆ ಒಳಪಟ್ಟಿರುವುದಿಲ್ಲ, ಅದು ಕಾನೂನು ಬದ್ಧ ಹಕ್ಕು. ಪಿಂಚಣಿ, ಗ್ರ್ಯಾಚುಟಿ ಮತ್ತು ರಜೆ ನಗದೀಕರಣ ಸವಿಧಾನದ ಸೆಕ್ಷನ್‌ 19(1)(ಎಫ್‌)  ಮತ್ತು ಸೆಕ್ಷನ್‌ 31(1)ರಡಿ ಲಭ್ಯವಿರುವ ಮೂಲಭೂತ ಹಕ್ಕಿನ ಭಾಗವಾಗಿದೆ ಎಂದು ತಿಳಿಸಿದೆ. ಹೀಗಾಗಿ, ಶಾಸನ ಬದ್ಧವಾಗಿ ಅವರಿಗೆ ರಜೆ ನಗದೀಕರಣ ನೀಡಬೇಕಾಗಿದೆ” ಎಂದು ಆದೇಶಿಸಿದೆ.

“ಸಂವಿಧಾನದಡಿ ನಾಗರಿಕರಿಗೆ ರಕ್ಷಣೆ ಇದೆ. ಅದರಂತೆ ಸಂವಿಧಾನದ 300ಎ ನೇ ವಿಧಿಯಡಿ ವ್ಯಕ್ತಿ ವೈಯಕ್ತಿಕವಾಗಿ ಆಸ್ತಿ ಹೊಂದುವುದನ್ನು ನಿರ್ಬಂಧಿಸುವಂತಿಲ್ಲ. ಅದರಲ್ಲಿ ಗಳಿಕೆ ರಜೆ ನಗದೀಕರಣವೂ ಸೇರಿದೆ. ಈ ರೀತಿ ರಜೆ ನಗದೀಕರಣ ತಡೆ ಹಿಡಿಯುವುದು ಅಸಾಂವಿಧಾನಿಕ” ಎಂದು ಪೀಠ ಹೇಳಿದೆ.

ಪ್ರಕರಣದ ಹಿನ್ನೆಲೆ: ಎಚ್‌ ಚನ್ನಯ್ಯ 1979ರಲ್ಲಿ ಪಾವಗಡ ಪಂಚಾಯಿತಿಯಲ್ಲಿ ವಾಟರ್‌ಮನ್‌ ಆಗಿ ಸರ್ಕಾರಿ ಸೇವೆಗೆ ಸೇರಿದ್ದರು. ಆನಂತರ ಅವರು 2013ರಲ್ಲಿ ವಯೋಸಹಜ ನಿವೃತ್ತಿ ಹೊಂದಿದ್ದರು. ಬಳಿಕ ಅಕೌಂಟೆಂಟ್‌ ಜನರಲ್‌ ಕಚೇರಿ ಚನ್ನಯ್ಯ ಅವರ ಸೇವಾ ವಿವರ ಹಾಗೂ ಅವರಿಗೆ ನೀಡಬೇಕಾದ ಪಿಂಚಣಿ ವಿವರಗಳನ್ನು ಲೆಕ್ಕ ಹಾಕಿತ್ತು. ಅದೇ ರೀತಿ ಜಿಲ್ಲಾ ಪಂಚಾಯಿತಿ ಸಿಇಒ ಮತ್ತು ಪಾವಗಡ ತಾಲ್ಲೂಕು ಪಂಚಾಯಿತಿ ಅಧಿಕಾರಿಗೆ ಅರ್ಜಿದಾರರ ರಜೆ ನಗದೀಕರಣವನ್ನು ತ್ವರಿತವಾಗಿ ಇತ್ಯರ್ಥ ಮಾಡುವಂತೆ ನಿರ್ದೇಶನ ನೀಡಿತ್ತು. ಆದರೆ, ಅರ್ಜಿದಾರರಿಗೆ ಪಾವತಿಸಬೇಕಾದ ಗಳಿಕೆ ರಜೆ ನಗದನ್ನು ಇತ್ಯರ್ಥಪಡಿಸಿರಲಿಲ್ಲ. ಹೀಗಾಗಿ, ಅರ್ಜಿದಾರರು ತಮಗೆ ಗಳಿಕೆ ರಜೆ ನಗದೀಕರಣ ಮಾಡಿಕೊಡುವಂತೆ ನಿರ್ದೇಶನ ನೀಡಬೇಕು ಎಂದು ಹೈಕೋರ್ಟ್‌ ಮೆಟ್ಟಿಲೇರಿದ್ದರು.

ಆಗ ಪ್ರತಿವಾದಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯು ಅರ್ಜಿದಾರರು ತಾತ್ಕಾಲಿಕ ನೌಕರರರಾಗಿದ್ದರು. ಅವರ ಸೇವಾ ದಾಖಲೆಗಳ ಬಗ್ಗೆ ಸಂದೇಹವಿದೆ, ಅರ್ಜಿದಾರರು ಎಜಿ ಕಚೇರಿಗೆ ಸಲ್ಲಿಸಿರುವ ದಾಖಲೆಗಳ ಪ್ರಕಾರ ಅವರು ಆರಂಭದಲ್ಲಿ ಗ್ರಾಮ ಪಂಚಾಯಿತಿಯಲ್ಲಿ ಕೆಲಸ ಮಾಡಿದ್ದಕ್ಕೆ ದಾಖಲೆಗಳಲ್ಲಿ ಹೊಂದಿಕೆ ಆಗುತ್ತಿಲ್ಲ ಎಂದು ತಕರಾರು ಎತ್ತಿದ್ದರು.