Kalburgi Fort

 
ಸುದ್ದಿಗಳು

[ಕಲಬುರ್ಗಿ ಕೋಟೆ ಒತ್ತುವರಿ] ಅಕ್ರಮ ವಾಸಿಗಳ ತೆರವುಗೊಳಿಸುವ ಇಚ್ಛಾಶಕ್ತಿ ಇದೆಯೇ? ಸರ್ಕಾರಕ್ಕೆ ಹೈಕೋರ್ಟ್‌ ಪ್ರಶ್ನೆ

ಅಕ್ರಮ ವಾಸಿಗಳು ಮತ್ತು ಒತ್ತುವರಿದಾರರನ್ನು ತೆರವುಗೊಳಿಸಲು ರೂ. 30 ಕೋಟಿ ಹಣ ಬೇಕಾಗುತ್ತದೆ ಎಂದು ಜಿಲ್ಲಾಧಿಕಾರಿ ವರದಿ ನೀಡಿದ್ದಾರೆ ಎಂದು ಪೀಠಕ್ಕೆ ತಿಳಿಸಿದ ಸರ್ಕಾರದ ವಕೀಲರು.

Bar & Bench

ಕಲಬುರ್ಗಿಯ ಐತಿಹಾಸಿಕ ಕೋಟೆಯ ಸಂರಕ್ಷಿತ ಪ್ರದೇಶದ ವ್ಯಾಪ್ತಿಯಲ್ಲಿ ವಾಸವಾಗಿರುವ 282 ಒತ್ತುವರಿದಾರರು ಹಾಗೂ ಅಕ್ರಮ ವಾಸಿಗಳನ್ನು ತೆರವುಗೊಳಿಸಲು ರೂ.30 ಕೋಟಿ ಹಣ ಬೇಕಿದೆ ಎಂದು ರಾಜ್ಯ ಸರ್ಕಾರವು ಬುಧವಾರ ಕರ್ನಾಟಕ ಹೈಕೋರ್ಟ್‌ಗೆ ತಿಳಿಸಿದೆ.

ಕೋಟೆಯ ಜಾಗವನ್ನು ಒತ್ತುವರಿ ಮಾಡಿರುವವರನ್ನು ತೆರವುಗೊಳಿಸಲು ಕೋರಿ ಶರಣ್ ದೇಸಾಯಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಮನವಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಮತ್ತು ನ್ಯಾಯಮೂರ್ತಿ ಎಸ್‌ ಆರ್‌ ಕೃಷ್ಣ ಕುಮಾರ್‌ ಅವರ ನೇತೃತ್ವದ ವಿಭಾಗೀಯ ಪೀಠ ನಡೆಸಿತು.

ಸರ್ಕಾರದ ಪರ ಹಾಜರಾದ ಹೆಚ್ಚುವರಿ ಸರ್ಕಾರಿ ವಕೀಲ ವಿಜಯಕುಮಾರ್ ಪಾಟೀಲ್ ಅವರು “ಅಕ್ರಮ ವಾಸಿಗಳು ಮತ್ತು ಒತ್ತುವರಿದಾರರನ್ನು ತೆರವುಗೊಳಿಸಲು 30 ಕೋಟಿ ರೂಪಾಯಿ ಹಣ ಬೇಕಾಗುತ್ತದೆ ಎಂದು ಜಿಲ್ಲಾಧಿಕಾರಿ ವರದಿ ನೀಡಿದ್ದಾರೆ. ಈ ಕೋಟೆಯು ಭಾರತೀಯ ಪುರಾತತ್ವ ಇಲಾಖೆಗೆ ಸೇರಿದ್ದರಿಂದ ಅವರೂ ಸಹ ಹಣಕಾಸಿನ ನೆರವು ನೀಡಬೇಕಾಗುತ್ತದೆ. ಒತ್ತುವರಿದಾರರು ಬಹಳ ವರ್ಷಗಳಿಂದ ಅಲ್ಲಿ ನೆಲೆಸಿದ್ದಾರೆ. ಮಾನವೀಯ ದೃಷ್ಟಿಯಿಂದ ಅವರಿಗೆ ಪುನರ್ವಸತಿ ಕಲ್ಪಿಸಬೇಕಾಗಿದೆ” ಎಂದರು.

ಇದಕ್ಕೆ ಪೀಠವು “ಅಕ್ರಮ ವಾಸಿಗಳನ್ನು ತೆರವುಗೊಳಿಸಲು ರಾಜಕೀಯ ಇಚ್ಛಾಶಕ್ತಿ ಇದೆಯೇ? ಅದು ಇದ್ದಿದ್ದರೆ ಒತ್ತುವರಿ ಆಗಲು ಬಿಡುತ್ತಿರಲಿಲ್ಲ. ಒತ್ತುವರಿದಾರರನ್ನು ತೆರವುಗೊಳಿಸುವಂತೆ ಆದೇಶಿಸಲು ನ್ಯಾಯಲಯಕ್ಕೆ ಸಮಸ್ಯೆಯಿಲ್ಲ. ಒತ್ತುವರಿ ತೆರವುಗೊಳಿಸಲು ಆಗಿಲ್ಲ ಎಂದು ಸರ್ಕಾರವು ನ್ಯಾಯಾಲಯದ ಮುಂದೆ ಬಂದು ನಿಲ್ಲುವಂತಾಗಬಾರದು. ಈ ಬಗ್ಗೆ ರಾಜಕೀಯ ನಾಯಕರನ್ನೂ ಮಾತನಾಡಿಸುತ್ತೀರಾ ನೋಡಿ” ಎಂದು ಸರ್ಕಾರದ ಪರ ವಕೀಲರಿಗೆ ಪೀಠ ಹೇಳಿತು.

“ಅಕ್ರಮ ವಾಸಿಗಳಾಗಿದ್ದರೂ ಅವರೆಲ್ಲರೂ ಬಹಳ ವರ್ಷಗಳಿಂದ ಅಲ್ಲಿ ನೆಲೆಸಿದ್ದಾರೆ. ಅಲ್ಲಿಂದ ಒಕ್ಕಲೆಬ್ಬಿಸಿದ ಮೇಲೆ ಅವರಿಗೊಂದು ನೆಲೆ ಬೇಕಲ್ಲವೇ? ಬದುಕುಕಟ್ಟಿಕೊಳ್ಳಲು ಪರ್ಯಾಯ ವ್ಯವಸ್ಥೆ ಬೇಕಲ್ಲವೇ? ಸರ್ಕಾರದ ಯಾವುದಾದರೂ ಯೋಜನೆಯಡಿ ಸಂರಕ್ಷಿತ ಪ್ರದೇಶದಲ್ಲಿ ನೆಲೆಸಿರುವ 282 ಒತ್ತುವರಿದಾರರು ಹಾಗೂ ಅಕ್ರಮ ವಾಸಿಗಳಿಗೆ ಪುನರ್ವಸತಿ ಕಲ್ಪಿಸಲು ಅವಕಾಶ ಇದೆಯೇ? ಎಂದು ಎರಡು ವಾರಗಳಲ್ಲಿ ತಿಳಿಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಿ ಪೀಠವು ವಿಚಾರಣೆಯನ್ನು ಮುಂದೂಡಿತು.