ತೆಲಂಗಾಣ ಪೊಲೀಸರು ಜನರ ಮೂಲಭೂತ ಹಕ್ಕುಗಳನ್ನು ನಿರ್ಲಕ್ಷಿಸಿದ್ದು ಮುನ್ನೆಚ್ಚರಿಕೆ ಕ್ರಮವಾಗಿ ಬಂಧನ ಆದೇಶ ನೀಡುವಾಗ ನಾಗರಿಕರ ಸ್ವಾತಂತ್ರ್ಯ ನಿಗ್ರಹಿಸುತ್ತಿದ್ದಾರೆ ಎಂದು ಸುಪ್ರೀಂ ಕೋರ್ಟ್ ಸೋಮವಾರ ಅಸಮಾಧಾನ ವ್ಯಕ್ತಪಡಿಸಿದೆ.
ಇಂತಹ ಪ್ರವೃತ್ತಿಗೆ ಅಂತ್ಯ ಹಾಡಬೇಕು ಎಂದು ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ದೀಪಂಕರ್ ದತ್ತ ಅವರಿದ್ದ ಪೀಠ ಅಭಿಪ್ರಾಯಪಟ್ಟಿತು. ಕಾನೂನನ್ನು ಹಲವು ವರ್ಷಗಳಿಂದ ಯಾಂತ್ರಿಕವಾಗಿ ಬಳಸುತ್ತಿರುವುದಕ್ಕೆ ಅದು ಬೇಸರ ಸೂಚಿಸಿತು.
ತಮ್ಮ ಪತಿಗೆ ಮುನ್ನೆಚ್ಚರಿಕೆ ಕ್ರಮವಾಗಿ ಬಂಧನ ಆದೇಶ ನೀಡಿದ್ದನ್ನು ಪ್ರಶ್ನಿಸಿ ಮಹಿಳೆಯೊಬ್ಬರು ಈ ವರ್ಷದ ಆರಂಭದಲ್ಲಿ ತೆಲಂಗಾಣ ಹೈಕೋರ್ಟ್‌ಗೆ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ್ದ ಹೈಕೋರ್ಟ್ ಅರ್ಜಿಯನ್ನು ವಜಾ ಮಾಡಿತ್ತು. ಇದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಪ್ರಸ್ತುತ ಮೇಲ್ಮನವಿ ಸಲ್ಲಿಸಲಾಗಿತ್ತು.
ಮುನ್ನೆಚ್ಚರಿಕೆ ಕ್ರಮವಾಗಿ ಬಂಧನ ಆದೇಶಗಳ ನ್ಯಾಯಸಮ್ಮತತೆಯನ್ನು ತೀರ್ಮಾನಿಸುವಾಗ ಸಾಂವಿಧಾನಿಕ ನ್ಯಾಯಾಲಯಗಳು ಪರಿಗಣಿಸಬೇಕಾದ ಹತ್ತು ಮಾರ್ಗಸೂಚಿಗಳನ್ನು ಸುಪ್ರೀಂ ಕೋರ್ಟ್ ವಿಚಾರಣೆ ಸಂದರ್ಭದಲ್ಲಿ ನೀಡಿದೆ.
ಅಲ್ಲದೆ "ಕಾನೂನು ಮತ್ತು ಸುವ್ಯವಸ್ಥೆ" ಪರಿಸ್ಥಿತಿಯ ಅಡಿಯಲ್ಲಿ ಸೃಷ್ಟಿಯಾಗುವ ಅಪರಾಧಗಳು ಮತ್ತು ಮತ್ತು "ಸಾರ್ವಜನಿಕ ಸುವ್ಯವಸ್ಥೆ" ಮೇಲೆ ಪೂರ್ವಾಗ್ರಹದಿಂದ ಪ್ರಭಾವ ಬೀರುವ ಅಪರಾಧಗಳ ನಡುವಿನ ವ್ಯತ್ಯಾಸ ಗುರುತಿಸುವಲ್ಲಿ ಸಂಬಂಧಪಟ್ಟ ಅಧಿಕಾರಿಗಳು ವಿಫಲವಾಗಿದ್ದಾರೆ. ನಿಗದಿತ ಪ್ರಕ್ರಿಯೆಯ ಪಾಲನೆ ಮಾಡದಿರುವುದೂ ಕಂಡು ಬಂದಿದೆ ಎಂದಿರುವ ಪೀಠ, ಬಂಧನ ಆದೇಶಗಳನ್ನು ಅಸ್ಪಷ್ಟವಾಗಿ ಹೇಳಬಾರದು ಮತ್ತು ಬಂಧಿತರು ಅಂತಹ ಆದೇಶಗಳನ್ನು ಅರ್ಥ ಮಾಡಿಕೊಳ್ಳುವಂತಿರಬೇಕು ಎಂಬುದಾಗಿ ತಿಳಿಸಿತು.
ಹೀಗಾಗಿ ಬಂಧನ ಆದೇಶ ಮತ್ತು ಹೈಕೋರ್ಟ್ ತೀರ್ಪನ್ನು ತಳ್ಳಿಹಾಕಿದ ನ್ಯಾಯಾಲಯ ಅರ್ಜಿದಾರರ ಪತಿಯನ್ನು ಕೂಡಲೇ ಬಿಡುಗಡೆ ಮಾಡುವಂತೆ ಆದೇಶಿಸಿತು. ಅರ್ಜಿದಾರರ ಪರ ಹಿರಿಯ ವಕೀಲ ಸಿದ್ಧಾರ್ಥ್ ಲೂತ್ರಾ ವಾದ ಮಂಡಿಸಿದರೆ, ತೆಲಂಗಾಣ ಸರ್ಕಾರವನ್ನು ಹಿರಿಯ ನ್ಯಾಯವಾದಿ ಸಿದ್ಧಾರ್ಥ ದವೆ ಪ್ರತಿನಿಧಿಸಿದ್ದರು.
[ಮಾರ್ಗಸೂಚಿಯ ವಿವರಗಳಿಗಾಗಿ ತೀರ್ಪಿನ ಪ್ರತಿಯನ್ನು ಅವಲೋಕಿಸಿ]