ರಾಜ್ಯ ಸರ್ಕಾರ ಮತ್ತು ಇತರೆ ಪ್ರಾಧಿಕಾರಗಳು ಹೊಣೆಗಾರಿಕೆಯನ್ನು ತನ್ನ ಮೇಲೆ ಹೊರಿಸುವ ಮೂಲಕ ಮೋರ್ಬಿ ತೂಗುಸೇತುವೆ ಕುಸಿದುಬಿದ್ದದ್ದಕ್ಕೆ ಸಂಬಂಧಿಸಿದ ತನ್ನನ್ನು ಮಾತ್ರವೇ ನಿಂದನೆಗೆ ಗುರಿಪಡಿಸಲಾಗದು ಎಂದು ತೂಗುಸೇತುವೆಯ ನಿರ್ವಹಣೆ ಹೊಣೆ ಹೊತ್ತಿದ್ದ ಖಾಸಗಿ ಗುತ್ತಿಗೆದಾರ ಸಂಸ್ಥೆಯಾದ ಅಜಂತಾ ಓರೇವಾ ಸಂಸ್ಥೆಯು ಬುಧವಾರ ಗುಜರಾತ್ ಹೈಕೋರ್ಟ್‌ಗೆ ತಿಳಿಸಿದೆ [ಸ್ವಯಂಪ್ರೇರಿತ ಪಿಐಎಲ್ ವರ್ಸಸ್ ಗುಜರಾತ್ ಸರ್ಕಾರ].
ಕೆಲವು ಪ್ರಭಾವಿ ವ್ಯಕ್ತಿಗಳು ತೂಗುಸೇತುವೆಯ ಮೇಲ್ವಿಚಾರಣೆ ನಡೆಸಲು ಮನವೊಲಿಸಿದ್ದರಿಂದ ಅದನ್ನು ಮಾಡಲಾಗುತ್ತಿತೇ ವಿನಾ ಅದರಿಂದ ತನಗೆ ಯಾವುದೇ ಲಾಭವಾಗಿಲ್ಲ ಎಂದು ಗುತ್ತಿದಾರರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ನಿರುಪಮ್ ನಾನಾವತಿ ಅವರು ಮುಖ್ಯ ನ್ಯಾಯಮೂರ್ತಿ ಅರವಿಂದ್ ಕುಮಾರ್ ಮತ್ತು ನ್ಯಾ. ಅಶುತೋಷ್ ಜೆ. ಶಾಸ್ತ್ರಿ ಅವರ ನೇತೃತ್ವದ ವಿಭಾಗೀಯ ಪೀಠಕ್ಕೆ ತಿಳಿಸಿದರು.
“ನನ್ನನ್ನು ಸಮರ್ಥಿಸಿಕೊಳ್ಳಲು ಮಾತ್ರವೇ ನಾನು ಇಲ್ಲಿದ್ದೇನೆ. ಜಿಲ್ಲಾಧಿಕಾರಿ ಅಥವಾ ರಾಜ್ಯ ಸರ್ಕಾರದ ಪ್ರಾಧಿಕಾರಗಳು ಏನು ಮಾಡಿವೆ ಎಂಬುದು ನಮಗೆ ತಿಳಿದಿದೆ. ಅವರೆಲ್ಲರೂ ತಮ್ಮ ಹೊಣೆಗಾರಿಯನ್ನು ನನ್ನ ಮೇಲೆ ಹೊರಿಸಲಾಗದು. ಅವರು ಹಾಗೆ ಮಾಡಿದರೆ, ನಾವು ಮಾತನಾಡಬೇಕಾಗುತ್ತದೆ” ಎಂದು ಹಿರಿಯ ವಕೀಲ ನಾನಾವತಿ ಹೇಳಿದರು.
“ತೂಗುಸೇತುವೆ ನಿರ್ವಹಣೆಯು ವಾಣಿಜ್ಯದಾಯಕವಾಗಿರಲಿಲ್ಲ. ಅತ್ಯುನ್ನತ ಸ್ಥಾನದಲ್ಲಿರುವ ಪ್ರಭಾವಿ ವ್ಯಕ್ತಿಗಳು ಪಾರಂಪರಿಕವಾದ ಈ ತೂಗುಸೇತುವೆ ನೋಡಿಕೊಳ್ಳಲು ಮನವೊಲಿಸಿದ್ದರು. ಹೀಗಾಗಿ, ಅದರ ಜವಾಬ್ದಾರಿ ಹೊತ್ತುಕೊಳ್ಳಲಾಗಿತ್ತು. ಈಗಲೇ ಅವರ ಹೆಸರನ್ನು ನಾನು ತೆಗೆದುಕೊಳ್ಳಲು ಹೋಗುವುದಿಲ್ಲ. ಈ ತೂಗುಸೇತುವೆಯಿಂದ ನಮಗೆ ಯಾವುದೇ ಲಾಭವಾಗಿಲ್ಲ. ಏಕಕಾಲಕ್ಕೆ ಉಂಟಾದ ಜನದಟ್ಟಣೆಯಿಂದಾಗಿ ತೂಗುಸೇತುವೆ ಕುಸಿದುಬಿದ್ದಿತು” ಎಂದರು.
“ಈ ದಾವೆಯನ್ನು ನಾವು ವಿರೋಧಾತ್ಮಕ ದಾವೆ ಎಂದು ಭಾವಿಸಿಲ್ಲ. ಅದೃಷ್ಟ ಕೈಹಿಡಿಯಲಿಲ್ಲ. ಇದರಿಂದ ಅನಾಹುತ ಸಂಭವಿಸಿತು. ಈ ದುರಂತದಿಂದ ನಮಗೂ ಆಘಾತವಾಗಿದೆ. ಅನಾಥವಾಗಿರುವ ಏಳು ಮಕ್ಕಳನ್ನು ನಾವು ನೋಡಿಕೊಳ್ಳುತ್ತೇವೆ. ಆ ಮಕ್ಕಳಿಗೆ ಶಿಕ್ಷಣ, ವಸತಿ ಹಾಗೂ ಬದುಕಲು ಬೇಕಿರುವ ಎಲ್ಲಾ ಸವಲತ್ತು ಕಲ್ಪಿಸಿಕೊಡಲಾಗುವುದು. ನಮ್ಮ ಸಂಸ್ಥೆಯಲ್ಲಿ ಅಥವಾ ಬೇರೆ ಸಂಸ್ಥೆಯಲ್ಲಿ ಅವರಿಗೆ ಉದ್ಯೋಗ ಕೊಡಿಸಲಾಗುವುದು” ಎಂದರು.
ಇದಕ್ಕೆ ಪೀಠವು “ಮೊದಲಿಗೆ ನೀವು ಪರಿಹಾರ ವಿತರಿಸಿ. ಆದರೆ, ನೀವು ಪರಿಹಾರ ನೀಡುತ್ತೀರಿ ಎಂದ ಮಾತ್ರಕ್ಕೆ ಅದು ನಿಮ್ಮನ್ನು ಕಾಯುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸುತ್ತಿದ್ದೇವೆ. ಇದರರ್ಥ ಕಾನೂನಿನ ಪ್ರಕಾರ ಸರ್ಕಾರ ಯಾವುದೇ ಕ್ರಮಕೈಗೊಳ್ಳುವುದಿಲ್ಲ ಎಂದಲ್ಲ. ಕಾನೂನು ಪ್ರಕಾರ ನೀವು ಪರಿಣಾಮ ಎದುರಿಸಲೇಬೇಕು” ಎಂದು ಸಿಜೆ ಕುಮಾರ್ ಹೇಳಿದರು.
ಅಲ್ಲದೇ, ಮೋರ್ಬಿ ನಗರ ಪಾಲಿಕೆಯನ್ನು ಉದ್ದೇಶಿಸಿ ಪೀಠವು “ಗುತ್ತಿಗೆದಾರರು ನಿಮಗೆ ಬೆದರಿಕೆ ಹಾಕುತ್ತಿದ್ದಾರೆ. ಪ್ರಬಲ ಪ್ರಾಧಿಕಾರವಾದರೂ ನೀವು ಏನನ್ನೂ ಮಾಡಿಲ್ಲ. ಸರ್ಕಾರ ನಮ್ಮನ್ನು (ಪಾಲಿಕೆ) ವಿಸರ್ಜಿಸಬಾರದು ಎಂದು ನೀವು ಹೇಳುತ್ತಿದ್ದೀರಿ. ಇದು ಯಾವ ರೀತಿಯ ನಿಲುವು” ಎಂದು ಖಾರವಾಗಿ ಪ್ರಶ್ನಿಸಿತು.
ಮೋರ್ಬಿ ಪಾಲಿಕೆಗೆ ತಿಳಿಸದೇ ಗುತ್ತಿಗೆದಾರರು ತೂಗುಸೇತುವೆಯಲ್ಲಿ ಜನರು ಓಡಾಲು ಸಾರ್ವಜನಿಕರಿಗೆ ಅವಕಾಶ ಮಾಡಿಕೊಟ್ಟಿದ್ದಾರೆ ಎಂದು ಪಾಲಿಕೆ ಪ್ರತಿನಿಧಿಸಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ದೇವಾಂಗ್ ವ್ಯಾಸ್ ತಿಳಿಸಿದರು.
ಇದಕ್ಕೆ ಪೀಠವು “ಹಾಗಾದರೆ ನೀವು ಏನು ಮಾಡುತ್ತಿದ್ದಿರಿ? ನೀವು ಸರ್ಕಾರದ ಸಾಧನವಾಗಿದ್ದು, ಏನನ್ನೂ ಮಾಡದೆ ಮೌನಕ್ಕೆ ಶರಣಾಗಿದ್ದಿರಿ. ನೀವು ಮುಂದೆ ಏನು ಹೇಳಲಿದ್ದೀರಿ ಎಂಬುದನ್ನು ಆಧರಿಸಿ ಊಹಾತ್ಮಕ ನಿರ್ಣಯ ಮಾಡಬಹುದು. ಆದರೆ, ನಿಮ್ಮಿಬ್ಬರ ನಡುವೆ ಹೊಂದಾಣಿಕೆ ಇರುವಂತೆ ಕಾಣುತ್ತಿದೆ” ಎಂದಿತು.
ಈ ಮಧ್ಯೆ, ಅಡ್ವೊಕೇಟ್ ಜನರಲ್ ಕಮಲ್ ತ್ರಿವೇದಿ ಅವರು ರಾಜ್ಯದಲ್ಲಿ 63 ಸೇತುವೆಗಳನ್ನು ರಿಪೇರಿ ಮಾಡಬೇಕಿದೆ. ಈ ಪೈಕಿ 23 ಪ್ರಮುಖ ಸೇತುವೆಗಳಾಗಿದ್ದು, ಉಳಿದ 40 ಸೇತುವೆಗಳಲ್ಲಿ ಸಣ್ಣಪುಟ್ಟ ದೋಷ ಸರಿಪಡಿಸಬೇಕಿದೆ ಎಂಬ ಅಂಶವನ್ನು ಒಳಗೊಂಡ ಅಫಿಡವಿಟ್ ಅನ್ನು ನ್ಯಾಯಾಲಯಕ್ಕೆ ಸಲ್ಲಿಸಿದರು.
ಪ್ರಕರಣದ ಮುಂದಿನ ವಿಚಾರಣೆ ಫೆಬ್ರವರಿ 20ರಂದು ನಡೆಯಲಿದೆ.