Karnataka High Court and Covid 
ಸುದ್ದಿಗಳು

ಕೋವಿಡ್‌ ಸಂಖ್ಯೆ ಹೆಚ್ಚಳ: ಬೆಂಗಳೂರು ಸೇರಿದಂತೆ 9 ಜಿಲ್ಲೆಗಳಲ್ಲಿ ನ್ಯಾಯಾಲಯ ಪ್ರವೇಶ ನಿರ್ಬಂಧಿಸಿದ ಹೈಕೋರ್ಟ್‌

ಬೆಂಗಳೂರು, ಕಲಬುರ್ಗಿ ಮತ್ತು ಧಾರವಾಡ ಪೀಠಕ್ಕೆ ದಾವೆದಾರರ ಖುದ್ದು ಹಾಜರಾತಿ ನಿಷೇಧಿಸಲಾಗಿದೆ. ಇಂದಿನಿಂದ ಸಾಕ್ಷ್ಯ ದಾಖಲೀಕರಣ ಮತ್ತು ಬೆಂಗಳೂರು ನಗರ ಸೇರಿದಂತೆ 9 ಜಿಲ್ಲೆಗಳಲ್ಲಿ ದಾವೆದಾರರು ನ್ಯಾಯಾಲಯಕ್ಕೆ ಬರುವುದಕ್ಕೆ ನಿಷೇಧ ಹೇರಲಾಗಿದೆ.

Siddesh M S

ರಾಜ್ಯದಲ್ಲಿ ಕೋವಿಡ್‌ ಎರಡನೇ ಅಲೆ ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕ ಹೈಕೋರ್ಟ್‌ ಒಂಭತ್ತು ಜಿಲ್ಲೆಗಳಲ್ಲಿ ತುರ್ತು ಕ್ರಮಕ್ಕೆ ಮುಂದಾಗಿದ್ದು, ಪಕ್ಷಕಾರರ ಖುದ್ದು ಹಾಜರಾತಿಗೆ ಇಂದಿನಿಂದ ಅನಿರ್ದಿಷ್ಟಾವಧಿಗೆ ನಿಷೇಧ ವಿಧಿಸಿದೆ. ಹೈಕೋರ್ಟ್‌ನ ಬೆಂಗಳೂರಿನ ಪ್ರಧಾನ ಪೀಠ ಮತ್ತು ಕಲಬುರ್ಗಿ ಹಾಗೂ ಧಾರವಾಡದ ಪೀಠಗಳಿಗೆ ದಾವೆದಾರರು ಮತ್ತು ಪಕ್ಷಕಾರರ ಭೇಟಿಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

ಸಿವಿಲ್‌ ಮತ್ತು ಕ್ರಿಮಿನಲ್‌ ಮೊಕದ್ದಮೆಗಳಲ್ಲಿನ ಸಾಕ್ಷ್ಯ ದಾಖಲೀಕರಣವನ್ನು ನಿರ್ಬಂಧಿಸಲಾಗಿದೆ. ಬೆಂಗಳೂರು ನಗರ ಮತ್ತು ಗ್ರಾಮೀಣ, ಮೈಸೂರು, ಹಾಸನ, ತುಮಕೂರು, ಬಳ್ಳಾರಿ, ಕಲಬುರ್ಗಿ, ಬೀದರ್‌ ಮತ್ತು ದಕ್ಷಿಣ ಕನ್ನಡ ಸೇರಿದಂತೆ ಒಂಭತ್ತು ಜಿಲ್ಲೆಗಳಲ್ಲಿ ದಾವೆದಾರರು ನ್ಯಾಯಾಲಯಕ್ಕೆ ಬರುವುದಕ್ಕೆ ಶುಕ್ರವಾರದಿಂದ ನಿಷೇಧ ಹೇರಲಾಗಿದೆ.

ನ್ಯಾಯಾಲಯದಿಂದ ವಿಶೇಷ ಆದೇಶಗಳು ಇದ್ದರೆ ಮಾತ್ರ ದಾವೆದಾರರು ನ್ಯಾಯಾಲಯಕ್ಕೆ ಆಗಮಿಸಬಹುದಾಗಿದೆ. ಇಲ್ಲವಾದಲ್ಲಿ ಪಕ್ಷಕಾರರು ವಿಡಿಯೋ ಕಾನ್ಫರೆನ್ಸ್‌ ಮೂಲಕ ಮಾತ್ರ ಕಲಾಪದಲ್ಲಿ ಭಾಗವಹಿಸಬೇಕಿದೆ ಎಂದು ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಅಭಯ್‌ ಶ್ರೀನಿವಾಸ್‌ ಓಕಾ ಆದೇಶಿಸಿದ್ದಾರೆ.

ಹೈಕೋರ್ಟ್‌ ಆದೇಶದ ಪ್ರಮುಖ ಅಂಶಗಳು ಇಂತಿವೆ:

  • ಸುಪ್ರೀಂ ಕೋರ್ಟ್‌ ಅಥವಾ ಹೈಕೋರ್ಟ್‌ ಕಾಲಮಿತಿ ನಿಗದಿಗೊಳಿಸಿದ ಪ್ರಕರಣಗಳನ್ನು ಹೊರತುಪಡಿಸಿ ಉಳಿದೆಲ್ಲಾ ಸಿವಿಲ್‌ ಮತ್ತು ಕ್ರಿಮಿನಲ್‌ ಪ್ರಕರಣಗಳಿಗೆ ಸಂಬಂಧಿಸಿದಂತೆ ಸಾಕ್ಷ್ಯ ದಾಖಲೆಗೆ ನಿಷೇಧ ವಿಧಿಸಲಾಗಿದೆ. ಕಾಲಮಿತಿ ನಿಗದಿಗೊಳಿಸಿದ ಪ್ರಕರಣಗಳು ಮತ್ತು ಕ್ರಿಮಿನಲ್‌ ಪ್ರಕರಣಗಳಲ್ಲಿ ಬಹುತೇಕ ಸಾಕ್ಷ್ಯ ದಾಖಲೆ ಪೂರ್ಣಗೊಂಡಿದ್ದರೆ ಅವುಗಳನ್ನು ಮಾತ್ರ ಮುಂದುವರೆಸಬಹುದಾಗಿದೆ.

  • ಪೊಲೀಸ್‌ ಅಧಿಕಾರಿಗಳು ಮತ್ತು ಕಸ್ಟಡಿಯಲ್ಲಿರುವ ಆರೋಪಿಗಳನ್ನು ಹೊರತುಪಡಿಸಿ ಉಳಿದ ಯಾರೂ ನ್ಯಾಯಾಲಯದ ಆವರಣ ಪ್ರವೇಶಿಸುವಂತಿಲ್ಲ. ಪಕ್ಷಕಾರರು ಮತ್ತು ದೂರುದಾರರು ನ್ಯಾಯಾಲಯದ ಕೊಠಡಿಗೆ ಬರಬೇಕಿದ್ದರೆ ಆ ಸಂಬಂಧ ನಿಗದಿತ ನ್ಯಾಯಾಲಯಗಳು ವಿಶೇಷ ಆದೇಶ ಹೊರಡಿಸಬೇಕು.

  • ವಕೀಲರು ಮತ್ತು ಜಾಮೀನಿನ ಮೇಲೆ ಹೊರಗಿರುವ ಆರೋಪಿಗಳ ಅನುಪಸ್ಥಿತಿಯಲ್ಲಿ ಯಾವುದೇ ತೆರನಾದ ವೈರುಧ್ಯದ ಆದೇಶಗಳನ್ನು ಹೊರಡಿಸದಂತೆ ನ್ಯಾಯಾಲಯಗಳಿಗೆ ಮನವಿ ಮಾಡಲಾಗಿದೆ.

  • ಇತರೆ ಜಿಲ್ಲಾ ಮತ್ತು ವಿಚಾರಣಾಧೀನ ನ್ಯಾಯಾಲಯಗಳಿರುವ ಕಡೆ ಕೋವಿಡ್‌ ಪ್ರಕರಣಗಳು ಒಂದು ಸಾವಿರಕ್ಕಿಂತ ಹೆಚ್ಚಿದ್ದರೆ ಬೆಂಗಳೂರು ನಗರದ ಜಿಲ್ಲಾ ಮತ್ತು ವಿಚಾರಣಾಧೀನ ನ್ಯಾಯಾಲಯಗಳಲ್ಲಿ ಅನುಸರಿಸಲಾಗಿರುವ ನಿರ್ಬಂಧಗಳನ್ನು ಅನುಸರಿಸಬೇಕು ಎಂದು ಸೂಚಿಸಿಲಾಗಿದೆ.

ನೋಟಿಸ್‌ಗಳನ್ನು ಓದಲು ಇಲ್ಲಿ ಕ್ಲಿಕ್ಕಿಸಿ

notice_hck_15042021.pdf
Preview
notice_dc_15042021.pdf
Preview