ಬಾಂಬೆ ಹೈಕೋರ್ಟ್
ಬಾಂಬೆ ಹೈಕೋರ್ಟ್ 
ಸುದ್ದಿಗಳು

ಚುಡಾಯಿಸುವಿಕೆ ನಿಗ್ರಹಿಸಬೇಕು, ಇದು ಬೇರೆ ಗಂಭೀರ ಅಪರಾಧಗಳಿಗೆ ಕಾರಣವಾಗಬಹುದು: ಬಾಂಬೆ ಹೈಕೋರ್ಟ್

Bar & Bench

ಉಳಿದ ಗಂಭೀರ ಅಪರಾಧಗಳಿಗೆ ಕಾರಣವಾಗುವುದರಿಂದ, ಹೆಚ್ಚುತ್ತಿರುವ ಚುಡಾಯಿಸುವಿಕೆ ಪ್ರಕರಣಗಳನ್ನು ನಿಗ್ರಹಿಸುವ ಅಗತ್ಯವಿದೆ ಎಂದು ಬಾಂಬೆ ಹೈಕೋರ್ಟ್‌ ಈಚೆಗೆ ಅಭಿಪ್ರಾಯಪಟ್ಟಿದೆ [ಏಕನಾಥ್‌ ಶಿಂಧೆ ಮತ್ತು ಮಹರಾಷ್ಟ್ರ ಸರ್ಕಾರ ನಡುವಣ ಪ್ರಕರಣ].

ನೆರೆಮನೆಯ ಹುಡುಗಿಯನ್ನು ಚುಡಾಯಿಸಿದ್ದನ್ನು ಪ್ರಶ್ನಿಸಿದ್ದ ವ್ಯಕ್ತಿಯೊಬ್ಬನನ್ನು ಅಪರಾಧಿಗಳಲ್ಲಿ ಒಬ್ಬ ಕೊಂದಿದ್ದ. ಈ ಹಿನ್ನೆಲೆಯಲ್ಲಿ ವಿಧಿಸಲಾಗಿದ್ದ ಶಿಕ್ಷೆ ಪ್ರಶ್ನಿಸಿ ಮೂವರು ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು.

ಕೊಲೆಯಂತಹ ಗಂಭೀರ ಅಪರಾಧಗಳಿಗೆ ಚುಡಾಯಿಸುವಿಕೆ ಕಾರಣವಾಗಬಹುದು. ಪ್ರಸ್ತುತ ಪ್ರಕರಣದಲ್ಲಿ ಚುಡಾಯಿಸುವಿಕೆ ತಡೆಯಲು ಹೋಗಿದ್ದ ಯುವಕನನ್ನು ಮೇಲ್ಮನವಿದಾರರು ಕೊಂದಿದ್ದಾರೆ ಎಂದು ನ್ಯಾಯಮೂರ್ತಿಗಳಾದ ಅಜಯ್ ಗಡ್ಕರಿ ಮತ್ತು ಶ್ಯಾಮ್ ಚಂದಕ್ ಅವರಿದ್ದ ವಿಭಾಗೀಯ ಪೀಠ ತಿಳಿಸಿತು.

"ಯುವತಿಯರನ್ನು ಚುಡಾಯಿಸುವ ಇಂತಹ ಪ್ರಕರಣಗಳು ಸಾಮಾನ್ಯವಾಗುತ್ತಿದ್ದು ಕೆಲವೊಮ್ಮೆ ಮತ್ತೊಂದು ಅಪರಾಧಕ್ಕೆ ಕಾರಣವಾಗುವ ಇವುಗಳನ್ನು ನಿಯಂತ್ರಣದಲ್ಲಿಡುವ ಅವಶ್ಯಕತೆಯಿದೆ. ಆದ್ದರಿಂದ, ಐಪಿಸಿ ಸೆಕ್ಷನ್ 304 (ಭಾಗ 2) ರ ಅಪರಾಧಕ್ಕಾಗಿ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು" ಎಂದು ನ್ಯಾಯಾಲಯ ಮಾರ್ಚ್ 8ರಂದು ಪ್ರಕಟಿಸಿದ ಆದೇಶದಲ್ಲಿ ತಿಳಿಸಿದೆ.

ಪ್ರಕರಣದ ಮೂವರು ಆರೋಪಿಗಳನ್ನು ವಿಚಾರಣಾ ನ್ಯಾಯಾಲಯ ಕೊಲೆ ಅಪರಾಧಿ ಎಂದು ಘೋಷಿಸಿ, ಅವರ ಅಪರಾಧಕ್ಕಾಗಿ ಜೀವಾವಧಿ ಶಿಕ್ಷೆ ವಿಧಿಸಿತ್ತು. ತೀರ್ಪನ್ನು ಮೂವರೂ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.

ಮೃತರನ್ನು ಕೊಂದದ್ದು ಪೂರ್ವಯೋಜಿತ ಕೃತ್ಯವಲ್ಲ ಎಂದಿರುವ ಹೈಕೋರ್ಟ್‌ ಹಠಾತ್‌ ಜಗಳದಿಂದಾಗಿ ಮೃತರು ಗಾಯಗೊಂಡಿದ್ದು, ಒಂದು ವಾರದ ಬಳಿಕ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದರು. ಅಪರಾಧಿಗಳು ಕ್ರೂರ ಅಥವಾ ಅಸಾಮಾನ್ಯ ರೀತಿಯಲ್ಲಿ ವರ್ತಿಸಿರಲಿಲ್ಲ ಎಂಬುದಾಗಿ ಅಭಿಪ್ರಾಯಪಟ್ಟಿತು.

ಈ ಹಿನ್ನೆಲೆಯಲ್ಲಿ ಕೊಲೆ ಅಪರಾಧಕ್ಕಾಗಿ ಮೇಲ್ಮನವಿದಾರರರಿಗೆ ಐಪಿಸಿ ಸೆಕ್ಷನ್ 302ರ (ಕೊಲೆ) ಅಡಿ ಶಿಕ್ಷೆ ವಿಧಿಸುವ ಬದಲು ಕೊಲೆಗೆ ಸಮವಲ್ಲದ ನರಹತ್ಯೆ ಎಂದು ಪರಿಗಣಿಸಿ ಸೆಕ್ಷನ್ 304ರ ಭಾಗ 2ರ ಅಡಿ ಜೀವಾವಧಿ ಶಿಕ್ಷೆ ಬದಲು ಹತ್ತು ವರ್ಷಗಳ ಕಠಿಣ ಸೆರೆವಾಸ ಮತ್ತು ತಲಾ ರೂ 25,000 ದಂಡ ವಿಧಿಸಿತು.

[ತೀರ್ಪಿನ ಪ್ರತಿಗಾಗಿ ಇಲ್ಲಿ ಕ್ಲಿಕ್ಕಿಸಿ]

Eknath Laxman Shinde vs State of Maharashtra.pdf
Preview