ಸುಪ್ರೀಂಕೋರ್ಟ್ 
ಸುದ್ದಿಗಳು

'ತಡೆಯಾಜ್ಞೆ ಬಳಿಕವೂ ಸುದರ್ಶನ್ ಟಿವಿ ದ್ವೇಷಭಾಷಣ ಪ್ರಸಾರ, ‘ಸುಪ್ರೀಂ’ ವಿರುದ್ಧ ಆಕ್ಷೇಪಾರ್ಹ ಹೇಳಿಕೆ'

ಮಧು ಪೂರ್ಣಿಮಾ ಕೀಶ್ವರ್ ಮತ್ತು ಶಂತನು ಗುಪ್ತ ದ್ವೇಷದ ಮಾತುಗಳನ್ನಾಡಿರುವುದು ಮತ್ತು ಸುಪ್ರೀಂ ಕೋರ್ಟ್ ವಿರುದ್ಧ ಟೀಕೆ ಮಾಡಿರುವ ಕುರಿತಂತೆ ಪ್ರಕರಣದ ಅರ್ಜಿದಾರರಾಗಿರುವ ವಕೀಲ ಫಿರೋಜ್ ಇಕ್ಬಾಲ್ ಖಾನ್ ಪ್ರಸ್ತಾಪಿಸಿದ್ದಾರೆ.

Bar & Bench

ಯುಪಿಎಸ್‌ಸಿ ಜಿಹಾದ್ ಕಾರ್ಯಕ್ರಮಕ್ಕೆ ತಡೆಯಾಜ್ಞೆ ನೀಡಿದ ಬಳಿಕವೂ ಕಳೆದ ವಾರ ಕಾರ್ಯಕ್ರಮ ಪ್ರಸಾರ ಮಾಡಿದ ವೇಳೆ ಸುದರ್ಶನ್ ಟಿವಿ ದ್ವೇಷಭಾಷಣ ಮತ್ತು ಸುಪ್ರೀಂ ಕೋರ್ಟ್ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದೆ ಎಂದು ಪ್ರಕರಣದಲ್ಲಿ ಅರ್ಜಿದಾರರಾಗಿರುವ ವಕೀಲ ಫಿರೋಜ್ ಇಕ್ಬಾಲ್ ಖಾನ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಪ್ರಕರಣ ಮತ್ತು ನ್ಯಾಯಾಲಯ ಎತ್ತಿರುವ ಪ್ರಮುಖ ಪ್ರಶ್ನೆಗಳಿಗೆ ಉತ್ತರ ನೀಡುವ ಬದಲು ವಾಹಿನಿ ಈ ರೀತಿಯ ನಿರ್ಧಾರ ಕೈಗೊಂಡಿದೆ ಎಂದು ಅವರು ತಿಳಿಸಿದ್ದಾರೆ.

ಕಾರ್ಯಕ್ರಮ ಪ್ರಸಾರದ ವಿರುದ್ಧ ಅರ್ಜಿ ಸಲ್ಲಿಸಿದ್ದ ಫಿರೋಜ್ ಸುಪ್ರೀಂ ಕೋರ್ಟಿನಲ್ಲಿ ಪ್ರತ್ಯುತ್ತರ ಅರ್ಜಿ (ರಿಜಾಯಿಂಡರ್) ಸಲ್ಲಿಸಿದ್ದು ಸೋಮವಾರ ಮಧ್ಯಾಹ್ನ 2 ಗಂಟೆಗೆ ಅರ್ಜಿಯ ವಿಚಾರಣೆ ನಡೆಯಲಿದೆ.

ಪ್ರತ್ಯುತ್ತರ ಅರ್ಜಿಯಲ್ಲಿ ಏನಿದೆ?

  • ಕಾರ್ಯಕ್ರಮವನ್ನು ಜಕಾತ್ ಫೌಂಡೇಶನ್ ಆಫ್ ಇಂಡಿಯಾದ ವಿರುದ್ಧ ನಡೆಸಿದ ತನಿಖಾ ವರದಿಗಾರಿಕೆ ಎಂದು ತಪ್ಪಾಗಿ ನಿರೂಪಿಸಲಾಗಿದೆ.

  • ಮುಸ್ಲಿಮರು ನಾಗರಿಕ ಸೇವೆ ಹುದ್ದೆಗಳನ್ನು ಕಬಳಿಸುತ್ತಿದ್ದಾರೆ ಎಂದು ತಪ್ಪಾಗಿ ಬಿಂಬಿಸಲಾಗಿದೆ. ಕಾರ್ಯಕ್ರಮದ ಮುಖ್ಯಭಾಗ ಪ್ರಸಾರವಾಗುವಾಗ ಜ್ವಾಲೆ, ಸ್ಫೋಟ, ಗಡ್ಡಧಾರಿ ಮನುಷ್ಯನನ್ನು ತೋರಿಸಲಾಗಿದ್ದು ಇದನ್ನು ಮುಸ್ಲಿಮರು ಎಂದು ನಿರೂಪಿಸುವ ಸಲುವಾಗಿ ಮಾಡಲಾಗಿದೆ.

  • ವಾಹಿನಿಯ ಸಂಸ್ಥಾಪಕ ಸುದರ್ಶನ್ ಚವ್ಹಾಣ್ಕೆ ಅವರ ಕಾರ್ಯಕ್ರಮ ದ್ವೇಷದ ಮಾತು ಮತ್ತು ಮುಸ್ಲಿಂ ಸಮುದಾಯದ ವಿರುದ್ಧ ವೀಕ್ಷಕರನ್ನು ಪ್ರಚೋದಿಸುವ ಸಂದೇಶಗಳಿಂದ ತುಂಬಿತ್ತು.

  • ಚವ್ಹಾಣ್ಕೆ ಅವರು "ಏಕ್ ಹಪ್ತೆ ಮೇ ದೋ ಬಾರ್ ಸ್ಟೇ ಲಗ್ನೆ ಕಾ ಆಜ್ ಸುದರ್ಶನ್ ಕೆ ಸಾಥ್ ಯೆ ಗುನಾಹ್ ಹುವಾ ಹೈ / ಎರಡು ದಿನಗಳಲ್ಲಿ ಎರಡು ಬಾರಿ ತಡೆಯಾಜ್ಞೆ ನೀಡಿರುವುದು ಸುದರ್ಶನ್ ಚಾನೆಲ್ ವಿರುದ್ಧ ಮಾಡಿದ ಪಾಪ” ಎಂದಿದ್ದಾರೆ.

  • "ಯುಪಿಎಸ್‌ಸಿ ಜಿಹಾದ್" ಕಂತುಗಳನ್ನು ಪ್ರಸಾರ ಮಾಡದಂತೆ ಸುಪ್ರೀಂಕೋರ್ಟ್ ತಡೆಯಾಜ್ಞೆ ನೀಡಿದ ನಂತರವೂ ಸೆಪ್ಟೆಂಬರ್ 15 ರಂದು ಸುದರ್ಶನ್ ನ್ಯೂಸ್ ವಾಹಿನಿಯ ಕಾರ್ಯಕ್ರಮದಲ್ಲಿ ಮಧು ಪೂರ್ಣಿಮಾ ಕೀಶ್ವರ್ ಮತ್ತು ಶಂತನು ಗುಪ್ತಾ ಅವರು ನೀಡಿದ ಆಕ್ಷೇಪಾರ್ಹ ಪ್ರತಿಕ್ರಿಯೆಗಳ ಕುರಿತಂತೆ ಅರ್ಜಿಯಲ್ಲಿ ಉಲ್ಲೇಖವಿದೆ.

  • ವಾರ್ತಾ ಮತ್ತು ಪ್ರಸಾರ ಸಚಿವಾಲಯ ಹಾಗೂ ಪ್ರಸಾರ ಭಾರತಿಗೆ ನೀಡಿದ ಭರವಸೆಯಂತೆ ವಾಹಿನಿ ನಡೆದುಕೊಂಡಿಲ್ಲ.

  • ಎಲ್ಲಾ ಮುಸ್ಲಿಮರಿಗೆ ಮೀಸಲಾತಿ ಒದಗಿಸಲಾಗಿದೆ ಎಂದು ತಪ್ಪಾಗಿ ಅರ್ಥೈಸಲಾಗಿದೆ. ಮುಸ್ಲಿಮರಲ್ಲಿಯೂ ಮೇಲ್ವರ್ಗ ಕೆಳವರ್ಗಗಳಿದ್ದು ಅದಕ್ಕೆ ತಕ್ಕಂತೆ ಮೀಸಲಾತಿ ದೊರೆತಿದೆ.

"ನ್ಯಾಯಾಲಯ ತನಗೆ ತಾನೇ ಪ್ರಶ್ನಾರ್ಥಕ ಚಿಹ್ನೆ ಹಾಕಿಕೊಂಡಿದೆ. ಅವರು ಗಜ್ವಾ-ಇ-ಹಿಂದ್ ಉದ್ದೇಶವನ್ನು ಪೂರ್ಣಗೊಳಿಸುವುದು ತಮ್ಮ ಹಕ್ಕು ಎಂದು ಅವರು ಭಾವಿಸುತ್ತಾರೆ. ಇಡೀ ರಾಷ್ಟ್ರವನ್ನು ಮತಾಂತರಗೊಳಿಸಬೇಕೆಂದು ಅವರು ಅರ್ಥಮಾಡಿಕೊಂಡಿದ್ದಾರೆ. ಅವರು ಸಾರ್ವಜನಿಕ ಕಚೇರಿಗಳಲ್ಲಿ ಒಳನುಸುಳಿ ಅದನ್ನು ಆಕ್ರಮಿಸಿಕೊಳ್ಳಲು ಅವರು ಬಯಸುತ್ತಿದ್ದಾರೆ. ಆರಂಭದ ದಿನದಿಂದಲೂ ಅವರು ಶಿಕ್ಷಣ ಇಲಾಖೆಯಲ್ಲಿ ಒಳನುಸುಳಿದ್ದಾರೆ. "
ಕಾರ್ಯಕ್ರಮದಲ್ಲಿ ಅತಿಥಿಯಾಗಿ ಪಾಲ್ಗೊಂಡಿದ್ದ ಮಧು ಪೂರ್ಣಿಮಾ ಕೀಶ್ವರ್
"ಸುಪ್ರೀಂ ಕೋರ್ಟ್ ಮಿತಿಮೀರಿದ ಪ್ರವೃತ್ತಿ ತೋರಿರುವುದನ್ನು ನಾನು ಅನೇಕ ಬಾರಿ ನೋಡಿದ್ದೇನೆ. ನೀವು ರಾಜಕೀಯವನ್ನು ಅನುಭವಿಸಲು ಬಯಸಿದರೆ ನಿಮ್ಮ ಉದ್ಯೋಗಗಳನ್ನು ಬಿಡಿ, ಚುನಾವಣೆಗಳಲ್ಲಿ ಸ್ಪರ್ಧಿಸಿ. ನಿಮ್ಮ ನಿರ್ಣಯಗಳನ್ನು ಮೀರಿ. ಯುಪಿಎಸ್‌ಸಿ ಜಿಹಾದ್: ಯುಪಿಎಸ್‌ಸಿಯ ಒಳನುಗ್ಗಲು ನಡೆದ ಹಗರಣವಾಗಿದೆ. ಯುಪಿಎಸ್‌ಸಿ ಸೃಷ್ಟಿಸಿದ ಕೋರ್ಸುಗಳು ಉರ್ದುವಿನಲ್ಲಿವೆ ಮತ್ತು ಅದರ ಮೌಲ್ಯಮಾಪಕರು ಅದೇ ಭಾಷೆಗೆ ಸೇರಿದವರಾಗಿದ್ದಾರೆ "
ಕಾರ್ಯಕ್ರಮದಲ್ಲಿ ಅತಿಥಿಯಾಗಿ ಪಾಲ್ಗೊಂಡಿದ್ದ ಶಂತನು ಗುಪ್ತಾ

ಜಡ್ಎಫ್ಐ ಈಗಾಗಲೇ ಮಧ್ಯಪ್ರವೇಶ ಅರ್ಜಿ ಸಲ್ಲಿಸಿದ್ದು ವಾಹಿನಿ ತನಗೆ ಬೇಕಾದ ಸಂಗತಿಗಳನ್ನಷ್ಟೇ ಆಯ್ದುಕೊಂಡಿದೆ ಎಂಬುದಾಗಿ ಆರೋಪಿಸಿದೆ.