Sexual Assault
Sexual Assault 
ಸುದ್ದಿಗಳು

ಯುವತಿ ಸ್ವಇಚ್ಛೆಯಿಂದ ಯುವಕನ ಜೊತೆ ಮನೆ ತೊರೆದ ಮಾತ್ರಕ್ಕೆ ಆತ ಅತ್ಯಾಚಾರ ಎಸಗಲಾಗದು: ಕಲ್ಕತ್ತಾ ಹೈಕೋರ್ಟ್

Bar & Bench

ಮಹಿಳೆ ಅಥವಾ ಯುವತಿ ತನ್ನ ಸ್ವಇಚ್ಛೆಯಿಂದ ಮನೆ ತೊರೆದು ಯುವಕನೊಟ್ಟಿಗೆ ತೆರಳಿದರೂ ಅದು ಆತನಿಗೆ ಆಕೆಯ ಮೇಲೆ ಅತ್ಯಾಚಾರ ಎಸಗುವ ಹಕ್ಕು ನೀಡುವುದಿಲ್ಲ ಎಂದು ಕಲ್ಕತ್ತಾ ಹೈಕೋರ್ಟ್‌ನ ಜಲ್ಪಾಯಿಗುರಿ ಪೀಠ ಈಚೆಗೆ ಹೇಳಿದೆ [ಹೇಮಂತ ಬರ್ಮನ್ ವಿರುದ್ಧ ಪಶ್ಚಿಮ ಬಂಗಾಳ ಸರ್ಕಾರ ನಡುವಣ ಪ್ರಕರಣ].

ಪ್ರಕರಣವು 2007 ರಲ್ಲಿ ನಡೆದ ಬಾಲಕಿಯ ಅಪಹರಣ ಮತ್ತು ಅತ್ಯಾಚಾರಕ್ಕೆ ಸಂಬಂಧಿಸಿದ್ದಾಗಿದ್ದು ಕೃತ್ಯ ನಡೆಸಿದ ಆರೋಪ ಹೊತ್ತಿದ್ದ ವ್ಯಕ್ತಿಯ ಅತ್ಯಾಚಾರದ ಶಿಕ್ಷೆಯನ್ನು ಎತ್ತಿಹಿಡಿಯುವ ಸಂದರ್ಭದಲ್ಲಿ ನ್ಯಾಯಮೂರ್ತಿ ಸಿದ್ಧಾರ್ಥ ರಾಯ್ ಚೌಧರಿ ಅವರು ಈ ಸಂಗತಿಯನ್ನು ವಿವರಿಸಿದರು.

ಸಂತ್ರಸ್ತ ಬಾಲಕಿಯನ್ನು ತಾನು ಅಪಹರಿಸಿಲ್ಲ ಬದಲಿಗೆ ಆಕೆಯೇ ತನ್ನೊಂದಿಗೆ ಬರುವುದಕ್ಕಾಗಿ ತನ್ನ ಹೆತ್ತವರ ಮನೆ ತೊರೆದಿದ್ದಳು ಎಂದು ಆರೋಪಿ ವಾದಿಸಿದ್ದ ಆದರೆ ನ್ಯಾಯಾಲಯ ಈ ವಾದವನ್ನು ಒಪ್ಪಲಿಲ್ಲ. ಈ ಘಟನೆಗಳು ನಿಜವಿದ್ದರೂ ಕೂಡ ಸಂತ್ರಸ್ತೆಯ ಮೇಲೆ ಅತ್ಯಾಚಾರ ಮಾಡುವ ಹಕ್ಕು ಆರೋಪಿಗೆ ಇದೆ ಎಂದರ್ಥವಲ್ಲ ಎಂಬುದಾಗಿ ನ್ಯಾಯಾಲಯ ತಿಳಿಸಿದೆ.

"ದೂರುದಾರರ (ಸಂತ್ರಸ್ತೆಯ ತಂದೆ) ಮೊದಲ ಹೇಳಿಕೆ ಗಮನಿಸಿದರೆ ಮತ್ತು ಸಂತ್ರಸ್ತೆಯನ್ನು ಅಪಹರಿಸಿರಲಿಲ್ಲ ಆಕೆಯೇ ಆರೋಪಿಯೊಂದಿಗೆ ಮನೆ ತೊರೆದು ಹೋದಳು ಎಂದು ಊಹಿಸಿಕೊಂಡರೂ ಕೂಡ ಅದು ಆರೋಪಿತ ವ್ಯಕ್ತಿಯು ಸಂತ್ರಸ್ತೆಯ ಖಾಸಗಿತನದ ಮೇಲೆ ದಾಳಿ ನಡೆಸಲಿಕ್ಕಾಗಲಿ ಅಥವಾ ಅತ್ಯಾಚಾರದ ವ್ಯಾಪ್ತಿಗೆ ಒಳಪಡುವ ಯಾವುದೇ ಲೈಂಗಿಕ ಅಪರಾಧ ಎಸಗಲಾಗಲಿ ನೀಡುವ ಅನುಮತಿಯಾಗುವುದಿಲ್ಲ” ಎಂದು ನ್ಯಾಯಾಲಯ ನುಡಿದಿದೆ.

ಆರೋಪಿಯ ವಾದವನ್ನು ಸಂತ್ರಸ್ತೆ ಅಲ್ಲಗಳೆದದ್ದನ್ನೂ ನ್ಯಾಯಾಲಯ ಗಮನಿಸಿತು. ಆಕೆಯ ಹೇಳಿಕೆಯನ್ನು ಅವಲಂಬಿಸಿದ ನ್ಯಾಯಾಲಯ ಅಪಹರಣ ಆರೋಪದಿಂದ ಆರೋಪಿಯನ್ನು ಖುಲಾಸೆಗೊಳಿಸಿದರೂ ಅತ್ಯಾಚಾರಕ್ಕೆ ಕೆಳ ನ್ಯಾಯಾಲಯ ವಿಧಿಸಿದ್ದ ಶಿಕ್ಷೆಯನ್ನು ಎತ್ತಿಹಿಡಿಯಿತು.