ಸುದ್ದಿಗಳು

ಎನ್‌ಆರ್‌ಐ ಕೂಡ ದೇಶದ ಪ್ರಧಾನಿಯಾಗಬಹುದು: ಪ್ರಜಾ ಪ್ರತಿನಿಧಿ ಕಾಯಿದೆ ಪ್ರಶ್ನಿಸಿ ಅಲಾಹಾಬಾದ್ ಹೈಕೋರ್ಟ್‌ನಲ್ಲಿ ಅರ್ಜಿ

Bar & Bench

ಪ್ರಜಾಪ್ರತಿನಿಧಿ ಕಾಯಿದೆ- 1950 ರ ಮೂರು ನಿಬಂಧನೆಗಳ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಮತ್ತು ಚುನಾವಣಾ ಆಯೋಗದ ಪ್ರತಿಕ್ರಿಯೆ ಕೇಳಿ ಅಲಾಹಾಬಾದ್‌ ಹೈಕೋರ್ಟ್‌ ಸೋಮವಾರ ನೋಟಿಸ್‌ ನೀಡಿದೆ.

ನ್ಯಾಯಮೂರ್ತಿಗಳಾದ ದೇವೇಂದ್ರ ಕುಮಾರ್ ಉಪಾಧ್ಯಾಯ ಮತ್ತು ಅಜಯ್ ಕುಮಾರ್ ಶ್ರೀವಾಸ್ತವ ಅವರಿದ್ದ ವಿಭಾಗೀಯ ಪೀಠ ಅರ್ಜಿಯ ವಿಚಾರಣೆ ನಡೆಸಿತು. ಲೋಕ್‌ ಪ್ರಹರಿ ಎಂಬ ಸರ್ಕಾರೇತರ ಸಂಸ್ಥೆ ಸಲ್ಲಿಸಿರುವ ಅರ್ಜಿಯಲ್ಲಿ ಕಾಯಿದೆಯ ನಿಬಂಧನೆಗಳು ಖಾಯಂ ಅನಿವಾಸಿ ಭಾರತೀಯ (ಎನ್‌ಆರ್‌ಐ) ಪ್ರಜೆಯೂ ಸಹ ಪ್ರಧಾನಿ ಅಥವಾ ಮುಖ್ಯಮಂತ್ರಿ ಆಗಲು ಪ್ರಸಕ್ತ ನಿಯಮಾವಳಿಗಳಲ್ಲಿ ಅನುವು ಮಾಡಿಕೊಡುವುದನ್ನು ಪ್ರಸ್ತಾಪಿಸಲಾಗಿದೆ.

ಪ್ರಜಾಪ್ರತಿನಿಧಿ ಕಾಯಿದೆ 1951ರ ಸೆಕ್ಷನ್ 2 (1) (ಇ) ಮತ್ತು ಸೆಕ್ಷನ್ 3 ರಿಂದ 6 ರವರೆಗಿನ 'ಮತದಾರ' ಎನ್ನುವುದರ ಅರ್ಥವ್ಯಾಖ್ಯಾನವನ್ನು ಓದಿದಾಗ ಹಾಗೂ ಜನಪ್ರತಿನಿಧಿ ಕಾಯಿದೆ 1950ರ ಸೆಕ್ಷನ್‌ 20-ಎ ಓದಿದಾಗ ಖಾಯಂ ಅನಿವಾಸಿ ಭಾರತೀಯ ಪ್ರಜೆ ಕೂಡ ಎಂಪಿ/ಎಂಎಲ್‌ಎ ಆಗಲು ಮತ್ತು ಪ್ರಧಾನಿ/ಮುಖ್ಯಮಂತ್ರಿ ಆಗಲು ಅರ್ಹವಾಗಿರುವುದು ತಿಳಿದುಬರುತ್ತದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಕಾಯಿದೆಯ ಸೆಕ್ಷನ್‌ 19, 16 (1) ಹಾಗೂ ಸೆಕ್ಷನ್ 20-ಎಗಳು ಅತಾರ್ಕಿಕ ನೆಲೆಯಲ್ಲಿ ತರತಮ ಉಂಟು ಮಾಡುತ್ತಿದ್ದು ಅನಿವಾಸ, ಅಪರಾಧ ಮತ್ತು ಅಕ್ರಮ ಕೃತ್ಯಗಳಲ್ಲಿ ತೊಡಗಿರುವವರು ಮತದಾರರಾಗಿ ನೋಂದಾಯಿಸಿಕೊಳ್ಳುವಂತಿಲ್ಲ ಎಂದು ಹೇಳುತ್ತವೆ ಎಂದು ಅರ್ಜಿಯಲ್ಲಿ ದೂರಲಾಗಿದೆ.

ಈ ಪ್ರಕರಣದಲ್ಲಿ ಸಂವಿಧಾನ ಪೀಠದ ನಿರ್ದೇಶನಗಳನ್ನು ಕಳೆದ 15 ವರ್ಷಗಳಲ್ಲಿ ಸರ್ಕಾರಿ ಅಧಿಕಾರಿಗಳು ಜಾರಿಗೊಳಿಸಿಲ್ಲ ಎಂದು ಕುಲದೀಪ್ ನಯ್ಯರ್ ಮತ್ತು ಕೇಂದ್ರ ಸರ್ಕಾರ ನಡುವಣ ಪ್ರಕರಣದಲ್ಲಿ ಸುಪ್ರೀಂಕೋರ್ಟ್‌ ನೀಡಿದ ತೀರ್ಪನ್ನು ಉಲ್ಲೇಖಿಸಿ ಅರ್ಜಿದಾರರು ವಿವರಿಸಿದ್ದಾರೆ . 'ರಾಜ್ಯದ ಪ್ರತಿನಿಧಿಗಳು ಆ ರಾಜ್ಯಕ್ಕೆ ಸೇರಿರಬೇಕು ಎಂಬುದು ಒಕ್ಕೂಟ ತತ್ವದ ಭಾಗವಲ್ಲ' ಎಂದು ಕುಲದೀಪ್‌ ನಯ್ಯರ್‌ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯ ಹೇಳಿತ್ತು.

'ಪ್ರತಿಯೊಂದು ರಾಜ್ಯದ ಪ್ರತಿನಿಧಿ' ಎಂಬ ಪದ ಕೇವಲ ಸದಸ್ಯರನ್ನು ಮಾತ್ರ ಉಲ್ಲೇಖಿಸುತ್ತದೆಯೇ ಹೊರತು ಅದರಾಚೆಗೆ ಆ ರಾಜ್ಯದಲ್ಲಿ ವಾಸಿಸುತ್ತಿರುವ ಬಗ್ಗೆ ಯಾವುದೇ ಪರಿಕಲ್ಪನೆ ಅಥವಾ ಅಗತ್ಯತೆಯನ್ನು ಕೇಳುವುದಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿತು.

ಪ್ರಕರಣದ ಸಂಬಂಧ ಪ್ರತಿವಾದಿಗಳಾದ ಕೇಂದ್ರ ಸರ್ಕಾರ ಮತ್ತು ಕೇಂದ್ರ ಚುನಾವಣಾ ಆಯೋಗಕ್ಕೆ ಅಫಿಡವಿಟ್‌ ಸಲ್ಲಿಸುವಂತೆ ಸೂಚಿಸಿತು. ಪ್ರಕರಣದ ಮುಂದಿನ ವಿಚಾರಣೆ ಅ. 18ರಂದು ನಡೆಯಲಿದೆ.