ಕೇರಳ ಹೈಕೋರ್ಟ್ ಇತ್ತೀಚೆಗೆ ಮನೆಗೆಲಸ ಮಾಡುತ್ತಿದ್ದ ಮಹಿಳೆಯೊಬ್ಬರ ಸಹಾಯಕ್ಕೆ ಧಾವಿಸಿದ್ದು ಆಕೆಗೆ ಸಂಪೂರ್ಣ ಬಡ್ಡಿಯೊಂದಿಗೆ ಠೇವಣಿ ಹಣ ಹಿಂದಿರುಗಿಸುವಂತೆ ಅಂಚೆ ಕಚೇರಿ ಅಧಿಕಾರಿಗಳಿಗೆ ತಾಕೀತು ಮಾಡಿದೆ. ಅಲ್ಲದೆ, ವಿನಾಕಾರಣ ಸತಾಯಿಸಿದ್ದ ಅಂಚೆ ಕಚೇರಿಗೆ ರೂ. 5 ಸಾವಿರ ದಂಡ ವಿಧಿಸಿದ್ದು ಅದನ್ನು ಬಡ ಅರ್ಜಿದಾರೆಗೆ ನೀಡುವಂತೆ ಹೇಳಿದೆ.
ಮನೆಗೆಲಸ ಮಾಡುತ್ತಿದ್ದ ಬಡ ಮಹಿಳೆಯೊಬ್ಬರು ಠೇವಣಿ ಇಟ್ಟಿದ್ದ ₹ 20,000 ಮೊತ್ತಕ್ಕೆ ಬಡ್ಡಿ ನೀಡದೆ ಅಂಚೆ ಕಚೇರಿಯೊಂದು ಸತಾಯಿಸಿತ್ತು. ಮನೆಗೆಲಸ ಮಾಡುವ ಬಡ ಮಹಿಳೆ ಕೂಡ ನ್ಯಾಯಾಲಯದ ಮೊರೆ ಹೋಗಬೇಕಾದ ಅನಿವಾರ್ಯತೆಯ ಬಗ್ಗೆ ನ್ಯಾ. ಪಿ ವಿ ಕುಂಞಿಕೃಷ್ಣನ್ ಬೇಸರ ವ್ಯಕ್ತಪಡಿಸಿದರು.
"ಬಡವರು ಹಣ ಉಳಿಸುವುದು ಬಿಎಂಡಬ್ಲ್ಯು ಕಾರ್ ಕೊಳ್ಳಲೋ ಅಥವಾ ವಿಲಾಸಿ ಜೀವನ ನಡೆಸಲೆಂದು ಮಹಲು ಕೊಳ್ಳಲೋ ಅಲ್ಲ. ಅವರು ಅದನ್ನು ಮಾಡುವುದು ತಮ್ಮ ಕನಸುಗಳನ್ನು ಈಡೇರಿಸಿಕೊಳ್ಳಲು. ಪ್ರತಿಯೊಬ್ಬ ಪುರುಷ, ಮಹಿಳೆಯೂ ಕೂಡ ತಮ್ಮ ಜೀವನದ ಬಗ್ಗೆ ಕನಸು ಕಂಡಿರುತ್ತಾರೆ... ತಾನು ಕಷ್ಟಪಟ್ಟು ದುಡಿದ ಹಣವನ್ನು ಅಂಚೆ ಕಚೇರಿಯಲ್ಲಿ ಠೇವಣಿಯಿರಿಸಿದ ಮನೆಗೆಲಸದಾಕೆ ತನ್ನ ದುಡಿಮೆಯ ಹಣಕ್ಕೆ ಬಡ್ಡಿ ಪಡೆಯಲೂ ಸಹ ಈ ನ್ಯಾಯಾಲಯಕ್ಕೆ ಬರಬೇಕಿದೆ!" ಎಂದು ನ್ಯಾಯಮೂರ್ತಿಗಳು ಅಂಚೆ ಕಚೇರಿಯ ದುರ್ನಡತೆಯ ಬಗ್ಗೆ ಕಿಡಿಕಿಡಿಯಾದರು.