“ಅಧೀನ ಶ್ರೇಣಿಯ ಅಧಿಕಾರಿಯನ್ನು ಮೇಲಿನ ಶ್ರೇಣಿಗೆ ನೇಮಕ ಮಾಡುವಾಗ ಕಾರಣಗಳನ್ನು ನೀಡದ ಹೊರತು ಮುಖ್ಯಮಂತ್ರಿ ಸಹಿ ಹೊಂದಿದ ವರ್ಗಾವಣೆ ಆದೇಶವು ನ್ಯಾಯಸಮ್ಮತವಲ್ಲ” ಎಂದು ಈಚೆಗೆ ಕರ್ನಾಟಕ ಹೈಕೋರ್ಟ್ ಹೇಳಿದೆ.
ಕರ್ನಾಟಕ ಆಡಳಿತಾತ್ಮ ಸೇವೆಯ (ಹಿರಿಯ ಶ್ರೇಣಿ) ಅಧಿಕಾರಿ ಡಾ. ಪ್ರಜ್ಞಾ ಅಮ್ಮೆಂಬಳ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಕೆ ಸೋಮಶೇಖರ್ ಮತ್ತು ಕೆ ರಾಜೇಶ್ ರೈ ಅವರ ನೇತೃತ್ವದ ವಿಭಾಗೀಯ ಪೀಠವು ಪುರಸ್ಕರಿಸಿದೆ.
“ಮುಖ್ಯಮಂತ್ರಿಯ ಸಹಿ ವರ್ಗಾವಣೆ ಆದೇಶದಲ್ಲಿದ್ದರೂ ಸಂಬಂಧಿತ ಹುದ್ದೆಗೆ ಅರ್ಹರು ಇಲ್ಲದಿರುವುದರಿಂದ ಅಧೀನ ದರ್ಜೆಯ ಅಧಿಕಾರಿಯನ್ನು ನೇಮಕ ಮಾಡಲಾಗಿದೆ ಎಂಬುದಕ್ಕೆ ಸಂಬಂಧಿಸಿದ ಕಾರಣಗಳನ್ನು ಮುಖ್ಯಮಂತ್ರಿ ಗಮನಕ್ಕೆ ತರದಿರುವುದರಿಂದ ಅಂಥ ಆದೇಶವನ್ನು ನ್ಯಾಯಸಮ್ಮತ ಆದೇಶವೆನ್ನಲಾಗದು” ಎಂದು ನ್ಯಾಯಾಲಯ ಅವಲೋಕಿಸಿದೆ.
“ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಹೆಚ್ಚುವರಿ ನಿರ್ದೇಶಕರ ಹುದ್ದೆಯ ಅರ್ಹತೆ ಪ್ರಶ್ನೆಗೆ ಸಂಬಂಧಿಸಿದಂತೆ ಪ್ರಜ್ಞಾ ಅಮ್ಮೆಂಬಳ ಪರವಾಗಿ ಕಾನೂನು ಇದೆ. ಪಥರಾಜು ಅವರ ಆರಂಭಿಕ ನೇಮಕಾತಿಯನ್ನು ಪರಿಗಣಿಸಿದರೆ ಅರ್ಜಿದಾರರು ಸಹ ಅವರಂತೆಯೇ ಹುದ್ದೆಗೆ ಅರ್ಹರಾಗುತ್ತಾರೆ” ಎಂದು ನ್ಯಾಯಾಲಯ ಹೇಳಿದೆ.
“ಪದೋನ್ನತಿ ಲಾಭ ದೊರಕಿಸಿದರೆ (ಅಮ್ಮೆಂಬಳ) ಅವರು ಕೆಎಎಸ್‌ನ ಅದೇ ಶ್ರೇಣಿಯಲ್ಲಿದ್ದು, (ಹಿರಿಯ ಶ್ರೇಣಿ) ಪ್ರಭಾರದ ಮೇಲೆ ಆ ಹುದ್ದೆ ಅಲಂಕರಿಸಲು ಪ್ರಜ್ಞಾ ಅರ್ಹರಾಗಿದ್ದಾರೆ” ಎಂದು ಹೈಕೋರ್ಟ್ ಹೇಳಿದೆ. ಹೀಗಾಗಿ, ಅಮ್ಮೆಂಬಳ ಅವರ ವರ್ಗಾವಣೆ ಆದೇಶ ಊರ್ಜಿತವಾಗುತ್ತದೆ ಎಂದು ನ್ಯಾಯಾಲಯ ಹೇಳಿದೆ.
ಈ ಮಧ್ಯೆ, “ನ್ಯಾಯಾಲಯವು ಅಧೀನ ಶ್ರೇಣಿಯ ಅಧಿಕಾರಿಯನ್ನು ಮೇಲಸ್ತರದ ಹುದ್ದೆಗೆ ವರ್ಗಾವಣೆ ಮಾಡುವುದಕ್ಕೆ ಸಂಬಂಧಿಸಿದಂತೆ ಅಗತ್ಯ ಮಾರ್ಗಸೂಚಿ ಹೊರಡಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ. “ಯಾವ ಸಂದರ್ಭದಲ್ಲಿ ಅಧೀನ ದರ್ಜೆಯ ಅಧಿಕಾರಿಯನ್ನು ಮೇಲಸ್ತರದ ಹುದ್ದೆಗೆ ನೇಮಕ ಮಾಡಬಹುದು ಎಂಬುದಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ಮಾರ್ಗಸೂಚಿ ರೂಪಿಸಬೇಕು. ಮುಖ್ಯಮಂತ್ರಿ ಒಪ್ಪಿಗೆ ಪಡೆಯುವುದಕ್ಕೂ ಮುನ್ನ ಉನ್ನತ ಶ್ರೇಣಿಯ ಅಧಿಕಾರಿಗೆ ಮೀಸಲಾದ ಹುದ್ದೆಗೆ ಅಧೀನ ಶ್ರೇಣಿಯ ಅಧಿಕಾರಿಯನ್ನು ಏಕೆ ನೇಮಕ ಮಾಡಲಾಗುತ್ತಿದೆ ಎಂಬುದಕ್ಕೆ ಸಂಬಂಧಿಸಿದಂತೆ ಕಡ್ಡಾಯವಾಗಿ ಕಾರಣಗಳನ್ನು ನೀಡಬೇಕು” ಎಂದು ನ್ಯಾಯಾಲಯ ಆದೇಶದಲ್ಲಿ ಹೇಳಿದೆ.
ಪ್ರಕರಣದ ಹಿನ್ನೆಲೆ: ಅರ್ಜಿದಾರೆ ಪ್ರಜ್ಞಾ ಅಮ್ಮೆಂಬಳ ಅವರನ್ನು 2023ರ ಜುಲೈ 6ರಂದು ವರ್ಗಾವಣೆ ಮಾಡಿದ್ದ ಅಧಿಸೂಚನೆಯನ್ನು ಬದಿಗೆ ಸರಿಸಿ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಹೆಚ್ಚುವರಿ ನಿರ್ದೇಶಕ ವಿ ಪಥರಾಜು ಸಲ್ಲಿದ್ದ ಅರ್ಜಿಯನ್ನು ರಾಜ್ಯ ಆಡಳಿತಾತ್ಮಕ ನ್ಯಾಯ ಮಂಡಳಿಯು 2023ರ ಆಗಸ್ಟ್ 2ರಂದು ಪುರಸ್ಕರಿಸಿತ್ತು. ಇದನ್ನು ಅಮ್ಮೆಂಬಳ ಅವರು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.
2006ರಲ್ಲಿ ಅಮ್ಮೆಂಬಳ ಅವರು ನೇರ ನೇಮಕಾತಿಯ ಮೂಲಕ ತಹಶೀಲ್ದಾರ್ ಆಗಿ ಆಯ್ಕೆಯಾಗಿದ್ದರು. 2015ರಲ್ಲಿ ಅವರಿಗೆ ಕೆಎಎಸ್‌ಗೆ (ಕಿರಿಯ ಶ್ರೇಣಿ), ಆನಂತರ 2021ರ ಜನವರಿಯಲ್ಲಿ ಹಿರಿಯ ಶ್ರೇಣಿಗೆ ಪದನ್ನೋತಿ ನೀಡಲಾಗಿತ್ತು. 2023ರ ಜುಲೈನಲ್ಲಿ ಅಮ್ಮೆಂಬಳ ಅವರನ್ನು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಹೆಚ್ಚುವರಿ ನಿರ್ದೇಶಕರ ಹುದ್ದೆಗೆ ವರ್ಗಾವಣೆ ಮಾಡಲಾಗಿತ್ತು. ಈ ಹುದ್ದೆಯಲ್ಲಿದ್ದ ಪಥರಾಜು (ಅವರು ಸಹ ಕೆಎಎಸ್ ಹಿರಿಯ ಶ್ರೇಣಿಯ ಅಧಿಕಾರಿ) ಅವರು ಅಮ್ಮೆಂಬಳ ಅವರನ್ನು ಮುಖ್ಯಮಂತ್ರಿಯ ಸಮ್ಮತಿ ಪಡೆಯದೇ ವರ್ಗಾವಣೆ ಮಾಡಲಾಗಿದೆ ಎಂದು ನ್ಯಾಯ ಮಂಡಳಿಯಲ್ಲಿ ಪ್ರಶ್ನಿಸಿದ್ದರು.
ಇಲ್ಲಿ ವಾದಿಸಿದ್ದ ರಾಜ್ಯ ಸರ್ಕಾರವು ವರ್ಗಾವಣೆಗೂ ಮುನ್ನ ಮುಖ್ಯಮಂತ್ರಿಗಳ ಒಪ್ಪಿಗೆ ಪಡೆಯಲಾಗಿತ್ತು ಎಂದು ವಾದಿಸಿತ್ತು. ಈ ವಾದ ಆಲಿಸಿದ್ದ ನ್ಯಾಯ ಮಂಡಳಿಯು ಅಮ್ಮೆಂಬಳ ಅವರು ವರ್ಗಾವಣೆಗೊಂಡಿರುವ ಹುದ್ದೆ ಹೊಂದಲು ಅನರ್ಹರು ಎಂದು ಹೇಳಿ, ವರ್ಗಾವಣೆ ಆದೇಶ ಬದಿಗೆ ಸರಿಸಿತ್ತು. ಇದನ್ನು ಪ್ರಶ್ನಿಸಿ ಅಮ್ಮೆಂಬಳ ಹೈಕೋರ್ಟ್ ಕದತಟ್ಟಿದ್ದರು.