ಸಂತ್ರಸ್ತರ ನಿಕಟ ಸಂಬಂಧಿ ಎಂಬ ಕಾರಣಕ್ಕೆ ಅವರ ಸಾಕ್ಷ್ಯವನ್ನು ತಿರಸ್ಕರಿಸುವಂತಿಲ್ಲ ಎಂದು ಅಲಾಹಾಬಾದ್ ಹೈಕೋರ್ಟ್ ಇತ್ತೀಚೆಗೆ ಹೇಳಿದೆ [ಮನ್ವಿರ್ ಮತ್ತು ಉತ್ತರಪ್ರದೇಶ ಸರ್ಕಾರ ನಡುವಣ ಪ್ರಕರಣ].
ವೃದ್ಧೆಯೊಬ್ಬರನ್ನು ಅತ್ಯಾಚಾರಗೈದು ಹತ್ಯೆ ಮಾಡಲಾದ ಪ್ರಕರಣದ ವಿಚಾರಣೆ ವೇಳೆ ನ್ಯಾಯಮೂರ್ತಿಗಳಾದ ಸುನೀತ್ ಕುಮಾರ್ ಮತ್ತು ವಿಕ್ರಮ್ ಡಿ ಚೌಹಾಣ್ ಅವರಿದ್ದ ಪೀಠವು ಎಲ್ಲಾ ಸಾಕ್ಷಿಗಳು ಸಂತ್ರಸ್ತೆಯ ಸಂಬಂಧಿಕರಾಗಿರುವುದರಿಂದ ಸ್ವತಂತ್ರ ಸಾಕ್ಷಿಗಳಿಲ್ಲ ಎಂಬ ದೋಷಿಯ ಪರ ವಕೀಲರ ವಾದವನ್ನು ತಿರಸ್ಕರಿಸಿತು.
“ಮೃತ ವ್ಯಕ್ತಿಯ ಸಂಬಂಧಿಯಾಗಿರುವವರು ಆರೋಪಿಯನ್ನು ತಪ್ಪಾಗಿ ಸಿಲುಕಿಸುವ ಸಾಧ್ಯತೆ ಇದೆ ಎಂದ ಮಾತ್ರಕ್ಕೆ ತರ್ಕಬದ್ಧ ಮತ್ತು ನಂಬಲರ್ಹ ಸಾಕ್ಷ್ಯವನ್ನು ತಿರಸ್ಕರಿಸಲು ಅದು ಆಧಾರವಾಗದು” ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು.
ಕೊಲೆ ಮತ್ತು ಅತ್ಯಾಚಾರದ ಅಪರಾಧಗಳಿಗಾಗಿ ಅಪರಾಧಿಗೆ ಜೀವಾವಧಿ ಶಿಕ್ಷೆ ವಿಧಿಸಿ ವಿಚಾರಣಾ ನ್ಯಾಯಾಲಯವು ನೀಡಿದ ತೀರ್ಪಿನ ವಿರುದ್ಧ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲಾಗಿತ್ತು. ಮಾಹಿತಿದಾರನ 80 ವರ್ಷದ ತಾಯಿಯ ಮೇಲೆ ಅತ್ಯಾಚಾರ ಮತ್ತು ಕೊಲೆ ಮಾಡಿದ ಆರೋಪವನ್ನು ಮೇಲ್ಮನವಿದಾರ ಎದುರಿಸುತ್ತಿದ್ದ.
ಸಾಕ್ಷಿಯು ಕಳಂಕಿತವಾಗುವ ಸಾಧ್ಯತೆಯಿರುವ ಮೂಲಗಳಿಂದ ಬಂದಿರದಿದ್ದರೆ ಸಾಮಾನ್ಯವಾಗಿ ಸ್ವತಂತ್ರ ಎಂದು ಪರಿಗಣಿಸಲಾಗುತ್ತದೆ. ಸಾಮಾನ್ಯವಾಗಿ ನಿಕಟ ಸಂಬಂಧಿಗಳು ನಿಜವಾದ ಅರಪಾಧಿಯನ್ನು ಮರೆಮಾಚುವ ಇಲ್ಲವೇ ಮುಗ್ಧವ್ಯಕ್ತಿಗಳನ್ನು ಅಪರಾಧಿಗಳೆಂದು ಸಿಲುಕಿಸುವ ಕೊನೆಯ ವ್ಯಕ್ತಿ ಗಳಾಗಿರುತ್ತಾರೆ ಎಂದು ನ್ಯಾಯಾಲಯ ತಿಳಿಸಿದೆ.
ಆದೇಶದ ಪ್ರತಿಯನ್ನು ಇಲ್ಲಿ ಓದಿ: