EVMs and Madras High Court
EVMs and Madras High Court 
ಸುದ್ದಿಗಳು

ವೈಫೈ, ಇಲೆಕ್ಟ್ರಾನಿಕ್‌, ರೇಡಿಯೋ ಸಾಧನಗಳಿಂದ ಇವಿಎಂಗಳನ್ನು ತಿರುಚಲಾಗದು: ಮದ್ರಾಸ್‌ ಹೈಕೋರ್ಟ್‌ಗೆ ಆಯೋಗದ ವಿವರಣೆ

Bar & Bench

ವಿದ್ಯುನ್ಮಾನ ಮತಯಂತ್ರಗಳನ್ನು (ಇವಿಎಂ) ಯಾವುದೇ ತೆರನಾದ ವೈಫೈ, ರೇಡಿಯೊ ಸಾಧನಗಳಿಂದ ತಿರುಚಲಾಗದು ಮತ್ತು ಇವಿಎಂಗಳ ಕಾರ್ಯದಲ್ಲಿ ಮಧ್ಯಪ್ರವೇಶಿಸುವಷ್ಟು ವಿದ್ಯುನ್ಮಾನ ಯಂತ್ರಗಳು ಸಮರ್ಥವಾಗಿಲ್ಲ ಎಂದು ಮದ್ರಾಸ್‌ ಹೈಕೋರ್ಟ್‌ಗೆ ಮಂಗಳವಾರ ಭಾರತೀಯ ಚುನಾವಣಾ ಆಯೋಗ (ಇಸಿಐ) ಹೇಳಿದೆ.

ಮುಕ್ತ ಮತ್ತು ನ್ಯಾಯಸಮ್ಮತ ವಿಧಾನಸಭಾ ಚುನಾವಣೆ ನಡೆಸುವಂತೆ ಕೋರಿ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಪಕ್ಷ ಸಲ್ಲಿಸಿದ್ದ ಮನವಿಗೆ ಸಂಬಂಧಿಸಿದಂತೆ ನ್ಯಾಯಾಲಯದ ಪ್ರಶ್ನೆಗೆ ಪ್ರತ್ಯುತ್ತರವಾಗಿ ಕೇಂದ್ರ ಚುನಾವಣಾ ಆಯೋಗ ಸಲ್ಲಿಸಿದ್ದ ಅಫಿಡವಿಟ್‌ನಲ್ಲಿ ಮೇಲಿನಂತೆ ವಿವರಿಸಲಾಗಿದೆ.

ಇವಿಎಂಗಳ ಭದ್ರತೆ, ಮತದಾತ ಕೇಂದ್ರಗಳ ಮೇಲೆ ವಿಡಿಯೊ ಕಣ್ಗಾವಲು, ವಿವಿಪ್ಯಾಟ್‌ ಎಣಿಕೆ, ಮತಯಂತ್ರಗಳು ಎಷ್ಟು ಅವಧಿಯವು ಎನ್ನುವ ಮಾಹಿತಿ ಇತ್ಯಾದಿ ವಿಚಾರಗಳ ಕುರಿತು ಇಸಿಐ ನೀಡಿದ ಭರವಸೆಗಳನ್ನು ದಾಖಲಿಸಿಕೊಂಡಿರುವ ಮುಖ್ಯ ನ್ಯಾಯಮೂರ್ತಿ ಸಂಜೀಬ್‌ ಬ್ಯಾನರ್ಜಿ, ನ್ಯಾಯಮೂರ್ತಿ ಸೆಂಥಿಲ್‌ಕುಮಾರ್‌ ರಾಮಮೂರ್ತಿ ಅವರಿದ್ದ ಪೀಠವು ಪ್ರಕರಣವನ್ನು ವಿಲೇವಾರಿ ಮಾಡಿತು. ವಕೀಲರಾದ ಪಿ ವಿಲ್ಸನ್‌ ಅವರು ಡಿಎಂಕೆ ಪರ, ವಕೀಲ ನಿರಂಜನ್‌ ರಾಜಗೋಪಾಲನ್‌ ಅವರು ಇಸಿಐ ಪ್ರತಿನಿಧಿಸಿದ್ದರು.

ಇಸಿಐ ನೀಡಿದ  ಭರವಸೆಗಳು ಇಂತಿವೆ:

  • 12 ಪ್ರಮುಖ ರಾಜಕೀಯ ಪಕ್ಷಗಳ ಜೊತೆ ಸಮಾಲೋಚಿಸಿದ ನಂತರ ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಮತದಾನ ಕೇಂದ್ರಗಳ ಗುರುತಿಸುವಿಕೆ ಮಾಡಲಾಗಿದೆ.

  • ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಮತದಾನ ಕೇಂದ್ರಗಳಲ್ಲಿ ಸಿಸಿಟಿವಿ ಚಿತ್ರೀಕರಣ ಮತ್ತು ವೆಬ್‌ಕಾಸ್ಟಿಂಗ್‌ ವ್ಯವಸ್ಥೆ ಮಾಡಲಾಗಿದೆ.

  • 2017-2019ರ ನಡುವೆ ಉತ್ಪಾದಿಸಲಾದ ಎಂ3 ಮತದಾನ ಯಂತ್ರಗಳನ್ನು ಚುನಾವಣೆಗೆ ಬಳಸಲಾಗುವುದು. ಹಳೆಯ ಯಂತ್ರಗಳನ್ನು ಬಳಸುವುದಿಲ್ಲ.

  • ವಿವಿಪ್ಯಾಟ್‌ ಕೌಂಟಿಂಗ್‌: ಸುಪ್ರೀಂ ಕೋರ್ಟ್‌ ನಿರ್ದೇಶನದನ್ವಯ ಯಾದೃಚ್ಛಿಕವಾಗಿ ಮತಗಳನ್ನು ಎಣಿಕೆ ಮಾಡುವುದು ಅಭ್ಯರ್ಥಿಯ ಮನವಿಯ ಮೇರೆಗೆ ಚುನಾವಣಾಧಿಕಾರಿ ಯಾದೃಚ್ಛಿಕವಾಗಿ ಮತ ಎಣಿಕೆ ಮಾಡುವ ಅಧಿಕಾರದ ಮೇಲೆ ಪರಿಣಾಮ ಬೀರುವುದಿಲ್ಲ.

  • ಚುನಾವಣಾ ಸಂಹಿತೆಗೆ ಪೂರಕವಾಗಿ ಚುನಾವಣಾ ಪೂರ್ವದಲ್ಲಿ ಇವಿಎಂಗೆ ಭದ್ರತೆ ಒದಗಿಸಲಾಗುವುದು. ಯಾವುದೇ ತೆರನಾದ ವೈಫೈ ಅಥವಾ ರೇಡಿಯೊ ಸಾಧನಗಳಿಂದ ಇವಿಎಂ ತಿರುಚಲು ಸಾಧ್ಯವಿಲ್ಲ ಎಂದು ಆಯೋಗ ಹೇಳಿದೆ. ಆಯೋಗ ಪ್ರಸ್ತಾಪಿರುವ ಮೇಲಿನ ವಿಚಾರಗಳನ್ನು ಪರಿಗಣಿಸಿರುವ ಪೀಠವು ಪ್ರಕರಣವನ್ನು ವಿಲೇವಾರಿ ಮಾಡಿದೆ.