ಅಖಿಲ ಭಾರತ ವಕೀಲರ ಪರೀಕ್ಷೆ (ಎಐಬಿಇ) ಉತ್ತೀರ್ಣರಾಗದೆ ನಿಗದಿತ ಅವಧಿಯ ನಂತರವೂ ಕಾನೂನು ವೃತ್ತಿ ನಡೆಸುತ್ತಿರುವ ವಕೀಲರನ್ನು ಗುರುತಿಸಿ, ಅವರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಲು ಸೂಕ್ತ ವ್ಯವಸ್ಥೆ ರೂಪಿಸುವಂತೆ ಕರ್ನಾಟಕ ಹೈಕೋರ್ಟ್ ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿಗೆ (ಕೆಎಸ್ಬಿಸಿ) ನಿರ್ದೇಶಿಸಿದೆ.
ನ್ಯಾಯಮೂರ್ತಿ ಎಚ್ ಪಿ ಸಂದೇಶ್ ಅವರು ಅಕ್ಟೋಬರ್ 17ರಂದು ಹೊರಡಿಸಿದ ಆದೇಶದಲ್ಲಿ ಈ ನಿರ್ದೇಶನ ನೀಡಿದ್ದು, ಅಗತ್ಯ ವ್ಯವಸ್ಥೆ ರೂಪಿಸಲು ಪರಿಷತ್ತಿಗೆ 45 ದಿನಗಳ ಗಡುವು ವಿಧಿಸಿದ್ದಾರೆ.
“ವಕೀಲರನ್ನು ನೋಂದಾಯಿಸುವುದಷ್ಟೇ ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ಕರ್ತವ್ಯವಲ್ಲ. ವಕೀಲಿಕೆ ನಡೆಸಲು ಅರ್ಹರಾಗಿರುವವರು ಮತ್ತು ಅರ್ಹರಲ್ಲದವರ ದಾಖಲೆಯನ್ನು ನಿರ್ವಹಿಸುವುದೂ ಅದರ ಕರ್ತವ್ಯವಾಗಿದೆ. ಎಐಬಿಇ ಪರೀಕ್ಷೆಯಲ್ಲಿ ಉತ್ತೀರ್ಣರಾಗದೆ ಇಂತಹ ವ್ಯಕ್ತಿಗಳು ವಕೀಲಿಕೆ ಮುಂದುವರಿಸುತ್ತಿದ್ದರೆ, ಅವರನ್ನು ಗುರುತಿಸಲು ನಿರ್ದಿಷ್ಟ ವ್ಯವಸ್ಥೆ ರೂಪಿಸಿ, ಪತ್ತೆಹಚ್ಚಿ ತಕ್ಷಣ ಕ್ರಮ ಕೈಗೊಳ್ಳಬೇಕು” ಎಂದು ನ್ಯಾಯಾಲಯ ಹೇಳಿದೆ.
ವಕೀಲರಾಗಿ ನೋಂದಣಿ ಮಾಡಿಕೊಂಡ ಬಳಿಕ ಎರಡು ವರ್ಷಗಳೊಳಗೆ ಎಐಬಿಇ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದು ಕಡ್ಡಾಯವಾಗಿರುವುದರಿಂದ, ನಿಗದಿತ ಅವಧಿಯಲ್ಲಿ ಪರೀಕ್ಷೆ ಪಾಸಾಗದ ವಕೀಲರನ್ನು ಗುರುತಿಸಲು ಪರಿಣಾಮಕಾರಿ ವ್ಯವಸ್ಥೆ ಅಗತ್ಯ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ವಕೀಲರ ನೋಂದಣಿ ದಿನಾಂಕ ಮತ್ತು ಎರಡು ವರ್ಷಗಳ ಗಡುವು ಮುಕ್ತಾಯವಾಗುವ ದಿನಾಂಕವನ್ನು ಡಿಜಿಟಲ್ ರೂಪದಲ್ಲಿ ದಾಖಲಿಸಿಕೊಳ್ಳುವಂತೆ ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿಗೆ ನ್ಯಾಯಾಲಯ ಸೂಚಿಸಿದೆ.
“ನೋಂದಣಿಯಾದರೂ ವಕೀಲಿಕೆ ಮುಂದುವರಿಸಲು ಅಗತ್ಯ ಅರ್ಹತೆ ಪಡೆಯದ ವಕೀಲರನ್ನು ಪರಿಷತ್ತು ಗುರುತಿಸಬೇಕು. ಕಾನೂನುಬಾಹಿರ ವಕೀಲಿಕೆಯನ್ನು ತಡೆಯಲು ಅಂತಹವರ ಪಟ್ಟಿಯನ್ನು ಸಿದ್ಧಪಡಿಸಿ, ಅವರ ನೋಂದಣಿ ಅಮಾನತುಗೊಳಿಸುವ ಸಂಬಂಧ ಕ್ರಮ ಕೈಗೊಳ್ಳಬೇಕು” ಎಂದು ಆದೇಶದಲ್ಲಿ ತಿಳಿಸಲಾಗಿದೆ.
ವಕೀಲರನ್ನು ನೋಂದಾಯಿಸುವುದಷ್ಟೇ ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ಕರ್ತವ್ಯವಲ್ಲ; ವಕೀಲಿಕೆ ನಡೆಸಲು ಅರ್ಹರಾಗಿರುವವರು ಮತ್ತು ಅರ್ಹತೆ ಹೊಂದಿರದವರ ಪಟ್ಟಿಯನ್ನು ನಿರ್ವಹಿಸುವುದೂ ರಾಜ್ಯ ವಕೀಲರ ಪರಿಷತ್ತಿನ ಕರ್ತವ್ಯ.ಕರ್ನಾಟಕ ಹೈಕೋರ್ಟ್
ವಕೀಲರೊಬ್ಬರು ನೋಂದಣಿಯಾದ ಎರಡು ವರ್ಷಗಳೊಳಗೆ ಎಐಬಿಇ ಪರೀಕ್ಷೆಯಲ್ಲಿ ಉತ್ತೀರ್ಣರಾಗದಿದ್ದರೆ, ಆ ವಿಚಾರವನ್ನು ವ್ಯವಸ್ಥೆಯು ತಕ್ಷಣವೇ ಪರಿಷತ್ತಿನ ಗಮನಕ್ಕೆ ತರುವಂತಿರಬೇಕು. ಆ ಮೂಲಕ ಸಂಬಂಧಪಟ್ಟ ವಕೀಲರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಸಾಧ್ಯವಾಗಬೇಕು ಎಂದು ನ್ಯಾಯಾಲಯ ಹೇಳಿದೆ.
“ವಕೀಲಿಕೆ ಮುಂದುವರಿಸಲು ಅಗತ್ಯ ಅರ್ಹತೆ ಪಡೆಯದ ವ್ಯಕ್ತಿಗಳ ವಿರುದ್ಧ ಪರಿಷತ್ತು ತಕ್ಷಣ ಕ್ರಮ ಆರಂಭಿಸಬೇಕು. ಏಕೆಂದರೆ, ಇಂತಹ ಕೃತ್ಯವು ಇಡೀ ಸಮಾಜಕ್ಕೆ ವಿರುದ್ಧವಾದ ಅಪರಾಧವಾಗಿದೆ” ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ವಕೀಲರ ನೋಂದಣಿಗೆ ಸಂಬಂಧಿಸಿದ ಸಮಗ್ರ ದಾಖಲೆಯನ್ನು ನಿರ್ವಹಿಸುವುದರ ಜೊತೆಗೆ, ಸಂಬಂಧಪಟ್ಟ ವಕೀಲರು ಎಐಬಿಇ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆಯೇ ಎಂಬುದನ್ನು ಪರಿಶೀಲಿಸುವ ವ್ಯವಸ್ಥೆಯನ್ನೂ ರೂಪಿಸಬೇಕು ಎಂದು ನ್ಯಾಯಾಲಯ ನಿರ್ದೇಶಿಸಿದೆ.
ಈ ಸಂಬಂಧ ಭಾರತೀಯ ವಕೀಲರ ಪರಿಷತ್ತಿನ (ಬಿಸಿಐ) ನೆರವಿನೊಂದಿಗೆ ಎಐಬಿಇ ಪರೀಕ್ಷೆಯ ಫಲಿತಾಂಶಗಳನ್ನು ಪರಿಶೀಲಿಸಲು ಸೂಕ್ತ ಕಾರ್ಯವಿಧಾನ ರೂಪಿಸುವಂತೆ ಕೆಎಸ್ಬಿಸಿಗೆ ಸೂಚಿಸಲಾಗಿದೆ. ಈ ವ್ಯವಸ್ಥೆಯ ಕಾರ್ಯನಿರ್ವಹಣೆಯ ಕುರಿತು ಕಾಲಕಾಲಕ್ಕೆ ಪರಿಶೀಲನೆ ನಡೆಸುವಂತೆಯೂ ನ್ಯಾಯಾಲಯ ಆದೇಶಿಸಿದೆ.
ಆದರೆ, ಎಐಬಿಇ ಪರೀಕ್ಷೆಯಲ್ಲಿ ಉತ್ತೀರ್ಣರಾಗಿಲ್ಲ ಎಂಬ ಕಾರಣಕ್ಕೆ ಗುರುತಿಸಲಾದ ವಕೀಲರ ವಿರುದ್ಧ ಯಾವುದೇ ದಂಡನಾತ್ಮಕ ಕ್ರಮ ಕೈಗೊಳ್ಳುವ ಮೊದಲು, ಅವರಿಗೆ ತಮ್ಮ ವಾದ ಮಂಡಿಸಲು ಸಮರ್ಪಕ ಅವಕಾಶ ನೀಡಬೇಕು ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.
2011ರಲ್ಲಿ ವಕೀಲರಾಗಿ ನೋಂದಣಿಯಾದ ವ್ಯಕ್ತಿಯೊಬ್ಬರು ಎಐಬಿಇ ಪರೀಕ್ಷೆಯಲ್ಲಿ ಉತ್ತೀರ್ಣರಾಗದೆ ಸುಮಾರು 11 ವರ್ಷಗಳ ಕಾಲ ವಕೀಲಿಕೆ ನಡೆಸಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದ ಪ್ರಕರಣದ ವಿಚಾರಣೆ ವೇಳೆ ನ್ಯಾಯಾಲಯ ಈ ನಿರ್ದೇಶನಗಳನ್ನು ನೀಡಿದೆ.
ಬಂಗಾರಪೇಟೆಯ ನಿವಾಸಿಯೊಬ್ಬರು ಸಂಬಂಧಪಟ್ಟ ವಕೀಲರ ವಿರುದ್ಧ ಕ್ರಿಮಿನಲ್ ದೂರು ದಾಖಲಿಸಿ, ಎಐಬಿಇ ಪರೀಕ್ಷೆಯಲ್ಲಿ ಉತ್ತೀರ್ಣರಾಗದೆ ವಕೀಲಿಕೆ ನಡೆಸುವ ಮೂಲಕ ವಂಚನೆ ಎಸಗಿದ್ದಾರೆ ಎಂದು ಆರೋಪಿಸಿದ್ದರು.
ವಿಚಾರಣಾ ನ್ಯಾಯಾಲಯವು ಪ್ರಕರಣದ ಕುರಿತು ಕ್ರಿಮಿನಲ್ ತನಿಖೆ ನಡೆಸಲು ಆದೇಶಿಸಿದ ಬಳಿಕ, ಆರೋಪಿತ ವಕೀಲರು ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.
ತಮ್ಮ ವಿರುದ್ಧದ ಆರೋಪಗಳನ್ನು ನಿರಾಕರಿಸಿದ್ದ ವಕೀಲರು, ದುರುದ್ದೇಶದಿಂದ ತಮ್ಮ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ವಾದಿಸಿದ್ದರು. ತಮ್ಮ ವಕೀಲರ ನೋಂದಣಿ ಯಾವುದೇ ಷರತ್ತುಗಳಿಲ್ಲದೆ ನಡೆದಿತ್ತು ಎಂಬ ಪ್ರಾಮಾಣಿಕ ನಂಬಿಕೆಯಿಂದ ಹಲವು ವರ್ಷಗಳ ಕಾಲ ಎಐಬಿಇ ಪರೀಕ್ಷೆ ಬರೆಯದೆ ವಕೀಲಿಕೆ ನಡೆಸಿದ್ದಾಗಿ ಅವರು ಹೇಳಿದ್ದರು. ಬಳಿಕ 2021ರಲ್ಲಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವುದಾಗಿಯೂ ವಾದಿಸಿದ್ದರು.
ಎಐಬಿಇ ಪರೀಕ್ಷೆಯಲ್ಲಿ ಉತ್ತೀರ್ಣರಾಗದಿರುವ ವಿಚಾರವು ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ಶಿಸ್ತು ಪ್ರಾಧಿಕಾರ ಪರಿಶೀಲಿಸಬೇಕಾದ ವಿಷಯವಾಗಿದ್ದು, ಈ ಸಂಬಂಧ ಕ್ರಿಮಿನಲ್ ಪ್ರಕರಣ ದಾಖಲಿಸಲು ಸಾಧ್ಯವಿಲ್ಲ ಎಂಬ ವಾದವನ್ನೂ ನ್ಯಾಯಾಲಯ ತಿರಸ್ಕರಿಸಿದೆ.
“ಶಿಸ್ತು ಕ್ರಮ ಕೈಗೊಳ್ಳಲು ಪ್ರತ್ಯೇಕ ವ್ಯವಸ್ಥೆ ಇದೆ ಎಂಬ ಕಾರಣ ಮಾತ್ರಕ್ಕೆ, ಸ್ವತಂತ್ರವಾಗಿ ಕ್ರಿಮಿನಲ್ ಅಪರಾಧದ ಅಂಶಗಳನ್ನು ಹೊಂದಿರುವ ಕೃತ್ಯವನ್ನು ಪರಿಶೀಲಿಸುವ ಸಮರ್ಥ ಕ್ರಿಮಿನಲ್ ನ್ಯಾಯಾಲಯದ ಅಧಿಕಾರ ಮೊಟಕುಗೊಳ್ಳುವುದಿಲ್ಲ” ಎಂದು ನ್ಯಾಯಾಲಯ ಹೇಳಿದೆ.
ಹೀಗಾಗಿ, ಪ್ರಕರಣದ ತನಿಖೆಯನ್ನು ಮುಂದುವರಿಸಲು ಪೊಲೀಸರಿಗೆ ನ್ಯಾಯಾಲಯ ಅನುಮತಿ ನೀಡಿದೆ.
ಎಐಬಿಇ ಪರೀಕ್ಷೆಗೆ ಹಾಜರಾಗದೆಯೇ ಒಬ್ಬ ವಕೀಲರು ಒಂದು ದಶಕಕ್ಕೂ ಹೆಚ್ಚು ಕಾಲ ವಕೀಲಿಕೆ ನಡೆಸಲು ಸಾಧ್ಯವಾಗಿರುವುದು ದುರದೃಷ್ಟಕರ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಭವಿಷ್ಯದಲ್ಲಿ ಇಂತಹ ಪ್ರಕರಣಗಳನ್ನು ತ್ವರಿತವಾಗಿ ಗುರುತಿಸಿ, ಸಂಬಂಧಪಟ್ಟವರ ವಿರುದ್ಧ ಸಕಾಲದಲ್ಲಿ ಕ್ರಮ ಕೈಗೊಳ್ಳಲು ವ್ಯವಸ್ಥೆ ರೂಪಿಸುವಂತೆ ಕೆಎಸ್ಬಿಸಿಗೆ ನಿರ್ದೇಶಿಸಿದೆ.
ಪ್ರಕರಣದ ಮುಂದಿನ ವಿಚಾರಣೆ ನವೆಂಬರ್ 30ರಂದು ನಡೆಯಲಿದೆ.