Karnataka High Court
Karnataka High Court 
ಸುದ್ದಿಗಳು

ಇಡಬ್ಲುಎಸ್‌ ಸಮುಚ್ಚಯ ನಿರ್ಮಾಣ: ಕಾಮಗಾರಿ ಪೂರ್ಣಗೊಳಿಸಲು ಮೇವರಿಕ್‌ ಕಂಪೆನಿಗೆ 18 ತಿಂಗಳ ಗಡುವು ವಿಧಿಸಿದ ಹೈಕೋರ್ಟ್‌

Bar & Bench

ಬೆಂಗಳೂರಿನ ಕೋರಮಂಗಲದ ಈಜಿಪುರದಲ್ಲಿ ಆರ್ಥಿಕ ದುರ್ಬಲ ವರ್ಗದವರಿಗೆ (ಇಡಬ್ಲುಎಸ್) ವಿತರಿಸಬೇಕಾದ 1,512 ವಸತಿ ಗೃಹಗಳ ನಿರ್ಮಾಣ ಕಾಮಗಾರಿಯನ್ನು ಪೂರ್ಣಗೊಳಿಸಲು ಬಿಡಿಎ, ಬಿಬಿಎಂಪಿ ಮತ್ತು ಗುತ್ತಿಗೆದಾರ ಕಂಪೆನಿ ಮೆವರಿಕ್ ಹೋಲ್ಡಿಂಗ್ ಪ್ರೈವೇಟ್ ಲಿಮಿಟೆಡ್‌ಗೆ ಕರ್ನಾಟಕ ಹೈಕೋರ್ಟ್ 18 ತಿಂಗಳ ಗಡುವು ವಿಧಿಸಿದೆ.

ಕಾಮಗಾರಿ ವಿಳಂಬ ಪ್ರಶ್ನಿಸಿ ಕರ್ನಾಟಕ ಇಡಬ್ಲುಎಸ್ ಸಂಘಟನೆ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಅಶೋಕ್‌ ಎಸ್‌.ಕಿಣಗಿ ಅವರ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.

ವಿಚಾರಣೆ ವೇಳೆ ಬಿಬಿಎಂಪಿ, ಬಿಡಿಎ ಮತ್ತು ಮೇವರಿಕ್ ಕಂಪೆನಿಯು ಜಂಟಿಯಾಗಿ ಅಫಿಡವಿಟ್‌ ಸಲ್ಲಿಸಿದ್ದು, ವಸತಿ ಗೃಹಗಳ ನಿರ್ಮಾಣಕ್ಕೆ ಪರಿಷ್ಕೃತ ನಕ್ಷೆ ಮಂಜೂರಾತಿ ಕೋರಿ ಮೇವರಿಕ್ ಕಂಪೆನಿಯು ಬಿಡಿಎಗೆ ಮನವಿ ಸಲ್ಲಿಸಿದೆ. ಹೀಗಾಗಿ, ಪರಿಷ್ಕೃತ ನಕ್ಷೆ ಮಂಜೂರಾತಿ ಮತ್ತು ಕಾಮಗಾರಿ ಆರಂಭಿಸಲು ಅನುಮತಿ ಪತ್ರವನ್ನು ಬಿಡಿಎ ನೀಡಬೇಕಿದೆ. ಅವು ದೊರೆತ ನಂತರ ಕಾಮಗಾರಿ ಆರಂಭಿಸಲಾಗುವುದು. ಅದರಂತೆ ಕಾಮಗಾರಿ ಪೂರ್ಣಗೊಳಿಸಲು 24 ತಿಂಗಳ ಕಾಲಾವಕಾಶ ನೀಡಬೇಕು ಎಂದು ಕೋರಲಾಯಿತು.

ಇದಕ್ಕೆ ಆಕ್ಷೇಪಿಸಿದ ಅರ್ಜಿದಾರ ಪರ ವಕೀಲ ಅನ್ನಿಯನ್ ಜೋಸೆಫ್ ಅವರು ವಸತಿ ಗೃಹ ನಿರ್ಮಾಣ ಕಾರ್ಯ ಪೂರ್ಣಗೊಳಿಸಲು 2017ರಲ್ಲಿಯೇ 18 ತಿಂಗಳ ಕಾವಲಾವಕಾಶವನ್ನು ಹೈಕೋರ್ಟ್ ನೀಡಿತ್ತು. ಇದೀಗ ಮತ್ತೆ 24 ತಿಂಗಳ ಕಾಲಾವಕಾಶ ಕೋರುತ್ತಿರುವುದು ಸರಿಯಲ್ಲ ಎಂದರು.

ವಾದ-ಪ್ರತಿವಾದ ಆಲಿಸಿದ ಪೀಠವು ಮೇವರಿಕ್ ಕಂಪೆನಿಯ ಮನವಿಯನ್ನು ಪರಿಗಣಿಸಿ ಶೀಘ್ರವೇ ಪರಿಷ್ಕೃತ ನಕ್ಷೆ ಮಂಜೂರಾತಿಯನ್ನು ಬಿಡಿಎ ನೀಡಬೇಕು. ಪರಿಷ್ಕೃತ ನಕ್ಷೆ ಮಂಜೂತಿ ನೀಡಿದ ದಿನದಿಂದ 15 ದಿನದೊಳಗೆ ಬಿಬಿಎಂಪಿಯು ಕಾಮಗಾರಿ ಆರಂಭಿಸಲು ಅನುಮತಿ ಪತ್ರ ವಿತರಿಸಬೇಕು. ಅನುಮತಿ ಪತ್ರ ದೊರೆತ ನಂತರದ 18 ತಿಂಗಳ ಒಳಗೆ ಮೇವರಿಕ್ ಕಂಪೆನಿಯು ವಸತಿ ಗೃಹಗಳ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸಬೇಕು. ಕಾಮಗಾರಿ ಪ್ರಗತಿ ಕುರಿತು ಆರು ತಿಂಗಳಿಗೊಮ್ಮೆ ನ್ಯಾಯಾಲಯಕ್ಕೆ ವರದಿ ಸಲ್ಲಿಸಬೇಕು ಎಂದು ನಿರ್ದೇಶಿಸಿತು.

ಪ್ರಕರಣದ ಹಿನ್ನೆಲೆ: ಈಜಿಪುರದಲ್ಲಿ ಆರ್ಥಿಕವಾಗಿ ದುರ್ಬಲವಾದವರಿಗೆ 1,512 ವಸತಿ ಗೃಹ ನಿರ್ಮಿಸಲು ಯೋಜಿಸಿದ್ದು, ನಕ್ಷೆ ಅನುಮೋದನೆ ಆದ 18 ತಿಂಗಳ ಒಳಗೆ ವಸತಿಗೃಹ ನಿರ್ಮಾಣ ಕಾರ್ಯ ಪೂರ್ಣಗೊಳಿಸಬೇಕು ಎಂದು ಬಿಬಿಎಂಪಿ, ಬಿಡಿಎ ಮತ್ತು ಕಾಮಗಾರಿಯ ಗುತ್ತಿಗೆ ಪಡೆದ ಕಂಪೆನಿ ಮೇವರಿಕ್ ಹೋರ್ಡಿಂಗ್ಸ್ ಪ್ರೈ.ಲಿಗೆ 2017ರ ರ ಮೇ 31ರಂದು ಹೈಕೋರ್ಟ್ ಆದೇಶಿಸಿತ್ತು. ಆದರೆ, ಈವರೆಗೂ ಕಾಮಗಾರಿ ಪೂರ್ಣಗೊಳಿಸದ ಹಿನ್ನೆಲೆಯಲ್ಲಿ ಅರ್ಜಿದಾರರು ಮತ್ತೆ ಹೈಕೋರ್ಟ್‌ಗೆ ಮನವಿ ಸಲ್ಲಿಸಿದ್ದಾರೆ.