EWS, AG KK Venugopal. Supreme Court
EWS, AG KK Venugopal. Supreme Court 
ಸುದ್ದಿಗಳು

ಪರಿಶಿಷ್ಟರು, ಹಿಂದುಳಿದ ವರ್ಗದ ಹಕ್ಕುಗಳನ್ನು ಇಡಬ್ಲ್ಯೂಎಸ್ ಮೀಸಲಾತಿ ಕಸಿಯದು: ಸುಪ್ರೀಂನಲ್ಲಿ ಎಜಿ ಪ್ರತಿಪಾದನೆ

Bar & Bench

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಇತರೆ ಹಿಂದುಳಿದ ವರ್ಗಗಳಿಗೆ ಒದಗಿಸಲಾದ ಮೀಸಲಾತಿಗೆ ತೊಂದರೆ ಉಂಟುಮಾಡದೇ ಇರುವುದರಿಂದ ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ ಶೇ 10ರಷ್ಟು ಮೀಸಲಾತಿ ನೀಡುವ ಆದೇಶ ಸಂವಿಧಾನದ ಮೂಲ ರಚನೆಯನ್ನು ಉಲ್ಲಂಘಿಸಿಲ್ಲ ಎಂದು ಅಟಾರ್ನಿ ಜನರಲ್‌ ಕೆ ಕೆ ವೇಣುಗೋಪಾಲ್‌ ಅವರು ಇಡಬ್ಲ್ಯೂಸ್‌ ಮೀಸಲಾತಿಯ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿದ್ದ ಅರ್ಜಿಗಳ ವಿಚಾರಣೆಯ ನಾಲ್ಕನೇ ದಿನವಾದ ಬುಧವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದರು.

ಇಡಬ್ಲ್ಯೂಎಸ್‌ ಮೀಸಲಾತಿ ವಿಕಸಿತ ಕಲ್ಪನೆ ಎಂದ ಎಜಿ ಅವರು ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಯು ಯು ಲಲಿತ್, ನ್ಯಾಯಮೂರ್ತಿಗಳಾದ ದಿನೇಶ್ ಮಹೇಶ್ವರಿ, ಎಸ್ ರವೀಂದ್ರ ಭಟ್, ಬೇಲಾ ಎಂ ತ್ರಿವೇದಿ ಹಾಗೂ ಜೆ ಬಿ ಪರ್ದಿವಾಲಾ ಅವರಿದ್ದ ಐವರು ಸದಸ್ಯರ ಸಾಂವಿಧಾನಿಕ ಪೀಠಕ್ಕೆ ತಿಳಿಸಿದರು.

"ಇದು ಎಸ್‌ಸಿ ಎಸ್‌ಟಿ ಒಬಿಸಿಗೆ ನೀಡಲಾದ ಹಕ್ಕುಗಳನ್ನು ಕಸಿದುಕೊಳ್ಳುವುದಿಲ್ಲ. ಇದು ಶೇ 50ರಷ್ಟು ಮೀಸಲಾತಿಯಿಂದ ಹೊರತಾದದ್ದು. ಇದು (ಸಂವಿಧಾನದ) ಮೂಲ ರಚನೆಯನ್ನು ಮೀರುವ ಮತ್ತು ಉಲ್ಲಂಘಿಸುವ ಪ್ರಶ್ನೆ ಉದ್ಭವಿಸುವುದಿಲ್ಲ" ಎಂದು ಅವರು ಹೇಳಿದರು.

“ಸಾಮಾನ್ಯ ವರ್ಗದಲ್ಲಿನ ಇಡಬ್ಲ್ಯೂಎಸ್‌ಗೆ ಹೋಲಿಸಿದರೆ ಎಸ್‌ಸಿ/ಎಸ್‌ಟಿ ವರ್ಗಗಳಿಗೆ ಅಧಿಕ ಪ್ರಯೋಜನಗಳು ಇವೆ" ಎಂದು ಎಜಿ ವಿವರಿಸಿದರು.

ಹಿರಿಯ ವಕೀಲ ಗೋಪಾಲ್‌ ಶಂಕರನಾರಾಯಣನ್‌ ವಾದ ಮಂಡಿಸಿ ಐತಿಹಾಸಿಕ ಅಸಮಾನತೆಗಳು ಅಸ್ತಿತ್ವದಲ್ಲಿದ್ದರೂ, ಆದಾಯ ಅಸಮಾನತೆಗಿಂತ ದೊಡ್ಡ ಅಸಮಾನತೆ ಇಲ್ಲ. ಸಂಸತ್ತು ಇಡಬ್ಲ್ಯೂಎಸ್‌ ಮೀಸಲಾತಿ ಜಾರಿಗೆ ತರುವ ಮೂಲಕ ಸಮಸ್ಯೆ ಸರಿಪಡಿಸಲು ಯತ್ನಿಸಿದೆ ಎಂದರು.

ಐದನೇ ದಿನವಾದ ಇಂದು (ಬುಧವಾರ) ಕೂಡ ಪ್ರಕರಣದ ವಿಚಾರಣೆ ನಡೆಯುತ್ತಿದ್ದು ಎಜಿ ಅವರು ತಮ್ಮ ವಾದ ಮುಂದುವರೆಸಿದ್ದಾರೆ.