Supreme Court
Supreme Court 
ಸುದ್ದಿಗಳು

ಇಡಬ್ಲ್ಯೂಎಸ್ ಮೀಸಲಾತಿ: ಮರುಪರಿಶೀಲನಾ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್‌

Bar & Bench

ಮೇಲ್ಜಾತಿಗಳಲ್ಲಿ ಆರ್ಥಿಕವಾಗಿ ದುರ್ಬಲ ವರ್ಗಕ್ಕೆ ಸೇರಿದವರಿಗೆ ಶೇ 10ರಷ್ಟು ಮೀಸಲಾತಿ ಒದಗಿಸುವ 103ನೇ ಸಾಂವಿಧಾನಿಕ ತಿದ್ದುಪಡಿಯ ಸಾಂವಿಧಾನಿಕ ಸಿಂಧುತ್ವ ಎತ್ತಿ ಹಿಡಿದಿದ್ದ ಸುಪ್ರೀಂ ಕೋರ್ಟ್‌ ತೀರ್ಪು ಪ್ರಶ್ನಿಸಿ ಸಲ್ಲಿಸಲಾಗಿದ್ದ ಮರುಪರಿಶೀಲನಾ ಅರ್ಜಿಗಳನ್ನು ಸುಪ್ರೀಂ ಕೋರ್ಟ್‌ ಇತ್ತೀಚೆಗೆ ತಿರಸ್ಕರಿಸಿದೆ [ಸೊಸೈಟಿ ಫಾರ್‌ ರೈಟ್ಸ್‌ ಆಫ್‌ ಬ್ಯಾಕ್‌ವರ್ಡ್‌ ಕಮ್ಯುನಿಟೀಸ್‌ ಮತ್ತು ಜನಹಿತ್‌ ಅಭಿಯಾನ್‌ ಇನ್ನಿತರರ ನಡುವಣ ಪ್ರಕರಣ].

ಮೇ 9ರಂದು ನೀಡಲಾಗಿರುವ ಆದೇಶದಲ್ಲಿ, ಭಾರತದ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ದಿನೇಶ್ ಮಹೇಶ್ವರಿ, ಎಸ್ ರವೀಂದ್ರ ಭಟ್, ಬೇಲಾ ಎಂ ತ್ರಿವೇದಿ ಹಾಗೂ ಜೆ ಬಿ ಪರ್ದಿವಾಲಾ ಅವರಿದ್ದ ಪೀಠ ನವೆಂಬರ್ 2022ರಂದು ತಾನು ನೀಡಿದ್ದ ತೀರ್ಪಿನಲ್ಲಿ ಯಾವುದೇ ದೋಷವಿಲ್ಲ ಎಂದು ಹೇಳಿದೆ.

"ಮರುಪರಿಶೀಲನಾ ಅರ್ಜಿಗಳನ್ನು ಪರಿಶೀಲಿಸಿದಾಗ, ಹಿಂದಿನ ತೀರ್ಪಿನಲ್ಲಿ ಯಾವುದೇ ದೋಷ ಕಂಡುಬಂದಿಲ್ಲ. ಸುಪ್ರೀಂ ಕೋರ್ಟ್ ನಿಯಮಗಳು 2013 ರ ಆದೇಶ XLVII ನಿಯಮ 1 ರ ಅಡಿಯಲ್ಲಿ ಪರಿಶೀಲನೆಗೆ ಯಾವುದೇ ವಾದ ಮಂಡನೆಯಾಗಿಲ್ಲ. ಆದ್ದರಿಂದ ಮರುಪರಿಶೀಲನಾ ಅರ್ಜಿಗಳನ್ನು ವಜಾಗೊಳಿಸಲಾಗಿದೆ" ಎಂದು ನ್ಯಾಯಾಲಯ ತೀರ್ಪು ನೀಡಿದೆ.

ಮರುಪರಿಶೀಲನಾ ಅರ್ಜಿಗಳನ್ನು ಮುಕ್ತ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಬೇಕು ಎಂಬ ಮನವಿಯನ್ನೂ ನ್ಯಾಯಾಲಯ ತಿರಸ್ಕರಿಸಿದೆ.

ಸುಪ್ರೀಂ ಕೋರ್ಟ್‌ನ ಸಂವಿಧಾನ ಪೀಠವು ಕಳೆದ ವರ್ಷ ನವೆಂಬರ್ 7ರಂದು ಇಡಬ್ಲ್ಯೂಎಸ್ ಮೀಸಲಾತಿಯ ಸಾಂವಿಧಾನಿಕ ಸಿಂಧುತ್ವವನ್ನು ಎತ್ತಿ ಹಿಡಿದಿತ್ತು. ಅಂದಿನ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಯು ಯು ಲಲಿತ್ ಮತ್ತು ನ್ಯಾಯಮೂರ್ತಿಗಳಾದ ದಿನೇಶ್ ಮಹೇಶ್ವರಿ, ಎಸ್ ರವೀಂದ್ರ ಭಟ್, ಬೇಲಾ ಎಂ ತ್ರಿವೇದಿ ಮತ್ತು ಜೆ ಬಿ ಪರ್ದಿವಾಲಾ ಅವರನ್ನೊಳಗೊಂಡ ಪೀಠ ಈ ತೀರ್ಪು ನೀಡಿತ್ತು.

ಆಗಿನ ಸಿಜೆಐ ಯು ಯು ಲಲಿತ್ ಮತ್ತು ನ್ಯಾಯಮೂರ್ತಿ ರವೀಂದ್ರ ಭಟ್ ಬಹುಮತದ ತೀರ್ಪಿನ ಬಗ್ಗೆ ಭಿನ್ನಾಭಿಪ್ರಾಯ ವ್ಯಕ್ತಪಡಿಸಿ ನಾಲ್ಕು ಪ್ರತ್ಯೇಕ ತೀರ್ಪುಗಳನ್ನು ನೀಡಿದ್ದರು. ಎಸ್‌ಸಿ, ಎಸ್‌ಟಿ ಹಾಗು ಇತರೆ ಹಿಂದುಳಿದ ವರ್ಗಗಳನ್ನು ಹೊರಗಿಟ್ಟು ಇಡಬ್ಲ್ಯೂಎಸ್‌ ಮೀಸಲಾತಿ ಜಾರಿಗೆ ತರಲಾಗಿದೆ ಎಂದು ಭಿನ್ನ ತೀರ್ಪಿನಲ್ಲಿ ವಿವರಿಸಲಾಗಿತ್ತು. ಇದನ್ನು ಅನುಮತಿಸಲಾಗದು. ಅನುಮತಿಸಿದರೆ ಅಂತಹ ಸಮುದಾಯಗಳ ವಿರುದ್ಧ ತಾರತಮ್ಯ ಎಸಗಿದಂತಾಗುತ್ತದೆ ಎಂದು ಪ್ರತಿಪಾದಿಸಲಾಗಿತ್ತು.

ತೀರ್ಪಿನ ವಿರುದ್ಧ ಮಧ್ಯಪ್ರದೇಶ ಕಾಂಗ್ರೆಸ್ ನಾಯಕಿ ಡಾ. ಜಯ ಠಾಕೂರ್ ಮತ್ತು ಡಿಎಂಕೆ ಪಕ್ಷ  ಮರುಪರಿಶೀಲನಾ ಅರ್ಜಿಗಳನ್ನು ಸಲ್ಲಿಸಿತ್ತು.