ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ (ಇಡಬ್ಲ್ಯುಎಸ್) ಶೇ 10ರಷ್ಟು ಮೀಸಲಾತಿ ಒದಗಿಸುವುದರ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿದ್ದ ಅರ್ಜಿಗಳಿಗೆ ಸಂಬಂಧಿಸಿದಂತೆ ಭಾರತದ ಅಟಾರ್ನಿ ಜನರಲ್ (ಎಜಿ) ಕೆ ಕೆ ವೇಣುಗೋಪಾಲ್ ಅವರು ಸೂಚಿಸಿದ ಮೂರು ವಿಷಯಗಳನ್ನು ಆಧರಿಸಿ ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಲಿದೆ.
ಎಜಿ ಸೂಚಿಸಿದ ನಾಲ್ಕು ವಿಷಯಗಳ ಪೈಕಿ ಮೂರರಲ್ಲಿ ವಿಚಾರಣೆ ನಡೆಸುವುದಾಗಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಯು ಯು ಲಲಿತ್ ನ್ಯಾಯಮೂರ್ತಿಗಳಾದ ದಿನೇಶ್ ಮಹೇಶ್ವರಿ, ಎಸ್ ರವೀಂದ್ರ ಭಟ್, ಬೇಲಾ ಎಂ ತ್ರಿವೇದಿ ಹಾಗೂ ಜೆ ಬಿ ಪರ್ದಿವಾಲಾ ಅವರಿರುವ ಸಾಂವಿಧಾನಿಕ ಪೀಠ ಗುರುವಾರ ಹೇಳಿತ್ತು.
"ಎಜಿ ಸೂಚಿಸಿದ ಮೊದಲ 3 ವಿಚಾರಗಳು ಪ್ರಕರಣದಲ್ಲಿ ಉದ್ಭವಿಸುವ ಸಮಸ್ಯೆಗಳಾಗಿವೆ. ನಾವು ಎಜಿ ಸೂಚಿಸಿದ ಮೊದಲ 3 ವಿಷಯಗಳಿಗೆ ಸಂಬಂಧಿಸಿದಂತೆ ವಿಚಾರಣೆ ಮುಂದುವರೆಸುತ್ತೇವೆ ”ಎಂದು ನ್ಯಾಯಾಲಯ ಹೇಳಿದೆ.
ಮೂರು ವಿಷಯಗಳು
ಆರ್ಥಿಕ ಮಾನದಂಡಗಳ ಆಧಾರದ ಮೇಲೆ ಮೀಸಲಾತಿ ಸೇರಿದಂತೆ ವಿಶೇಷ ನಿಯಮಾವಳಿ ರೂಪಿಸಲು ಸರ್ಕಾರಕ್ಕೆ ಅನುಮತಿ ನೀಡುವ ಮೂಲಕ ಸಂವಿಧಾನದ 103ನೇ ತಿದ್ದುಪಡಿಯು ಸಂವಿಧಾನದ ಮೂಲ ರಚನೆಯನ್ನು ಉಲ್ಲಂಘಿಸುತ್ತದೆ ಎನ್ನಬಹುದೇ?
ಸಂವಿಧಾನದ 103ನೇ ತಿದ್ದುಪಡಿಯು ಖಾಸಗಿ ಅನುದಾನರಹಿತ ಸಂಸ್ಥೆಗಳ ಪ್ರವೇಶಕ್ಕೆ ಸಂಬಂಧಿಸಿದಂತೆ ವಿಶೇಷ ನಿಯಮಾವಳಿ ರೂಪಿಸಲು ಸರ್ಕಾರಕ್ಕೆ ಅನುಮತಿ ನೀಡುವ ಮೂಲಕ ಸಂವಿಧಾನದ ಮೂಲ ರಚನೆಯನ್ನು ಉಲ್ಲಂಘಿಸುತ್ತದೆ ಎನ್ನಬಹುದೇ?
ಸಂವಿಧಾನದ 103ನೇ ತಿದ್ದುಪಡಿಯು ಎಸ್‌ಇಬಿಸಿಗಳು/ಒಬಿಸಿಗಳು/ಎಸ್‌ಸಿಗಳು/ಎಸ್‌ಟಿಗಳನ್ನು ಇಡಬ್ಲ್ಯೂಎಸ್ ಮೀಸಲಾತಿ ವ್ಯಾಪ್ತಿಯಿಂದ ಹೊರಗಿಡುವಲ್ಲಿ ಸಂವಿಧಾನದ ಮೂಲ ರಚನೆಯನ್ನು ಉಲ್ಲಂಘಿಸುತ್ತದೆ ಎನ್ನಬಹುದೇ?
ಮೀಸಲಾತಿಗೆ ಆರ್ಥಿಕ ವರ್ಗೀಕರಣವೇ ಏಕೈಕ ಆಧಾರವಾಗಿರಬಾರದು ಎಂಬ ಕಾರಣಕ್ಕಾಗಿ ಸಂವಿಧಾನದ (103ನೇ ತಿದ್ದುಪಡಿ) ಕಾಯಿದೆ- 2019ರ ಸಿಂಧುತ್ವ ಪ್ರಶ್ನಿಸಿ ಎನ್‌ಜಿಒಗಳಾದ ಜನ್‌ಹಿತ್ ಅಭಿಯಾನ್ ಮತ್ತು ಯೂತ್ ಫಾರ್ ಈಕ್ವಾಲಿಟಿ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನ್ಯಾಯಾಲಯದಲ್ಲಿ ನಡೆಯುತ್ತಿದೆ.